ಮುಂಬೈ ಕಟ್ಟಡ ಕುಸಿತ: ಮೃತರ ಸಂಖ್ಯೆ 10ಕ್ಕೇರಿಕೆ

Update: 2019-07-16 18:26 GMT

ಮುಂಬೈ, ಜು. 16: ಮುಂಬೈಯ ಜನನಿಬಿಡ ಪ್ರದೇಶದಲ್ಲಿರುವ ನಾಲ್ಕು ಮಹಡಿಯ ಕಟ್ಟಡ ಮಂಗಳವಾರ ಬೆಳಗ್ಗೆ ಕುಸಿದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ 40ರಿಂದ 50 ಜನರು ಸಿಲುಕಿರುವ ಸಾಧ್ಯತೆ ಇದೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯೊಂದಿಗೆ ಸ್ಥಳೀಯರು ಕೈಜೋಡಿಸಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಯಲ್ಲಿ ತೊಡಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಆ್ಯಂಬುಲೆನ್ಸ್ ಸ್ಥಳದಲ್ಲಿದೆ.

ಡೋಂಗ್ರಿಯ ತಂಡೇಲ್‌ನಲ್ಲ್ಲಿರುವ ನಾಲ್ಕು ಮಹಡಿಯ ಕಟ್ಟಡ ‘ಕೇಸರ್‌ಬಾ’ 11.40ಕ್ಕೆ ಕುಸಿಯಿತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಕಟ್ಟಡದ ಸ್ಥಿತಿಯ ಬಗ್ಗೆ ಬೃಹನ್ಮುಂಬಯಿ ಮಹಾ ನಗರ ಪಾಲಿಕೆ ಈ ಮೊದಲೇ ಮಹಾರಾಷ್ಟ್ರ ಹೌಸಿಂಗ್ ಆ್ಯಂಡ್ ಏರಿಯಾ ಡೆವೆಲೆಪ್‌ಮೆಂಟ್ ಅಥಾರಿಟಿ (ಎಂಎಚ್‌ಎಡಿಎ)ಗೆ ಎಚ್ಚರಿಕೆ ನೀಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ದುರಂತದ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತನಿಖೆಗೆ ಆದೇಶಿಸಿದ್ದಾರೆ. ‘‘ನಾನು ಸ್ವೀಕರಿಸಿದ ಪ್ರಾಥಮಿಕ ಮಾಹಿತಿ ಪ್ರಕಾರ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸುಮಾರು 15 ಕುಟುಂಬಗಳು ಸಿಲುಕಿಕೊಂಡಿವೆ. ಕಟ್ಟಡ 100 ವರ್ಷ ಹಳೆಯದು. ಈ ಕಟ್ಟಡವನ್ನು ಮರು ಅಭಿವೃದ್ಧಿಗೊಳಿಸುವಂತೆ ನಿವಾಸಿಗಳು ಎಂಎಚ್‌ಎಡಿಎಯನ್ನು ಸಂಪರ್ಕಿಸಿದ್ದರು. ಕಟ್ಟಡ ಕುಸಿತದ ಬಗ್ಗೆ ನಾವು ತನಿಖೆ ನಡೆಸಲಿದ್ದೇವೆ’’ ಎಂದು ಫಡ್ನವಿಸ್ ತಿಳಿಸಿದ್ದಾರೆ.

ಮುಂಬೈಯಲ್ಲಿ ಕುಸಿತಕ್ಕೊಳಗಾದ ಕಟ್ಟಡವನ್ನು 2012ರಲ್ಲಿ ನೆಲಸಮಗೊಳಿಸಬೇಕಿತ್ತು ಎಂದು ಮಹಾರಾಷ್ಟ್ರ ಹೌಸಿಂಗ್ ಹಾಗೂ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (ಎಂಎಚ್‌ಎಡಿಎ) ಅಧ್ಯಕ್ಷ ಉದಯ್ ಸಮಂತ್ ತಿಳಿಸಿದ್ದಾರೆ.

 ಈ ಕಟ್ಟಡಕ್ಕೆ 100 ವರ್ಷಗಳಾಗಿವೆ. ಎಂಎಚ್‌ಎಡಿಎಗೆ ಸೇರಿದ ಈ ಕಟ್ಟಡವನ್ನು ಖಾಸಗಿ ಡೆಪಲಪ್ಪರ್ ನೆಲಸಮಗೊಳಿಸಬೇಕಿತ್ತು. ದುರಂತಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಮಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News