ಗುಂಪು ಹಲ್ಲೆ, ಹತ್ಯೆ ಪ್ರಕರಣ: ನ್ಯಾಯಾಂಗ ನಿಂದನೆ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

Update: 2019-07-18 15:41 GMT

ಹೊಸದಿಲ್ಲಿ, ಜು.18: ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ 2018ರಲ್ಲಿ ತಾನು ನೀಡಿದ್ದ ತೀರ್ಪಿನಲ್ಲಿ ತಿಳಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸದ ರಾಜ್ಯಗಳ ವಿರುದ್ಧ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.

ನ್ಯಾಯಾಲಯದಲ್ಲಿ ನಿಯಮಿತ ಅವಧಿಯಲ್ಲಿ ನಡೆಯುವ ಪ್ರಕ್ರಿಯೆಯಲ್ಲಿ ತಾನು ಹಸ್ತಕ್ಷೇಪ ನಡೆಸುವುದಿಲ್ಲ . ಅಲ್ಲದೆ ನ್ಯಾಯಾಂಗ ನಿಂದನೆ ಅರ್ಜಿಯ ತುರ್ತು ವಿಚಾರಣೆ ನಡೆಸುವ ಅಗತ್ಯವೂ ಇಲ್ಲ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ, ನ್ಯಾಯಾಧೀಶರಾದ ದೀಪಕ್ ಗುಪ್ತಾ ಹಾಗೂ ಅನಿರುದ್ಧ ಬೋಸ್ ಅವರಿದ್ದ ಸುಪ್ರೀಂಕೋರ್ಟ್‌ನ ನ್ಯಾಯಪೀಠ ತಿಳಿಸಿದೆ.

ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣ ನಡೆಯಲು ಅವಕಾಶ ನೀಡಲಾಗದು ಎಂದು 2018ರ ಜುಲೈ 17ರಂದು ಸುಪ್ರೀಂಕೋರ್ಟ್ ಘೋಷಿಸಿತ್ತು. ಯಾರು ಕೂಡಾ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ ಅಥವಾ ಸ್ವತಃ ಕಾನೂನು ರೂಪಿಸುವಂತಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದರು ಮತ್ತು ಇಂತಹ ಪ್ರಕರಣಗಳನ್ನು ತಡೆಯುವ, ಪರಿಹಾರ ಕ್ರಮ ಹಾಗೂ ಶಿಕ್ಷೆಯ ಕ್ರಮಗಳ ಬಗ್ಗೆ ಮಾರ್ಗದರ್ಶಿ ನೀತಿಯೊಂದನ್ನು ನ್ಯಾಯಾಲಯ ತಿಳಿಸಿತ್ತು. ಎಲ್ಲಾ ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ, ಇಂತಹ ಪ್ರಕರಣ ಸಂಭವಿಸಬಹುದಾದ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಗಸ್ತು ತಿರುಗುವಂತೆ ಮತ್ತು ಇಂತಹ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ನ್ಯಾಯಾಲಯ ತಿಳಿಸಿತ್ತು.

ಸುಪ್ರೀಂಕೋರ್ಟ್ ಆದೇಶ ನೀಡಿ ಒಂದು ವರ್ಷವಾದರೂ ಈ ಕಾನೂನು ಜಾರಿಯಾಗಿಲ್ಲ ಯಾಕೆ ಎಂದು ಎಐಎಂಇಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದರು. ಈ ಕಾನೂನನ್ನು ಜಾರಿಗೊಳಿಸದಿರುವುದಕ್ಕೆ ಸರಕಾರವೇ ಹೊಣೆ ಎಂದು ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News