ಅನೀಮಿಯಾದಿಂದ ಬಳಲುತ್ತಿದ್ದ ಮಕ್ಕಳನ್ನು ತನ್ನ ಮನೆಗೆ ಕರೆದೊಯ್ದ ಜಿಲ್ಲಾಧಿಕಾರಿ

Update: 2019-07-19 11:08 GMT
Photo: timesofindia.indiatimes.com

ಭೋಪಾಲ್, ಜು.19: ಅನೀಮಿಯಾ ಅಥವಾ ರಕ್ತದ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಮಧ್ಯ ಪ್ರದೇಶ ಸರಕಾರದ ದಸ್ತಕ್' ಯೋಜನೆಯ ಪ್ರಯೋಜನ ಪಡೆಯಲು ಸಿದ್ಧಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸುಮಾರು 500 ಮಕ್ಕಳನ್ನು ಆರೋಗ್ಯ ಕಾರ್ಯಕರ್ತರು ಕರೆತಂದಿದ್ದರು. ಇದರಿಂದಾಗಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಸ್ಥಳವಿಲ್ಲದೆ ಅಲ್ಲಿನ ಜಿಲ್ಲಾಧಿಕಾರಿ ಅಭಿಷೇಕ್ ಸಿಂಗ್ 70ಕ್ಕೂ ಹೆಚ್ಚು ಮಕ್ಕಳನ್ನು ತಮ್ಮ ಅಧಿಕೃತ ನಿವಾಸಕ್ಕೆ ಕರೆದೊಯ್ದು ಅವರಿಗೆ ಅಗತ್ಯ ಸೌಲಭ್ಯಗಳನ್ನೂ ಒದಗಿಸಿಕೊಟ್ಟು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.

ಅನೀಮಿಯಾದಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಜಿಲ್ಲಾಸ್ಪತ್ರೆಗಳಲ್ಲಿ ರಕ್ತ ತಪಾಸಣೆ ನಡೆಸಿ ಅವರಿಗೆ ತೀವ್ರ ರಕ್ತದ ಕೊರತೆಯಿದೆ ಎಂದು ಕಂಡು ಬಂದಲ್ಲಿ ರಾಜ್ಯ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ವಯ ಅವರಿಗೆ  ರಕ್ತ ಒದಗಿಸಲು ಕೂಡ ಕ್ರಮ ಕೈಗೊಳ್ಳಲಾಗುತ್ತದೆ.

ಈ ಯೋಜನೆಯನ್ವಯ ಬುಧವಾರ ಆರೋಗ್ಯ ಕಾರ್ಯಕರ್ತರು ಅನಿರೀಕ್ಷಿತವಾಗಿ 530 ಮಕ್ಕಳನ್ನು ಕರೆ ತಂದಿದ್ದರು. “ಜಿಲ್ಲಾಸ್ಪತ್ರೆಯಲ್ಲಿ 200ಕ್ಕೂ ಅಧಿಕ ಮಕ್ಕಳಿಗೆ ಸ್ಥಳಾವಕಾಶವಿದ್ದರೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಮಾನಸ ಭವನದಲ್ಲೂ ಮಕ್ಕಳ ಚಿಕಿತ್ಸೆಗೆ ಏರ್ಪಾಟು ಮಾಡಲಾಗಿತ್ತು. ಆದರೂ ಇನ್ನೂ 70 ಮಕ್ಕಳಿಗೆ ಸ್ಥಳಾವಕಾಶದ ಕೊರತೆಯಿದ್ದುದರಿಂದ ಅವರನ್ನು ನನ್ನ ಅಧಿಕೃತ ನಿವಾಸಕ್ಕೆ ಕರೆದುಕೊಂಡು ಬಂದಿದ್ದೇನೆ, ಮಕ್ಕಳು ಆಟವಾಡುವುದನ್ನು ನೋಡಿದಾಗ ಖುಷಿಯಾಗುತ್ತದೆ. ಅವರ ಜತೆ ಇರಲು ನನಗೂ ಖುಷಿಯಿದೆ'' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ದಸ್ತಕ್ ಅಭಿಯಾನ ನಡೆಯುತ್ತಿದ್ದು ಇಲ್ಲಿಯ ತನಕ 600ಕ್ಕೂ ಅಧಿಕ ಮಕ್ಕಳಿಗೆ ರಕ್ತ ಒದಗಿಸಲಾಗಿದೆ, ಪ್ರತಿ ದಿನ ಸರಾಸರಿ 100ರಿಂದ 125 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ,''ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News