ಮದ್ಯಪಾನದಿಂದ ಸಾವು: ದೇಶಕ್ಕೆಷ್ಟು ದುಬಾರಿ ಗೊತ್ತೇ?

Update: 2019-07-16 03:51 GMT

ಹೊಸದಿಲ್ಲಿ, ಜು.16: ದೇಶದಲ್ಲಿ 2050ರೊಳಗೆ 258 ದಶಲಕ್ಷ ಮಂದಿ ಆಲ್ಕೋಹಾಲ್ ಸಂಬಂಧಿ ರೋಗಗಳಿಂದ ಜೀವ ಕಳೆದುಕೊಳ್ಳುವ ಸಾಧ್ಯತೆ ಇದ್ದು, ದೇಶದ ಜಿಡಿಪಿಗೆ ಪ್ರತಿ ವರ್ಷ ಇದರಿಂದ ಶೇಕಡ 1.45ರಷ್ಟು ನಷ್ಟವಾಗುವ ನಿರೀಕ್ಷೆ ಇದೆ.

ಆದಾಗ್ಯೂ ಆಲ್ಕೋಹಾಲ್‌ನಿಂದ ಆಗುವ ಆರ್ಥಿಕ ಹಾಗೂ ಆರೋಗ್ಯ ಸಂಬಂಧಿ ದುಷ್ಪರಿಣಾಮವನ್ನು ನಿವಾರಿಸಿಕೊಂಡರೆ 552 ದಶಲಕ್ಷ ಗುಣಮಟ್ಟ ಹೊಂದಾಣಿಕೆಯ ಜೀವಿತ ವರ್ಷಗಳಷ್ಟು ಲಾಭವಾಗಲಿದೆ ಎಂದು ಮೂವರು ಭಾರತೀಯ ವೈದ್ಯರು ಮತ್ತು ಇಬ್ಬರು ಸಾರ್ವಜನಿಕ ಆರೋಗ್ಯ ಸಂಶೋಧಕರು ಔಷಧ ನೀತಿ ಕುರಿತ ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ ಪ್ರತಿಪಾದಿಸಿದ್ದಾರೆ.

ಆಲ್ಕೋಹಾಲ್ ಸೇವನೆ ಪರಿಣಾಮದಿಂದ ಆಗುವ ಲಿವರ್ ಕಾಯಿಲೆ, ಕ್ಯಾನ್ಸರ್ ಮತ್ತು ರಸ್ತೆ ಅಪಘಾತದ ಅಂಶಗಳನ್ನು ಪರಿಗಣಿಸಿ ಈ ಅಂದಾಜು ಮಾಡಲಾಗಿದೆ.

"ಭಾರತದಲ್ಲಿ ಆಲ್ಕೋಹಾಲ್ ಸೇವನೆಯಿಂದ ದೇಶದ ಮೇಲಾಗುವ ಆರೋಗ್ಯ ಮತ್ತು ಆರ್ಥಿಕ ಹೊರೆ" ಎಂಬ ಶೀರ್ಷಿಕೆಯ ಪ್ರಬಂಧದಲ್ಲಿ ಈ ಅಂಶವನ್ನು ಪ್ರತಿಪಾದಿಸಲಾಗಿದೆ. ಆಲ್ಕೋಹಾಲ್ ಸೇವನೆಯಿಂದ ಆಗುವ ರೋಗಗಳ ಹಿನ್ನೆಲೆಯಲ್ಲಿ 5.7 ಕೋಟಿ ಮಂದಿಗೆ ತುರ್ತು ನೆರವಿನ ಅಗತ್ಯವಿದೆ ಎಂಬ ಅಂಶ ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮೀಕ್ಷೆಯಲ್ಲಿ ವ್ಯಕ್ತವಾದ ಬೆನ್ನಲ್ಲೇ ಈ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಸಾಮಾಜಿಕ ನ್ಯಾಯ ಸಚಿವಾಲಯಕ್ಕಾಗಿ ಎಐಐಎಂಎಸ್‌ನ ರಾಷ್ಟ್ರೀಯ ಔಷಧ ಅವಲಂಬನೆ ಚಿಕಿತ್ಸಾ ಕೇಂದ್ರ ಈ ಸಮೀಕ್ಷೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News