ಹಳೆ ಪಿಂಚಣಿ ಯೋಜನೆ ಮರು ಪರಿಚಯಿಸುವ ಯಾವುದೇ ಚಿಂತನೆ ಇಲ್ಲ: ಕೇಂದ್ರ ಸರಕಾರ

Update: 2019-07-16 17:18 GMT

 ಹೊಸದಿಲ್ಲಿ, ಜು. 16: ಸರಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಪರಿಚಯಿಸುವ ಯಾವುದೇ ಚಿಂತನೆ ಇಲ್ಲ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರಿಸಲಾಗಿದೆ.

2004ರಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಪರಿಚಯಿಸುವ ಮುನ್ನ ಅಸ್ತಿತ್ವದಲ್ಲಿದ್ದ ಈ ಯೋಜನೆ ಸರಕಾರಿ ಉದ್ಯೋಗಿಗಳಿಗೆ ನಿಗದಿತ ಸೌಲಭ್ಯದ ಪಿಂಚಣಿ ಒದಗಿಸಿತ್ತು. ನಿಗದಿತ ಸೌಲಭ್ಯ ಪಿಂಚಣಿ ಸೇವೆ ಸಲ್ಲಿಸಿದ ವರ್ಷ ಹಾಗೂ ವೇತನವನ್ನು ಪರಿಗಣಿಸಿ ನಿರ್ಧರಿಸುವ ಪಿಂಚಣಿ. ಇನ್ನೊಂದೆಡೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಮಾರುಕಟ್ಟೆಯೊಂದಿಗೆ ಸಂಬಂಧ ಹೊಂದಿದೆ.

 2004ರಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಪರಿಚಯಿಸಲಾಯಿತು. ಇದನ್ನು ಕೇಂದ್ರ ಸರಕಾರದ ಎಲ್ಲ ಉದ್ಯೋಗಿಗಳಿಗೆ ಕಡ್ಡಾಯಗೊಳಿಸಲಾಯಿತು. ಅನಂತರ ಈ ಯೋಜನೆಯನ್ನು ರಾಜ್ಯ ಸರಕಾರ ಹಾಗೂ ಖಾಸಗಿ ವಲಯದ ಉದ್ಯೋಗಿಗಳಿಗೂ ವಿಸ್ತರಿಸಲಾಯಿತು. ಆದರೆ, ಇದು ನಿಗದಿತ ಪಿಂಚಣಿ ಮೊತ್ತವನ್ನು ನೀಡುವುದಿಲ್ಲ ಎಂಬ ಕಾರಣಕ್ಕೆ ಕೆಲವು ಸರಕಾರಿ ಉದ್ಯೋಗಿಗಳ ಸಂಘಟನೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ವಿರೋಧಿಸಿತು.

 ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಳೆಯ ಪಿಂಚಣಿ ಯೋಜನೆ ಮರು ಪರಿಚಯಿಸಲಿದೆ ಎಂಬ ನಿರೀಕ್ಷೆ ಸರಕಾರದ ಕೆಲವು ವರ್ಗದ ಉದ್ಯೋಗಿಗಳಿಗೆ ಇದೆ. ಆದರೆ ಈ ಎಲ್ಲ ವದಂತಿಗಳಿಗೆ ಕೇಂದ್ರ ಸರಕಾರ ಪೂರ್ಣ ವಿರಾಮ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News