ಪಿ.ಟಿ. ಉಷಾ ಮುಡಿಗೆ ಐಎಎಫ್ ಪ್ರಶಸ್ತಿ

Update: 2019-07-18 18:52 GMT

 ಹೊಸದಿಲ್ಲಿ, ಜು.18: ಕ್ರೀಡಾಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಗಾಗಿ ಭಾರತದ ಖ್ಯಾತ ಕ್ರೀಡಾಪಟು, ಓಟದ ರಾಣಿ ಎಂದೇ ಹೆಸರಾದ ಪಿಟಿ ಉಷಾರನ್ನು ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್ (ಐಎಎಫ್) ವೆಟರನ್ ಪಿನ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಪ್ರಕಟನೆ ತಿಳಿಸಿದೆ.

ಭಾರತದ ಸಾರ್ವಕಾಲಿಕ ಮಹಾನ್ ಕ್ರೀಡಾಪಟುಗಳಲ್ಲಿ ಒಬ್ಬರೆಂಬ ಖ್ಯಾತಿ ಪಡೆದಿರುವ ಕೇರಳ ಮೂಲದ ಉಷಾ, ಜಕಾರ್ತದಲ್ಲಿ 1985ರಲ್ಲಿ ನಡೆದಿದ್ದ ಏಶ್ಯನ್ ಕ್ರೀಡಾಕೂಟದಲ್ಲಿ 100 ಮೀ. 200 ಮೀ. 400 ಮೀ. ಓಟ, 400 ಮೀ. ಹರ್ಡಲ್ಸ್ ಮತ್ತು 400 ಮೀ. ರಿಲೇಯಲ್ಲಿ ಸ್ವರ್ಣ ಪದಕದ ಜೊತೆ ಒಂದು ಕಂಚನ್ನೂ ಗೆದ್ದು ದಾಖಲೆ ನಿರ್ಮಿಸಿದ್ದರು. 1984ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಕೂಟದ ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ಪ್ರಪ್ರಥಮ ಭಾರತೀಯ ಮಹಿಳೆ ಎನಿಸಿಕೊಂಡಿದ್ದರು. ಫೈನಲ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ಕೈತಪ್ಪಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಜಾಗತಿಕ ಕ್ರೀಡಾಕ್ಷೇತ್ರಕ್ಕೆ ನೀವು ನೀಡಿರುವ ಸುದೀರ್ಘ ಹಾಗೂ ಪ್ರಶಂಸನೀಯ ಕೊಡುಗೆಯನ್ನು ಪರಿಗಣಿಸಿ ನಿಮ್ಮ ಪ್ರದೇಶದ ಅಥ್ಲೆಟಿಕ್ಸ್ ಸಂಸ್ಥೆ ನಿಮ್ಮ ಹೆಸರನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವ ಬಗ್ಗೆ ನಮಗೆ ಸಂತೋಷವಾಗಿದೆ ಎಂದು ಐಎಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ರಿಡ್‌ಗನ್ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ. ಅಲ್ಲದೆ ದೋಹಾದಲ್ಲಿ ಸೆಪ್ಟಂಬರ್ 24ರಂದು ನಡೆಯಲಿರುವ ಐಎಎಫ್‌ನ 52ನೇ ಮಹಾಧಿವೇಶನದ ಆರಂಭದ ದಿನ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಉಷಾಗೆ ಆಹ್ವಾನ ಪತ್ರಿಕೆಯನ್ನೂ ಕಳುಹಿಸಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ತನ್ನ ಹೆಸರನ್ನು ಆಯ್ಕೆ ಮಾಡಿರುವುದಕ್ಕೆ ಉಷಾ ಐಎಎಫ್‌ಗೆ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News