ಟೋಲ್ ವ್ಯವಸ್ಥೆ ಎಂದೂ ಅಂತ್ಯಗೊಳ್ಳುವುದಿಲ್ಲ, ಉತ್ತಮ ರಸ್ತೆಗಳಿಗಾಗಿ ಹಣ ಪಾವತಿಸಲೇಬೇಕು: ಕೇಂದ್ರ ಸಚಿವ ಗಡ್ಕರಿ

Update: 2019-07-16 15:36 GMT

ಹೊಸದಿಲ್ಲಿ,ಜು.16: ಜನರು ಉತ್ತಮ ರಸ್ತೆಗಳನ್ನು ಬಯಸಿದ್ದರೆ ಅವರು ಟೋಲ್ ಪಾವತಿಸಲೇಬೇಕು ಎಂದು ಮಂಗಳವಾರ ಹೇಳುವ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಸರಕಾರದ ಬಳಿ ಸಾಕಷ್ಟು ಹಣಕಾಸು ಇಲ್ಲದ್ದರಿಂದ ಟೋಲ್ ವ್ಯವಸ್ಥೆಯು ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು,ಸರಕಾರವು ಕಳೆದ ಐದು ವರ್ಷಗಳಲ್ಲಿ 40,000 ಕಿ.ಮೀ.ಹೆದ್ದಾರಿಯನ್ನು ನಿರ್ಮಿಸಿದೆ ಎಂದು ತಿಳಿಸಿದರು.

ದೇಶದ ವಿವಿಧೆಡೆಗಳಲ್ಲಿ ಟೋಲ್ ಸಂಗ್ರಹ ಕುರಿತು ಕೆಲವು ಸದಸ್ಯರು ವ್ಯಕ್ತಪಡಿಸಿದ ಕಳವಳಗಳ ನಡುವೆಯೇ ಗಡ್ಕರಿ,ಹಣ ಪಾವತಿಸುವ ಸಾಮರ್ಥ್ಯವಿರುವ ಆ ಪ್ರದೇಶಗಳಲ್ಲಿ ಟೋಲ್ ಮೂಲಕ ಸಂಗ್ರಹಿಸಲಾಗುವ ಹಣವನ್ನು ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ ಎಂದರು.

ಟೋಲ್ ವ್ಯವಸ್ಥೆಯು ಎಂದಿಗೂ ಅಂತ್ಯಗೊಳ್ಳುವುದಿಲ್ಲ,ಟೋಲ್ ದರಗಳು ಹೆಚ್ಚುಕಡಿಮೆಯಾಗಬಹುದು. ಅದು ನನ್ನ ಚಿಂತನೆಯ ಕೂಸು. ನಿಮಗೆ ಉತ್ತಮ ಸೇವೆಗಳು ಬೇಕಿದ್ದರೆ ಹಣವನ್ನು ಪಾವತಿಸಲೇಬೇಕು. ಸರಕಾರದ ಬಳಿ ಹಣವಿಲ್ಲ ಎಂದು ಅವರು ಒತ್ತಿ ಹೇಳಿದರು.

ಹೆದ್ದಾರಿ ನಿರ್ಮಾಣ ಯೋಜನೆಗಳಿಗೆ ಭೂ ಸ್ವಾಧೀನವು ಪ್ರಮುಖ ಸಮಸ್ಯೆಯಾಗಿದೆ ಎಂದ ಅವರು,ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ನೆರವಾಗುವಲ್ಲಿ ರಾಜ್ಯ ಸರಕಾರಗಳು ಮುಂದೆ ಬರಬೇಕು. ಶೇ.80ರಷ್ಟು ಭೂ ಸ್ವಾಧಿನವಾಗದೇ ಯೋಜನೆಯನ್ನು ತನ್ನ ಸಚಿವಾಲಯವು ಅನುಷ್ಠಾನಗೊಳಿಸುವುದಿಲ್ಲ ಮತ್ತು ಈ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದರು.

 ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೆ ಬಂದಾಗ 3.85 ಲ.ಕೋ.ರೂ.ವೆಚ್ಚವನ್ನೊಳಗೊಂಡಿದ್ದ 403 ಯೋಜನೆಗಳು ಸ್ಥಗಿತಗೊಂಡಿದ್ದವು. ಈ ಯೋಜನೆಗಳ ಕಾಮಗಾರಿಯನ್ನು ಪುನರಾರಂಭಿಸುವ ಮೂಲಕ ಕಳೆದ ಐದು ವರ್ಷಗಳಲ್ಲಿ ಬ್ಯಾಂಕುಗಳನ್ನು ಮೂರು ಲಕ್ಷ ಕೋ.ರೂ.ಗಳ ಅನುತ್ಪಾದಕ ಆಸ್ತಿಯಿಂದ ರಕ್ಷಿಸಿದ್ದು ಭಾರತ ಸರಕಾರದ ಮಹಾನ್ ಸಾಧನೆಯಾಗಿದೆ ಮತ್ತು ಈಗ ಶೇ.90ರಷ್ಟು ಯೋಜನೆಗಳ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News