ಮುಝಫ್ಫರನಗರ ದಂಗೆಗಳು: 10 ಕೊಲೆಗಳು ಸೇರಿ 41 ಪ್ರಕರಣಗಳ ಪೈಕಿ 40ರಲ್ಲಿ ಎಲ್ಲ ಆರೋಪಿಗಳು ಖುಲಾಸೆ!

Update: 2019-07-19 14:29 GMT
Photo:Outlook India

ಲಕ್ನೋ, ಜು.19: ಉತ್ತರ ಪ್ರದೇಶದ ಮುಝಫ್ಫರನಗರದಲ್ಲಿ 65 ಜನರನ್ನು ಬಲಿ ಪಡೆದ 2013ರಲ್ಲಿ ಸಂಭವಿಸಿದ ಹಿಂಸಾಚಾರದ ಸಂದರ್ಭ ನಡೆದ 10 ಕೊಲೆ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಜನವರಿ 2017 ಹಾಗೂ ಫೆಬ್ರವರಿ 2019ರ ನಡುವೆ ನಡೆದಿದೆ. ಆದರೆ ಎಲ್ಲಾ ಆರೋಪಿಗಳೂ ಖುಲಾಸೆಗೊಂಡಿದ್ದಾರೆ. ಸಾಕ್ಷ್ಯಗಳ ಆಧಾರದಲ್ಲಿ ಹಾಗೂ ಇನ್ನು ಕೆಲ ಪ್ರಕರಣಗಳಲ್ಲಿ ಸಾಕ್ಷಿಗಳಾದ ಸತ್ತವರ ಸಂಬಂಧಿಗಳು ತಿರುಗಿ ಬಿದ್ದ ಕಾರಣ ಎಲ್ಲಾ ಆರೋಪಿಗಳೂ ಖುಲಾಸೆಗೊಳ್ಳುವಂತಾಗಿದೆ.

2017ರಿಂದೀಚೆಗೆ ಮುಝಫ್ಫರನಗರ ನ್ಯಾಯಾಲಯಗಳು ಹಿಂಸಾಚಾರಕ್ಕೆ ಸಂಬಂಧಿಸಿದ 41 ಪ್ರಕರಣಗಳಲ್ಲಿ ತೀರ್ಪುಗಳನ್ನು ನೀಡಿದ್ದು, ಇವುಗಳ ಪೈಕಿ ಒಂದು ಕೊಲೆ ಪ್ರಕರಣದಲ್ಲಿ ಮಾತ್ರ ಆರೋಪಿಗಳ ಅಪರಾಧ ಸಾಬೀತಾಗಿದೆ. 40 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದು, ಈ ಎಲ್ಲಾ ಪ್ರಕರಣಗಳು ಮುಸ್ಲಿಮರ ಮೇಲಿನ ದಾಳಿ ನಡೆದ ಪ್ರಕರಣಗಳಾಗಿವೆ.

ಈ ಎಲ್ಲಾ ಪ್ರಕರಣಗಳು ದಾಖಲಾಗಿ ತನಿಖೆ ಕೂಡ ಅಖಿಲೇಶ್ ಯಾದವ್ ಸರಕಾರದ ಅವಧಿಯಲ್ಲಿ ನಡೆದಿತ್ತು. ಆದರೆ ವಿಚಾರಣೆ ಈಗಿನ ಬಿಜೆಪಿ ಸರಕಾರವಿರುವಾಗ ನಡೆದಿತ್ತು. ಮುಝಫ್ಫರನಗರ ದಂಗೆಗಳಿಗೆ ಸಂಬಂಧಿಸಿದ ಪ್ರಕರಣಗಳ ಪೈಕಿ ಶಿಕ್ಷೆಯಾದ ಪ್ರಕರಣ ಆಗಸ್ಟ್ 27, 2013ರಂದು ನಡೆದಿತ್ತು. ಸೋದರ ಸಂಬಂಧಿಗಳಾದ ಗೌರವ್ ಹಾಗೂ ಸಚಿನ್ ಅವರನ್ನು ಕವಲ್ ಗ್ರಾಮದಲ್ಲಿ ಆ ದಿನ ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿನ  ಏಳು ಜನ ಆರೋಪಿಗಳಾದ  ನದೀಮ್, ಇಕ್ಬಾಲ್, ಜನಾಂಗಿರ್, ಅಫ್ಝಲ್, ಫುರ್ಕಾನ್, ಮುಜಸ್ಸಿಮ್, ಮುಝಮ್ಮಿಲ್, ನದೀಂ ಇವರಿಗೆ ಶಿಕ್ಷೆಯಾಗಿದ್ದು, ಈ ತೀರ್ಪು ಈ ವರ್ಷದ ಫೆಬ್ರವರಿ 8ರಂದು ನೀಡಲಾಗಿದೆ. ಈ ನಿರ್ದಿಷ್ಟ ಪ್ರಕರಣವೇ ಹಿಂಸಾಚಾರಕ್ಕೆ ಕಾರಣವಾಗಿತ್ತೆಂದು ಹೇಳಲಾಗಿದೆ.

ಇತರ 10 ಕೊಲೆ ಪ್ರಕರಣಗಳ ಪೈಕಿ ಒಂದು ಕುಟುಂಬವನ್ನು ಜೀವಂತ ದಹಿಸಿದ, ಮೂವರು ಸ್ನೇಹಿತರನ್ನು ಗದ್ದೆಗೆ ಎಳೆದೊಯ್ದು ಹತ್ಯೆಗೈದ ಹಾಗೂ ಇತರ ಇಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆಗಳಲ್ಲಿ ಆರೋಪಿಗಳು ನಿರ್ದೋಷಿಗಳೆಂದು ಸಾಬೀತಾಗಿ 53 ಮಂದಿ ಖುಲಾಸೆಗೊಂಡಿದ್ದಾರೆ. ನಾಲ್ಕು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಸೇರಿದಂತೆ 26 ದಂಗೆ ಪ್ರಕರಣಗಳಲ್ಲಿಯೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ.

ಆದರೆ ನ್ಯಾಯಾಲಯದ ತೀರ್ಪುಗಳ ವಿರುದ್ಧ ಅಪೀಲು ಸಲ್ಲಿಸುವ ಇರಾದೆ ಉತ್ತರ ಪ್ರದೇಶ ಸರಕಾರಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News