ಸಿರಿಯ ವಿರುದ್ಧ ಭಾರತ ಡ್ರಾ

Update: 2019-07-17 19:12 GMT

ಅಹ್ಮದಾಬಾದ್, ಜು.17: ಇಲ್ಲಿ ಮಂಗಳವಾರ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡ ಸಿರಿಯ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿದೆ.

ನರೇಂದರ್ ಗೆಹ್ಲೋಟ್ 51ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸಿರಿಯಾದ ನಾಯಕ ಫಿರಾಸ್-ಅಲ್-ಖತಿಬ್ 78ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಈಗಾಗಲೇ ತಜಿಕಿಸ್ತಾನ ಹಾಗೂ ಉತ್ತರ ಕೊರಿಯಾ ವಿರುದ್ಧದ ಕಳೆದೆರಡು ಪಂದ್ಯಗಳಲ್ಲಿ ಭಾರತ ಸೋಲುಂಡಿತ್ತು. ಭಾರತ ಈಗಾಗಲೇ ಫೈನಲ್ ಸ್ಪರ್ಧೆಯಿಂದ ಹೊರಗುಳಿದಿದೆ. ಸಿರಿಯಕ್ಕೆ ಫೈನಲ್‌ನಲ್ಲಿ ಸ್ಥಾನ ಪಡೆಯಲು ಗೆಲುವಿನ ಅಗತ್ಯವಿದೆ.

51ನೇ ನಿಮಿಷದಲ್ಲಿ ಅನಿರುದ್ಧ ಥಾಪಾ ಬಲಗಡೆಯಿಂದ ಕಾರ್ನರ್ ಕಿಕ್ ಕಳುಹಿಸಿದರು. ಇದರ ಲಾಭ ಎತ್ತಿದ ನರೇಂದರ್ ಚೆಂಡನ್ನು ಹೆಡರ್‌ನ ಮೂಲಕ ಗೋಲು ಪೆಟ್ಟಿಗೆಗೆ ಸೇರಿಸಿ ತನ್ನ ಎರಡನೇ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಚೊಚ್ಚಲ ಗೋಲು ಗಳಿಸಿದರು.

ಆ ಬಳಿಕ ಭಾರತ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿ ಆಡಿತು. ಮಿಡ್ ಫೀಲ್ಡ್ ನಲ್ಲಿ ಪ್ರಾಬಲ್ಯ ಮೆರೆದ ಭಾರತ ತಂಡ ಸಿರಿಯಕ್ಕೆ ಒತ್ತಡ ಹೇರಿತು. 78ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಸಿರಿಯಾ ಗೋಲು ಗಳಿಸಿ 1-1ರಿಂದ ಸಮಬಲ ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News