ಅಲಹಾಬಾದ್ ಬ್ಯಾಂಕ್: 1,700 ಕೋಟಿ ಮೊತ್ತದ ವಂಚನೆ ಪ್ರಕರಣ

Update: 2019-07-14 18:17 GMT

ಹೊಸದಿಲ್ಲಿ, ಜು.14: ದಿವಾಳಿಯಾಗಿರುವ ಸಂಸ್ಥೆಯೊಂದು ಅಲಹಾಬಾದ್ ಬ್ಯಾಂಕ್‌ನಿಂದ ಸುಮಾರು 1,700 ಕೋಟಿ ರೂ. ಸಾಲ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಭೂಷಣ್ ಪವರ್ ಆ್ಯಂಡ್ ಸ್ಟೀಲ್ ಎಂಬ ಸಂಸ್ಥೆ ಬ್ಯಾಂಕಿನಿಂದ ಪಡೆದಿರುವ 1,700 ಕೋಟಿ ರೂ. ಸಾಲವನ್ನು ಬೇರೆ ಉದ್ದೇಶಗಳಿಗೆ ಅಕ್ರಮವಾಗಿ ಬಳಸಿಕೊಂಡಿದ್ದು, ಮರುಪಾವತಿಸದೆ ವಂಚಿಸಿದೆ ಎಂದು ಅಲಹಾಬಾದ್ ಬ್ಯಾಂಕ್ ಶನಿವಾರ ರಿಸರ್ವ್ ಬ್ಯಾಂಕ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಸುಳ್ಳು ದಾಖಲೆಪತ್ರಗಳನ್ನು ಒದಗಿಸಿ ಒಕ್ಕೂಟ ಬ್ಯಾಂಕ್‌ನಿಂದ ಅಕ್ರಮವಾಗಿ ಸಾಲ ಪಡೆದ ಭೂಷಣ್ ಸಂಸ್ಥೆ ಬಳಿಕ ಆ ಹಣವನ್ನು ಇತರ ಉದ್ದೇಶಗಳಿಗೆ ಬಳಸಿಕೊಂಡಿದೆ ಎಂದು ಅಲಹಾಬಾದ್ ಬ್ಯಾಂಕ್ ಹೇಳಿದೆ.

ಭೂಷಣ್ ಪವರ್ ಆ್ಯಂಡ್ ಸ್ಟೀಲ್ ಸಂಸ್ಥೆ ಭಾರತದಲ್ಲಿ ಅತ್ಯಧಿಕ ಸಾಲಗಾರನಾಗಿರುವ ಸಂಸ್ಥೆಗಳಲ್ಲಿ ಒಂದಾಗಿದ್ದು, ಸಾಲ ವಸೂಲು ಪ್ರಕ್ರಿಯೆಗಾಗಿ ದಿವಾಳಿತನ ನ್ಯಾಯಾಲಯಕ್ಕೆ ರಿಸರ್ವ್ ಬ್ಯಾಂಕ್ ಸಲ್ಲಿಸಿರುವ 12 ಸಂಸ್ಥೆಗಳ ಪಟ್ಟಿಯಲ್ಲಿ ಈ ಸಂಸ್ಥೆಯ ಹೆಸರೂ ಇದೆ. ಕೆಟ್ಟ ಸಾಲಗಳ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳಲು ಅನುಕೂಲವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸರಕಾರ 2016ರಲ್ಲಿ ನೂತನ ದಿವಾಳಿತನ ಪರಿಹಾರ ನಿಯಮವನ್ನು ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News