ಬಿಜೆಪಿ ಶಾಸಕನ ಪುತ್ರಿಯ ಪತಿಗೆ ಕೋರ್ಟ್ ನಲ್ಲೇ ಹಲ್ಲೆ

Update: 2019-07-15 16:58 GMT

ಲಕ್ನೊ, ಜು.15: ಅನ್ಯಜಾತಿಯ ವ್ಯಕ್ತಿಯನ್ನು ವಿವಾಹವಾಗಿದ್ದ ಉತ್ತರಪ್ರದೇಶದ ಬಿಜೆಪಿ ಶಾಸಕನ ಪುತ್ರಿಯ ಪತಿಯ ಮೇಲೆ ಅಲಹಾಬಾದ್ ಹೈಕೋರ್ಟ್ ಆವರಣದಲ್ಲಿ ಸೋಮವಾರ ಹಲ್ಲೆ ನಡೆಸಲಾಗಿದೆ.

ವಕೀಲರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಉತ್ತರಪ್ರದೇಶದ ಬರೇಲಿ ಕ್ಷೇತ್ರದ ಶಾಸಕ ರಾಜೇಶ್ ಮಿಶ್ರಾರ ಪುತ್ರಿ 23 ವರ್ಷದ ಸಾಕ್ಷಿ ಮಿಶ್ರ ಮನೆಯವರ ಇಚ್ಛೆಗೆ ವಿರುದ್ಧವಾಗಿ 29 ವರ್ಷದ ಅಜಿತೇಶ್ ಕುಮಾರ್ ಎಂಬಾತನನ್ನು ಜುಲೈ 4ರಂದು ದೇವಸ್ಥಾನದಲ್ಲಿ ವಿವಾಹವಾಗಿದ್ದಳು. ಬಳಿಕ ತನಗೆ ಹಾಗೂ ಪತಿಗೆ ಜೀವಬೆದರಿಕೆ ಇದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಳು.

ಅನ್ಯಜಾತಿಯ ವ್ಯಕ್ತಿಯನ್ನು ಮದುವೆಯಾಗಿರುವ ಬಗ್ಗೆ ತಂದೆ ಅಸಮಾಧಾನಗೊಂಡಿದ್ದು, ಅವರು ಹಾಗೂ ಸಹೋದರ ತನ್ನ ಪತಿಗೆ ಜೀವಬೆದರಿಕೆ ಒಡ್ಡಿದ್ದಾರೆ. ಇದರಿಂದ ಹೆದರಿ ತಾವು ತಲೆತಪ್ಪಿಸಿಕೊಂಡಿದ್ದೇವೆ. ಆದರೆ ತಂದೆ ಕಳುಹಿಸಿರುವ ಗೂಂಡಾಗಳು ತಮ್ಮನ್ನು ಬೆನ್ನಟ್ಟಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಳು.

 “ಪಪ್ಪಾ, ದಯವಿಟ್ಟು ನಮ್ಮಷ್ಟಕ್ಕೇ ನಮ್ಮನ್ನು ಬದುಕಲು ಬಿಡಿ. ನಾನು ಅಜಿತೇಶ್‌ನೊಂದಿಗೆ ಖುಷಿಯಾಗಿ ಸ್ವತಂತ್ರವಾಗಿ ಬದುಕುತ್ತೇನೆ. ಆತನ ಮನೆಯವರೂ ತುಂಬಾ ಒಳ್ಳೆಯವರು. ಅವರು ಪ್ರಾಣಿಗಳಲ್ಲ. ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ. ಒಂದು ವೇಳೆ ಅಜಿತೇಶ್‌ಗೆ ಏನಾದರೂ ಆದರೆ ಅದಕ್ಕೆ ನೀವು, ವಿಕೀ ಭರತೌಲ್ ಮತ್ತು ರಾಜೀವ್ ರಾಣಾ ಜವಾಬ್ದಾರರು” ಎಂದು ವೀಡಿಯೊದಲ್ಲಿ ಹೇಳಿಕೆ ನೀಡಿದ್ದಾರೆ.

 ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕೆಂದು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಪತಿಯೊಂದಿಗೆ ಹಾಜರಾಗಿದ್ದರು. ಅರ್ಜಿದಾರರು ಪ್ರಾಪ್ತ ವಯಸ್ಕರಾಗಿರುವುದರಿಂದ ತಮ್ಮ ಬದುಕಿನ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳಲು ಸಮರ್ಥರಾಗಿದ್ದಾರೆ ಎಂದು ತೀರ್ಪು ನೀಡಿದ ನ್ಯಾಯಾಲಯ, ದಂಪತಿಗೆ ಭದ್ರತೆ ಒದಗಿಸುವಂತೆ ಹಾಗೂ ಇವರ ವಿಷಯದಲ್ಲಿ ಮಧ್ಯಪ್ರವೇಶಿಸದಂತೆ ಶಾಸಕ ರಾಜೇಶ್ ಮಿಶ್ರಾಗೆ ಸೂಚಿಸಿದೆ. ಬಳಿಕ ಕೋರ್ಟ್‌ರೂಂನಿಂದ ಹೊರಬರುತ್ತಿದ್ದಂತೆಯೇ ಅಜಿತೇಶ್ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ವಿಷಯವನ್ನು ದಂಪತಿ ತಕ್ಷಣ ನ್ಯಾಯಾಲಯದ ಗಮನಕ್ಕೆ ತಂದರು. ಆಗ ಪೊಲೀಸ್ ಅಧೀಕ್ಷಕರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡ ನ್ಯಾಯಾಧೀಶರು, ದಂಪತಿ ತಮಗಿಷ್ಟ ಬಂದೆಡೆ ತೆರಳಲು ಸೂಕ್ತ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿದರು.

ಜಾತಿಯ ಹಿನ್ನೆಲೆಯಲ್ಲಿ ತಾನು ಮದುವೆಯನ್ನು ವಿರೋಧಿಸಿಲ್ಲ. ಪುತ್ರಿ ಸಾಕ್ಷಿ ಹಾಗೂ ಅಜಿತೇಶ್ ನಡುವಿನ ವಯಸ್ಸಿನ ಅಂತರ ಹಾಗೂ ಅಜಿತೇಶ್‌ಗೆ ಇರುವ ಆದಾಯವನ್ನು ಗಮನಿಸಿ ತಾನು ಪುತ್ರಿಯ ವಿವಾಹವನ್ನು ವಿರೋಧಿಸಿದ್ದೆ ಎಂದು ಶಾಸಕ ರಾಜೇಶ್ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News