ವಿಶ್ವಕಪ್ ಫೈನಲ್‌ನಲ್ಲಿ ಯಾರೂ ಸೋತಿಲ್ಲ: ಕೇನ್ ವಿಲಿಯಮ್ಸನ್

Update: 2019-07-16 18:35 GMT

ವೆಲ್ಲಿಂಗ್ಟನ್, ಜು.16: ‘‘ವಿಶ್ವಕಪ್ ಫೈನಲ್‌ನಲ್ಲಿ ಯಾವುದೇ ತಂಡ ಸೋತಿಲ್ಲ. ಇಂಗ್ಲೆಂಡ್ ವಿರುದ್ಧ ನ್ಯೂಝಿಲ್ಯಾಂಡ್ ಸೋಲು ತಪ್ಪಿಸಲು ದಿಟ್ಟ ಹೋರಾಟ ನಡೆಸಿ ಆ ನಿಟ್ಟಿನಲ್ಲಿ ಯಶಸ್ವಿಯಾಗಿತ್ತು ಎಂದು ನ್ಯೂಝಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ಫೈನಲ್‌ನ 50 ಓವರ್‌ಗಳ ಆಟದಲ್ಲಿ ಟೈ ಮತ್ತು ಸೂಪರ್ ಓವರ್‌ನಲ್ಲಿ ಟೈ ಆಗಿದ್ದರೂ ಬೌಂಡರಿ ಕೌಂಟ್ ಆಧಾರದಲ್ಲಿ ಚಾಂಪಿಯನ್‌ಪಟ್ಟ ನ್ಯೂಝಿಲ್ಯಾಂಡ್‌ಗೆ ಕೈತಪ್ಪಿದ ಹಿನ್ನೆಲೆಯಲ್ಲಿ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದೊಂದು ‘ಅಸಂಬದ್ಧ ’ ನಿಯಮ ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಹಾಲಿ ಮತ್ತು ಮಾಜಿ ಆಟಗಾರರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

‘‘ಆಟದ ಕೊನೆಯಲ್ಲಿ ನಾವು ಪ್ರತ್ಯೇಕವಾಗಲಿಲ್ಲ. ಯಾರು ಫೈನಲ್‌ನಲ್ಲಿ ಸೋಲಲಿಲ್ಲ. ಆದರೆ ಇಂಗ್ಲೆಂಡ್‌ವಿಶ್ವಚಾಂಪಿಯನ್‌ಕಿರೀಟ ಧರಿಸಿತು’’ ಎಂದು ವಿಲಿಯಮ್ಸನ್ ಹೇಳಿದ್ದಾರೆ.

ನಾಯಕ ವಿಲಿಯಮ್ಸನ್ ಮತ್ತು ಅವರ ತಂಡ ಸೋಲನ್ನು ಒಪ್ಪಿಕೊಂಡಿತು. ಯಾಕೆಂದರೆ ಪಂದ್ಯ ಆರಂಭಕ್ಕೂ ಮುನ್ನ ಟೂರ್ನಮೆಂಟ್‌ನ ನಿಯಮಗಳನ್ನು ಒಪ್ಪಿಕೊಂಡು ಸಹಿ ಮಾಡಿತ್ತು.

  ಬೌಂಡರಿ ಕೌಂಟ್ ನಿಯಮ ತಮಗೆ ತಿರುಗುಬಾಣವಾಗುತ್ತದೆ ಎಂದು ನ್ಯೂಝಿಲ್ಯಾಂಡ್ ತಂಡದ ಆಟಗಾರರು ಯೋಚಿಸಿರಲಿಲ್ಲ. ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡದ ಪರ 17 ಮತ್ತು ಆತಿಥೇಯ ಇಂಗ್ಲೆಂಡ್ ಪರ 26 ಬೌಂಡರಿ ದಾಖಲಾಗಿದ್ದವು. ನ್ಯೂಝಿಲ್ಯಾಂಡ್ ಪರ ಕಡಿಮೆ ಬೌಂಡರಿ ದಾಖಲಾದ ಹಿನ್ನೆಲೆಯಲ್ಲಿ ವಿಶ್ವಕಪ್ ಕೈತಪ್ಪಿತು.

ಬೌಂಡರಿ ಕೌಂಟ್ ನಿಯಮದ ಬಗ್ಗೆ ಸುದ್ದಿಗಾರರರು ಕೇಳಿದಾಗ‘‘ ಬಹುಷಃ ನೀವು ನನಗೆ ಈ ಪ್ರಶ್ನೆ ಕೇಳುತ್ತೀರಿ ಎಂಬ ನಿರೀಕ್ಷೆ ಇರಲಿಲ್ಲ. ನಾನು ಈ ಪ್ರಶ್ನೆಗೆ ಉತ್ತರಿಸಬೇಕಾಗಿ ಬರುತ್ತದೆ ಎಂಬ ಯೋಚನೆ ನನಗೆ ಇರಲಿಲ್ಲ’’ ಎಂದು ನಗುತ್ತಲೇ ಉತ್ತರಿಸಿದರು.

‘‘ಉಭಯ ತಂಡಗಳು ಫೈನಲ್‌ನಲ್ಲಿ ಜಯಿಸಲು ಹೋರಾಟ ನಡೆಸಿತ್ತು. ಆದರೆ ಸೋಲನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ಭವಿಷ್ಯದಲ್ಲಿ ಹೇಗೆ ಎನ್ನುವುದು ಗೊತ್ತಿಲ್ಲ’’ ಎಂದು ಸೂಪರ್ ಕೂಲ್ ಕ್ಯಾಪ್ಟನ್ ವಿಲಿಯಮ್ಸನ್ ಅಭಿಪ್ರಾಯಪಟ್ಟರು.

 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಝಿಲ್ಯಾಂಡ್ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 241 ರನ್ ಗಳಿಸಿತ್ತು. ಗೆಲುವಿಗೆ 242 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 50 ಓವರ್‌ಗಳಲ್ಲಿ 241 ರನ್ ಗಳಿಸುವಷ್ಟರಲ್ಲಿ ಆಲೌಟಾಗಿತ್ತು. ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ 15 ರನ್ ಗಳಿಸಿತ್ತು. ಅಷ್ಟೇ ರನ್ ನ್ಯೂಝಿಲ್ಯಾಂಡ್ ಮಾಡಿತು. ಆದರೆ ಬೌಂಡರಿ ಕೌಂಟ್ ನಿಯಮದಲ್ಲಿ ಇಂಗ್ಲೆಂಡ್ ವಿಶ್ವಕಪ್ ಕಿರೀಟ ಧರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News