ಚಿಕನ್ ಮತ್ತು ಮೊಟ್ಟೆ ಕೂಡ ಸಸ್ಯಾಹಾರ ಆಹಾರವೆಂದು ಪರಿಗಣಿತವಾಗಬೇಕು ಎಂದ ಶಿವಸೇನೆ ಸಂಸದ

Update: 2019-07-17 12:33 GMT

ಮುಂಬೈ: ಶಿವಸೇನೆಯ ನಾಯಕ ಸಂಜಯ್ ರಾವತ್ ಅವರು ವಿಚಿತ್ರ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಮೊಟ್ಟೆ ಹಾಗೂ ಕೋಳಿ ಮಾಂಸವನ್ನೂ ‘ಸಸ್ಯಾಹಾರಿ’ ಆಹಾರಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ರಾಜ್ಯಸಭಾ ಸದಸ್ಯರಾಗಿರುವ ರಾವತ್ ಆಯುರ್ವೇದದ ಪ್ರಯೋಜನಗಳ ಕುರಿತಾದ ಚರ್ಚೆಯ ನಡುವೆ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ.

`ಚಿಕನ್' ಸಸ್ಯಾಹಾರವೇ ಅಥವಾ ಮಾಂಸಾಹಾರವೇ ಎಂಬುದರ ಬಗ್ಗೆ ಕೇಂದ್ರ ಆಯುಷ್ ಸಚಿವಾಲಯ ಒಂದು ನಿರ್ಧಾರಕ್ಕೆ ಬರಬೇಕೆಂದೂ ಈ ಹಿರಿಯ ಸಂಸದ ಆಗ್ರಹಿಸಿದ್ದಾರೆ.

``ಒಮ್ಮೆ ನಾನು ನಂದೂರ್ಬರ್ ಪ್ರಾಂತ್ಯದ ಸಣ್ಣ ಗ್ರಾಮಕ್ಕೆ ಹೋಗಿದ್ದೆ. ಆದಿವಾಸಿ ಜನರು ನಮಗೆ ಅಲ್ಲಿ ಆಹಾರ ಒದಗಿಸಿದ್ದರು. ಏನೆಂದು ನಾನು ಕೇಳಿದಾಗ ಆರ್ಯುವೇದಿಕ್ ಚಿಕನ್ ಎಂದಿದ್ದರು. ಅದನ್ನು ತಿಂದರೆ ಎಲ್ಲಾ ಕಾಯಿಲೆಗಳೂ ದೂರವಾಗುತ್ತವೆ ಎಂದು ಅವರು ಹೇಳಿದ್ದರು,'' ಎಂದೂ ರಾವತ್ ವಿವರಿಸಿದ್ದಾರೆ.

ಆಯುರ್ವೇದಿಕ್ ಮೊಟ್ಟೆಗಳನ್ನು ನೀಡುವ ಕೋಳಿಗಳಿಗೆ ಕೇವಲ ಆಯುರ್ವೇದೀಯ ಆಹಾರಗಳನ್ನು ಮಾತ್ರ ನೀಡಲಾಗುತ್ತಿದೆ ಹಾಗೂ ಅದರ ಪ್ರೊಟೀನ್ ಅಂಶಗಳಿಗಾಗಿ ಸಸ್ಯಾಹಾರಿಗಳೂ ಸೇವಿಸಬಹುದು ಎಂದು ಸಂಶೋಧಕರು  ಹೇಳಿದ್ದಾರೆಂದೂ ರಾವತ್ ಹೇಳಿಕೊಂಡರು.

ನಿರೀಕ್ಷಿಸಿದಂತೆ ಸಂಜಯ್ ರಾವತ್ ಅವರ ಬೇಡಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲಕಾರಿ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. “ಚಿಕನ್ ಮತ್ತು ಮೊಟ್ಟೆ ಮಾತ್ರ ಏಕೆ ಬೀಫ್ ಮತ್ತು ಮಟನ್ ಅನ್ನೂ ಸಸ್ಯಾಹಾರದ ಪಟ್ಟಿಗೆ ಸೇರಿಸಬೇಕು,'' ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ``ಇನ್ನು ವೆಜ್ ಬಿರಿಯಾನಿಯಲ್ಲೂ ಲೆಗ್ ಪೀಸ್ ದೊರೆಯಲಿದೆ,'' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News