ಇ ಗುಂಪಿನಲ್ಲಿ ಭಾರತ ಫುಟ್ಬಾಲ್ ತಂಡ

Update: 2019-07-18 05:47 GMT

ಹೊಸದಿಲ್ಲಿ, ಜು.18: ಭಾರತೀಯ ಫುಟ್ಬಾಲ್ ತಂಡಕ್ಕೆ ಬುಧವಾರ 2022ರ ವಿಶ್ವಕಪ್ ಎರಡನೇ ಸುತ್ತಿನ ಏಶ್ಯಾ ಕ್ವಾಲಿಫೈಯರ್‌ಗೆ ಸುಲಭ ಡ್ರಾ ನೀಡಲಾಗಿದ್ದು, ಕತರ್, ಓಮಾನ್, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿರುವ ಇ ಗುಂಪಿನಲ್ಲಿ ಸ್ಥಾನ ಪಡೆದಿದೆ.

 ಏಶ್ಯ ಫುಟ್ಬಾಲ್ ಕಾನ್ಫಡರೇಶನ್ ಮುಖ್ಯ ಕಚೇರಿಯಲ್ಲಿ ನಡೆದ ಡ್ರಾ ಪ್ರಕ್ರಿಯೆಯಲ್ಲಿ 40 ಏಶ್ಯಾ ದೇಶಗಳನ್ನು ತಲಾ 5 ತಂಡಗಳಂತೆ 8 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿ ಗುಂಪಿನ ಎಲ್ಲ ತಂಡಗಳು ಸೆ.5ರಿಂದ ತವರು-ಹೊರಗಿನ ಮೈದಾನಗಳಲ್ಲಿ ರೌಂಡ್-ರಾಬಿನ್ ಪಂದ್ಯಗಳನ್ನು ಆಡಲಿವೆ.

8 ಗುಂಪಿನ ವಿಜೇತ ತಂಡಗಳು ಹಾಗೂ ನಾಲ್ಕು ಶ್ರೇಷ್ಠ ರನ್ನರ್ಸ್-ಅಪ್ 2022ರ ವಿಶ್ವಕಪ್‌ನ ಕ್ವಾಲಿಫೈಯರ್‌ನ ಅಂತಿಮ ಸುತ್ತಿಗೆ ತೇರ್ಗಡೆಯಾಗುತ್ತವೆ. 2023ರ ಎಎಫ್‌ಸಿ ಏಶ್ಯನ್ ಕಪ್ ಫೈನಲ್ಸ್ ಚೀನಾದಲ್ಲಿ ನಡೆಯಲಿದೆ.

 ಭಾರತ ತಂಡ ಇರಾನ್, ಜಪಾನ್, ಕೊರಿಯಾ, ಆಸ್ಟ್ರೇಲಿಯ ಹಾಗೂ ಸೌದಿ ಅರೇಬಿಯದಂತಹ ಬಲಿಷ್ಠ ತಂಡವನ್ನು ಎದುರಿಸುವುದರಿಂದ ಪಾರಾಗಿದೆ. ಭಾರತ ತಂಡ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶವನ್ನು ಮಣಿಸಬಹುದು. ಕ್ವಾಲಿಫೈಯರ್‌ನ ಅಂತಿಮ ಸುತ್ತಿಗೆ ತೇರ್ಗಡೆಯಾದರೆ ಒಮಾನ್ ಹಾಗೂ ಆತಿಥೇಯ ಕತರ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. 2018ರ ವಿಶ್ವಕಪ್‌ನ ಎರಡನೇ ಸುತ್ತಿನ ಕ್ವಾಲಿಫೈಯರ್‌ನಲ್ಲಿ ಭಾರತ ತಂಡ ಒಮಾನ್ ತಂಡವಿರುವ ಗುಂಪಿನಲ್ಲಿತ್ತು. ಅರಬ್ ರಾಷ್ಟ್ರ ಒಮಾನ್ 2015ರಲ್ಲಿ ಭಾರತವನ್ನು ಬೆಂಗಳೂರಿನಲ್ಲಿ 2-1 ಹಾಗೂ ಮಸ್ಕತ್‌ನಲ್ಲಿ 3-0 ಅಂತರದಿಂದ ಮಣಿಸಿತ್ತು.

ಕಳೆದ ಡಿಸೆಂಬರ್‌ನಲ್ಲಿ 2019ರ ಏಶ್ಯನ್ ಕಪ್‌ಗಿಂತ ಮೊದಲು ಭಾರತ-ಒಮಾನ್ ಮಧ್ಯೆ ಅಬುಧಾಬಿಯಲ್ಲಿ ನಡೆದ ಪಂದ್ಯ ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News