‘ಸೂಪರ್ ಓವರ್’, ‘6ಕ್ಕೆ 16’, ‘10ಕ್ಕೆ 2’: ಅಚ್ಚರಿ ಮೂಡಿಸಿವೆ ಆರ್ಚರ್ ರ ಹಳೆಯ ಟ್ವೀಟ್ ಗಳು!

Update: 2019-07-15 17:05 GMT

2019ರ ಕ್ರಿಕೆಟ್ ವಿಶ್ವಕಪ್ ಫೈನಲ್ ನ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಜಯಿಸಿದ್ದು, ಪ್ರಪ್ರಥಮ ಬಾರಿ ವಿಶ್ವಕಪ್ ಎತ್ತಿ ಹಿಡಿದಿದೆ. ಭಾರೀ ಕುತೂಹಲ ಕೆರಳಿಸಿದ್ದ ಈ ಪಂದ್ಯದ ಅಂತಿಮ ಘಟ್ಟ ಅತ್ಯಂತ ರೋಚಕವಾಗಿತ್ತು. ಇಂಗ್ಲೆಂಡ್ ಗೆದ್ದೇಬಿಟ್ಟಿತು ಎನ್ನುವಷ್ಟರಲ್ಲಿ ಪಂದ್ಯ ಟೈ ಆಗಿತ್ತು. ನಂತರ ನಡೆದದ್ದು 'ಸೂಪರ್ ಓವರ್'. ಇದರ ಫಲಿತಾಂಶ ಕೂಡ ಟೈ ಆಗಿತ್ತು. ಆದರೆ ಹೆಚ್ಚಿನ ಬೌಂಡರಿ ನಿಯಮಾನುಸಾರ ಇಂಗ್ಲೆಂಡ್ ಗೆದ್ದಿತ್ತು.

'ಸೂಪರ್ ಓವರ್'ನಲ್ಲಿ ಸೂಪರ್ ಬೌಲಿಂಗ್ ಮೂಲಕ ಗಮನ ಸೆಳೆದದ್ದು ಇಂಗ್ಲೆಂಡ್ ನ ಬೌಲರ್ ‘ಜೋಫ್ರಾ ಆರ್ಚರ್’. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ಚರ್ ಅವರ ಹಳೆಯ ಟ್ವೀಟ್ ಗಳು ಇದೀಗ ಭಾರೀ ಕುತೂಹಲ ಸೃಷ್ಟಿಸಿದೆ. 2013, 2014, 2015 ಹೀಗೆ ಆರ್ಚರ್ ಬೇರೆ ಬೇರೆ ವರ್ಷಗಳಲ್ಲಿ ಮಾಡಿರುವ ಕೆಲ ಟ್ವೀಟ್ ಗಳು ವಿಶ್ವಕಪ್ ನ ಫೈನಲ್ ಪಂದ್ಯ ಸೇರಿದಂತೆ ಕೆಲ ಪಂದ್ಯಗಳೊಂದಿಗೆ ಸಂಬಂಧ ಹೊಂದಿದೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಗೂ ಮೊದಲೇ ಆರ್ಚರ್ ಗೆ ಇದೆಲ್ಲಾ ತಿಳಿದಿತ್ತೇ ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ‘ಟೈಮ್ ಮೆಶಿನ್’ (ಹಾಲಿವುಡ್ ಸಿನೆಮಾಗಳಲ್ಲಿ ಭವಿಷ್ಯಕ್ಕೆ ಹೋಗಿ ಬರುವ ಮೆಶಿನ್ ಎನ್ನುವ ಕಲ್ಪನೆ) ಇದೆ ಎನ್ನುವುದಕ್ಕೆ ಇವರೇ ಸಾಕ್ಷಿ ಎಂದಿದ್ದಾರೆ.

ಆರ್ಚರ್ ಅವರ ಅಚ್ಚರಿಯ ಟ್ವೀಟ್ ಗಳಿಗೆ ಉದಾಹರಣೆಗಳು ಈ ಕೆಳಗಿವೆ.

►ಯಾರೂ ಎಣಿಸದ ರೀತಿಯಲ್ಲಿ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ನಡೆಯಿತು. 2015 ಜುಲೈ 5ರಂದು ಆರ್ಚರ್ ಮಾಡಿದ ಟ್ವೀಟ್ ಹೀಗಿದೆ.. “ಸೂಪರ್ ಓವರ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ” (ವಿಶೇಷ ಎಂದರೆ 2019ರ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡಿದ್ದು ಆರ್ಚರ್)

2013 ಎಪ್ರಿಲ್ 14ರಂದು ಆರ್ಚರ್ ಟ್ವೀಟ್ ಮಾಡಿದ್ದು ಹೀಗೆ.. “6ಕ್ಕೆ 16”. ಫೈನಲ್ ಪಂದ್ಯದ ಸೂಪರ್ ಓವರ್ ನಲ್ಲಿ 6 ಎಸೆತಗಳಲ್ಲಿ ನ್ಯೂಝಿಲ್ಯಾಂಡ್ ಗಳಿಸಬೇಕಾಗಿದ್ದು 16 ರನ್ ಗಳನ್ನು .. ಇಲ್ಲೂ ಕೂಡ 6ಕ್ಕೆ 16!!!

2014ರ ಮಾರ್ಚ್ 25ರಂದು ಮಾಡಿರುವ ಟ್ವೀಟ್ ನಲ್ಲಿ ಆರ್ಚರ್ ಹೀಗೆ ಹೇಳಿದ್ದಾರೆ. “ಈ ಪಂದ್ಯವನ್ನು ನ್ಯೂಝಿಲ್ಯಾಂಡ್ ಸೋತದ್ದಾದರೂ ಹೇಗೆ?!”, ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ ಹಲವರ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ ಇದೇ ಅಲ್ಲವೇ?, ಹಾಗಾದರೆ ಆರ್ಚರ್ 2014ರಲ್ಲೇ ಹೀಗೆ ಪ್ರಶ್ನಿಸಿದ್ದು ಹೇಗೆ???

ಇದಿಷ್ಟೇ ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಹಲವು ವರ್ಷಗಳ ಹಿಂದೆ ಆರ್ಚರ್ ಮಾಡಿರುವ ಟ್ವೀಟ್ ಗಳಿಗೂ ಇರುವ ಸಂಬಂಧದ ಬಗ್ಗೆಯೂ ನೆಟ್ಟಿಗರು ತಲೆಕೆರೆದುಕೊಳ್ಳುತ್ತಿದ್ದಾರೆ

►ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಫಿಂಚ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯಲ್ಲಿ ತನ್ನ ಮೊದಲ ಎಸೆತದಲ್ಲೇ ಫಿಂಚ್ ರನ್ನು ಆರ್ಚರ್ ಔಟ್ ಮಾಡಿದರು.

2014ರ ಮೇ 10ರಂದು ಆರ್ಚರ್ ಮಾಡಿದ ಟ್ವೀಟ್ ‘ಫಿಂಚ್ ಗೋಸ್’

►ನಂತರ ಕ್ರಿಸ್ ವೋಕ್ಸ್ ಡೇವಿಡ್ ವಾರ್ನರ್ ರ ವಿಕೆಟ್ ಕಿತ್ತರು. ಇದಕ್ಕೆ ಸಂಬಂಧಿಸಿ ನೆಟ್ಟಿಗರು ಆರ್ಚರ್ ರ ಮತ್ತೊಂದು ಹಳೆಯ ಟ್ವೀಟನ್ನು ಕಂಡುಹಿಡಿದಿದ್ದಾರೆ. ಆ ಟ್ವೀಟ್ ಹೀಗಿದೆ. “ವೋಕ್ಸ್ ಗೆ ಒಂದು ಸಿಕ್ಕಿತು”…. ಈ ಟ್ವೀಟ್ ಮಾಡಿದ ದಿನಾಂಕ 2015ರ ಜನವರಿ 20.

►ಈ ಎರಡೂ ವಿಕೆಟ್ ಗಳನ್ನು ಕಳೆದುಕೊಂಡಾಗ ಆಸ್ಟ್ರೇಲಿಯಾದ ಸ್ಕೋರ್ 2/10…. 2013ರ ನವೆಂಬರ್ 24ರಂದು ಆರ್ಚರ್ ಮಾಡಿದ್ದ ಟ್ವೀಟ್ “10ಕ್ಕೆ 2”…!

►ಆರ್ಚರ್ ರ 8ನೆ ಓವರ್ ನ ಕೊನೆಯ ಬಾಲ್ ನಲ್ಲಿ ಆಸ್ಟ್ರೇಲಿಯಾದ ಆಟಗಾರ ಕೇರಿಯವರಿಗೆ ಗಾಯವಾಗಿತ್ತು. ಅವರ ಗಲ್ಲಕ್ಕೆ ಬಾಲ್ ಅಪ್ಪಳಿಸಿದ್ದು, ರಕ್ತ ಒಸರಿತ್ತು. ಬಾಲ್ ವೇಗಕ್ಕೆ ಹೆಲ್ಮೆಟ್ ಕೂಡ ಹಾರಿತ್ತು. 2013 ಡಿಸೆಂಬರ್ 17ರಂದು ಆರ್ಚರ್ ಮಾಡಿರುವ ಟ್ವೀಟ್ ಹೀಗಿದೆ. “ಆತನಿಗೆ ಗಾಯವಾಯಿತೇ?” 2015ರ ಮಾರ್ಚ್ 1ರಂದು ಮಾಡಿರುವ ಟ್ವೀಟ್… “ಅದು ಹೆಲ್ಮೆಟ್ ಗೆ ಬಲವಾಗಿ ಅಪ್ಪಳಿಸಿತ್ತು”…!

►ಆಸ್ಟ್ರೇಲಿಯಾದ ಸ್ಕೋರ್ ಬೋರ್ಡ್ 14/3 ಆಗಿದ್ದಾಗ, ಕ್ರೀಸ್ ಗೆ ಆಗಮಿಸಿದ ಸ್ಟೀವ್ ಸ್ಮಿತ್ ತಂಡಕ್ಕೆ ನೆರವಾದರು. 119 ಬಾಲ್ ಗಳೆನ್ನುದುರಿಸಿದ ಅವರು 85 ರನ್ ಗಳನ್ನು ಗಳಿಸಿದರು. 2014 ಡಿಸೆಂಬರ್ 9ರಂದು ಆರ್ಚರ್ “ಶಾಟ್ ಸ್ಮಿತ್” ಎಂದು ಟ್ವೀಟ್ ಮಾಡಿದ್ದರು.

►ಸ್ಮಿತ್ ಒಂದೆಡೆ ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಅವರಿಗೆ ಯಾರೂ ಸಾಥ್ ನೀಡಲಿಲ್ಲ. ಕೊನೆಗೆ ಮ್ಯಾಕ್ಸ್ ವೆಲ್ ಕೊಂಚ ಭರವಸೆ ಮೂಡಿಸಿದರು. 2015ರ ಎಪ್ರಿಲ್ 10ರಂದು ಆರ್ಚರ್ ಮಾಡಿರುವ ಟ್ವೀಟ್, “ಕಮ್ ಮ್ಯಾಕ್ಸ್ ವೆಲ್ ಬಿಗ್ ಸ್ಟಫ್ ಹಿಯರ್”

►ನಂತರ ಮ್ಯಾಕ್ಸ್ ವೆಲ್ ಕೂಡ ಔಟಾದರು. “ಮ್ಯಾಕ್ಸ್ ವೆಲ್ ಯಾಕೆ?” ಎಂದು 2014ರ ಸೆಪ್ಟಂಬರ್ 18ರಂದು ಆರ್ಚರ್ ಟ್ವೀಟ್ ಮಾಡಿದ್ದರು.

ಇಷ್ಟೇ ಅಲ್ಲದೆ ಇದೇ ರೀತಿಯ ಆರ್ಚರ್ ಅವರ ಹಲವು ಟ್ವೀಟ್ ಗಳಿಗೂ ವಿಶ್ವಕಪ್ ಪಂದ್ಯಗಳಿಗೂ ಸಂಬಂಧವಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಆದರೆ ಇದೆಲ್ಲವೂ ಕಾಕತಾಳೀಯವಾಗಿದ್ದು, ಆರ್ಚರ್ ಅವರು ಬೇರೆ ಬೇರೆ ವರ್ಷಗಳಲ್ಲಿ ಈ ಟ್ವೀಟ್ ಗಳನ್ನು ಮಾಡಿದ್ದಾರೆ. ಬೇರೆ ಬೇರೆ ಘಟನೆಗಳಿಗೆ ಸಂಬಂಧಿಸಿ ಈ ಟ್ವೀಟ್ ಗಳನ್ನು ಅವರು ಮಾಡಿದ್ದಿರಬಹುದು. ಆದರೆ ವಿಶ್ವಕಪ್ ಪಂದ್ಯಗಳೊಂದಿಗೆ ಈ ಟ್ವೀಟ್ ಗಳಿಗಿರುವ ಸಂಬಂಧ ಕಾಕತಾಳೀಯ ಮಾತ್ರ. ಏನೇ ಆದರೂ ಆರ್ಚರ್ ಬೌಲಿಂಗ್ ನಲ್ಲಿ ಮಾತ್ರವಲ್ಲ ಟ್ವಿಟರ್ ನಲ್ಲೂ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News