ವಿದೇಶಗಳಿಗೆ ಬೀಫ್ ರಫ್ತು ಮತ್ತಷ್ಟು ಹೆಚ್ಚಿಸಲು ಮುಂದಾದ ಮೋದಿ ಸರಕಾರ

Update: 2019-07-15 07:58 GMT
Photo: alnasirexports.com

ಹೊಸದಿಲ್ಲಿ, ಜು.15: ಕೇಂದ್ರದ ನರೇಂದ್ರ ಮೋದಿ ಸರಕಾರ ತನ್ನ ಎರಡನೇ ಅವಧಿಯಲ್ಲಿ ದೇಶದ ಎಮ್ಮೆ ಮಾಂಸ ರಫ್ತನ್ನು ಗಣನೀಯವಾಗಿ ಹೆಚ್ಚಿಸಲು ಆಸಕ್ತವಾಗಿದೆ.

ತನ್ನ ಮೊದಲೇ ಸಚಿವ ಸಂಪುಟ ಸಭೆಯಲ್ಲಿಯೇ ಮೋದಿ ಸರಕಾರ ದೇಶದ ಜಾನುವಾರುಗಳನ್ನು ಕಾಡುವ ಕಾಲು ಬಾಯಿ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು 13,343 ಕೋಟಿ ರೂ. ಮೀಸಲಿರಿಸಿದೆ. ಇಲ್ಲಿನ ಪಶುಗಳನ್ನು ಕಾಡುತ್ತಿದ್ದ ಕಾಲು ಬಾಯಿ ರೋಗದಿಂದಾಗಿಯೇ ಚೀನಾ ದೇಶವು ಭಾರತದಿಂದ ಬೀಫ್ ಆಮದು ಮಾಡುವುದಕ್ಕೆ ತಡೆ ಹೇರಿದ್ದರಿಂದ ಹಾಗೂ ಈಗ ಈ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿರುವುದರಿಂದ ಭಾರತದ ಬೀಫ್ ರಫ್ತು ಮೇಲಿನ ನಿಯಂತ್ರಣವನ್ನು ಚೀನಾ ಕೈಬಿಡುವ ಸಾಧ್ಯತೆಯಿದೆ.

ಭಾರತದ ಎಮ್ಮೆಯ ಮಾಂಸ ಮುಖ್ಯವಾಗಿ ಏಷ್ಯಾದ ದೇಶಗಳಲ್ಲಿ ಜನಪ್ರಿಯವಾಗಿದ್ದು, ಅದರ ಅಗ್ಗದ ದರಗಳೂ ಇದಕ್ಕೆ ಕಾರಣವಾಗಿವೆ. ಆದರೆ ಎಮ್ಮೆಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗದಿಂದಾಗಿ ಯುರೋಪ್ ದೇಶಗಳೂ ಭಾರತದಿಂದ ಬೀಫ್ ಖರೀದಿಸುತ್ತಿರಲಿಲ್ಲ.

ತೆಲಂಗಾಣ ಮತ್ತು ಹೈದರಾಬಾದ್ ರಾಜ್ಯಗಳನ್ನು ಸದ್ಯದಲ್ಲಿಯೇ ಕಾಲುಬಾಯಿ ರೋಗ ಮುಕ್ತವೆಂದು ಘೋಷಿಸಲಾಗುವುದು. ನಂತರ  ಈಗ ಬೀಫ್ ರಫ್ತಿನ ಮೇಲೆ ನಿಯಂತ್ರಣ ಹೇರಿರುವ ರಾಷ್ಟ್ರಗಳಿಗೂ ಬೀಫ್ ರಫ್ತು ಮಾಡಬಹುದಾಗಿದೆ ಎಂದು ಪಶು ಸಂಗೋಪನಾ, ಹೈನುಗಾರಿಕೆ ಹಾಗೂ ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ತರುಣ್ ಶ್ರೀಧರ್ ಹೇಳಿದ್ದಾರೆ. ಸರಕಾರದ ಯೋಜನೆಯಂತೆ ದನಗಳು, ಎತ್ತುಗಳು ಹಾಗೂ ಎಮ್ಮೆಗಳು ಸೇರಿದಂತೆ 30 ಕೋಟಿ ಪಶುಗಳಿಗೆ ಕಾಲುಬಾಯಿ ರೋಗದ ಲಸಿಕೆ ನೀಡುವ ಯೋಜನೆಯಿದೆ.

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು ಮಾಡಲಾಗಿದ್ದು, ಇದು ಅದಕ್ಕಿಂತ ಹಿಂದಿನ 10 ವರ್ಷಗಳ ಅವಧಿಯಲ್ಲಿಯೇ ಗರಿಷ್ಠ. ಆದರೆ 2015-16ರಲ್ಲಿ  13.1 ಲಕ್ಷ ಮೆಟ್ರಿಕ್  ಟನ್ ಆಗಿದ್ದರೆ, ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಮತ್ತೆ ಬೀಫ್ ರಫ್ತು ಏರಿಕೆಯಾಗಿದ್ದು, 2016-17ರಲ್ಲಿ  13.3 ಲಕ್ಷ ಮೆಟ್ರಿಕ್ ಟನ್ನಿನಷ್ಟು ಏರಿಕೆಯಾಗಿದೆ. ಆರ್ಥಿಕ ವರ್ಷ 2017-18ರಲ್ಲಿ ರಫ್ತು 13.5 ಲಕ್ಷ ಮೆಟ್ರಿಕ್ ಟನ್ನಿಗೆ ಏರಿಕೆಯಾಗಿದೆ.

ಸದ್ಯ ಭಾರತ ಗರಿಷ್ಠ ಬೀಫ್ ರಫ್ತು ವಿಯೆಟ್ನಾಂ ದೇಶಕ್ಕೆ ಮಾಡುತ್ತಿದ್ದು, 2018ರಲ್ಲಿ 11,914 ಕೋಟಿ ರೂ. ಮೊತ್ತದ ಬೀಫ್ ರಫ್ತು ಮಾಡಿದೆ. ಮಲೇಷ್ಯಾಗೆ 2,574 ಕೋಟಿ ರೂ. ಮೌಲ್ಯದ  ಬೀಫ್ ರಫ್ತು ಮಾಡಲಾಗಿದ್ದರೆ, ಇಂಡೊನೇಷ್ಯಾಗೆ 2,267 ಕೋಟಿ ರೂ. ಮೌಲ್ಯದ ಬೀಫ್ ರಫ್ತುಗೊಳಿಸಲಾಗಿದೆ.

ಕೃಪೆ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News