ಜೆಎನ್‌ಯು ಪ್ರವೇಶ ಪರೀಕ್ಷೆ ಪಾಸಾದ ಅದೇ ವಿವಿಯ ಸೆಕ್ಯುರಿಟಿ ಗಾರ್ಡ್!

Update: 2019-07-16 05:35 GMT
ಚಿತ್ರ ಕೃಪೆ: hindustantimes

ಹೊಸದಿಲ್ಲಿ, ಜು.16: ಮೂವತ್ನಾಲ್ಕು ವರ್ಷದ ರಾಮಜಲ್ ಮೀನಾ 2014ರಲ್ಲಿ ರಾಜಧಾನಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಸೆಕ್ಯುರಿಟಿ ಗಾರ್ಡ್ ಆಗಿ ಪ್ರವೇಶಿಸಿದಾಗ ತಾನು ಅದೇ ವಿಶ್ವವಿದ್ಯಾಲಯದಲ್ಲಿ ಮುಂದೊಂದು ದಿನ ವಿದ್ಯಾರ್ಥಿಯಾಗಿ ಪ್ರವೇಶ ಪಡೆಯಬಹುದೆಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಆದರೆ ಕಳೆದ ವರ್ಷ ರಾಜಸ್ಥಾನದ ಕರೌಲಿ ಮೂಲದ ಈತ ಜೆಎನ್‌ಯು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಬಿ.ಎ. ರಷ್ಯನ್ (ಹಾನರ್ಸ್) ಪದವಿಗೆ ಪ್ರವೇಶ ಪಡೆದಿದ್ದಾನೆ.

‘‘ಇಲ್ಲಿನ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನನ್ನನ್ನು ಪ್ರೋತ್ಸಾಹಿಸಿದ್ದಾರೆ, ಈಗ ಎಲ್ಲರೂ ನನ್ನನ್ನು ಅಭಿನಂದಿಸುತ್ತಿದ್ದಾರೆ. ರಾತ್ರಿ ಬೆಳಗಾಗುವುದರೊಳಗಾಗಿ ಖ್ಯಾತಿ ಪಡೆದಿದ್ದೇನೆಂದು ಅನಿಸುತ್ತದೆ’’ ಎಂದು ಮೀನಾ ಸಂತೋಷದಿಂದ ಹೇಳುತ್ತಾನೆ.

ದಿನಗೂಲಿ ಕಾರ್ಮಿಕರೊಬ್ಬರ ಪುತ್ರನಾಗಿರುವ ಮೀನಾ ತನ್ನ ಗ್ರಾಮವಾದ ಭಜೇರಾದ ಸರಕಾರಿ ಶಾಲೆಯಲ್ಲಿ ವಿದ್ಯಾಬ್ಯಾಸ ಪಡೆದಿದ್ದರೂ ಹತ್ತಿರದ ಕಾಲೇಜು ಗ್ರಾಮದಿಂದ 28ರಿಂದ 30 ಕಿ.ಮೀ. ದೂರವಿದ್ದುದರಿಂದ ಹಾಗೂ ತಂದೆಗೆ ಸಹಾಯ ಮಾಡಬೇಕಿದ್ದುದರಿಂದ ಆತ ಶಿಕ್ಷಣ ಮುಂದುವರಿಸುವುದು ಕಷ್ಟವಾಗಿತ್ತು. ಆದರೂ ಛಲ ಬಿಡದೆ ರಾಜಸ್ಥಾನ ವಿವಿಯ ದೂರ ಶಿಕ್ಷಣ ಕೋರ್ಸ್ ಗೆ ದಾಖಲಾತಿ ಪಡೆದು ರಾಜ್ಯಶಾಸ್ತ್ರ, ಇತಿಹಾಸ ಹಾಗೂ ಹಿಂದಿ ವಿಷಯಗಳನ್ನಾರಿಸಿ ಪದವಿ ಪಡೆದಿದ್ದ.

ಮುಂದೆ ಮದುವೆಯಾಗಿ ಮೂರು ಪುತ್ರಿಯರ ತಂದೆಯೂ ಆಗಿರುವ ರಾಮಜಲ್ ಮುರ್ನಿಕಾ ಎಂಬಲ್ಲಿ ಒಂದು ಕೊಠಡಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಅವರ ಕಲಿಯುವ ಉತ್ಸಾಹ ಇನ್ನೂ ಬತ್ತಿಲ್ಲ. ವಿದೇಶಿ ಭಾಷೆ ಕಲಿತರೆ ವಿದೇಶಗಳಿಗೆ ಹೋಗಬಹುದೆನ್ನುವ ಯೋಚನೆಯೇ ರಶ್ಯ ಭಾಷೆಯನ್ನು ಕಲಿಯಲು ಪ್ರೇರೇಪಿಸಿದೆ. ಆದರೆ ಕುಟುಂಬವನ್ನೂ ಸಲಹಬೇಕಾದುದರಿಂದ ವಿದ್ಯಾಭ್ಯಾಸ ಮುಂದುವರಿಸಿದರೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸುತ್ತಾರೆ. ಸದ್ಯ ರಾಮಜಲ್ ನಿಗೆ ಮಾಸಿಕ ರೂ.15,000 ವೇತನ ದೊರೆಯುತ್ತಿದೆ. ಶಿಕ್ಷಣದ ಜತೆ ರಾತ್ರಿ ಪಾಳಿ ಕಷ್ಟವೆಂದು ಹೇಳುವ ಜೆಎನ್‌ಯು ಮುಖ್ಯ ಭದ್ರತಾ ಅಧಿಕಾರಿ ನವೀನ್ ಯಾದವ್, ರಾಮಜಲ್ ಗೆ ಎಲ್ಲಾ ಸಾಧ್ಯ ನೆರವು ನೀಡುವ ಬಗ್ಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News