ಸೋನ್‌ಭದ್ರ ಗ್ರಾಮಕ್ಕೆ ಭೇಟಿ ನೀಡಲು ತೆರಳಿದ್ದ ಪ್ರಿಯಾಂಕಾ ಗಾಂಧಿ ಪೊಲೀಸ್ ವಶಕ್ಕೆ

Update: 2019-07-19 15:27 GMT

ಲಕ್ನೋ, ಜು. 19: ಉತ್ತರಪ್ರದೇಶದ ಸೋನ್‌ಭದ್ರ ಗ್ರಾಮಕ್ಕೆ ಭೇಟಿ ನೀಡಲು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಶುಕ್ರವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಜುಲೈ 17ರಂದು ಸೋನ್‌ಭದ್ರ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ 10 ಮಂದಿ ಹತ್ಯೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪ್ರಿಯಾಂಕಾ ಗಾಂಧಿ ವಾದ್ರಾ ನಿಷೇಧಾಜ್ಞೆ ಉಲ್ಲಂಘಿಸಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು. ವಾರಣಾಸಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಬಿಎಚ್‌ಯು ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಕಳೆದ ವಾರ ಘರ್ಷಣೆಯಲ್ಲಿ ಗಾಯಗೊಂಡವರನ್ನು ಭೇಟಿಯಾಗಿದ್ದರು. ಅಲ್ಲಿಂದ ಅವರು ಘಟನೆ ನಡೆದ ಸೋನ್‌ಭದ್ರಕ್ಕೆ ತೆರಳುತ್ತಿದ್ದ ಸಂದರ್ಭ ನರೈನ್‌ಪುರದಲ್ಲಿ ಪೊಲೀಸರು ಅವರನ್ನು ತಡೆದರು.

 ಇದನ್ನು ಪ್ರತಿಭಟಿಸಿ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ಬೆಂಬಲಿಗರೊಂದಿಗೆ ಅಲ್ಲೇ ಧರಣಿಗೆ ಕುಳಿತರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವಶಕ್ಕೆ ತೆಗೆದುಕೊಂಡು ಚುನಾರ್ ಅತಿಥಿ ಗೃಹಕ್ಕೆ ಕರೆದೊಯ್ದರು.

ಉತ್ತರಪ್ರದೇಶ ಸರಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪ್ರಿಯಾಂಕಾ ಗಾಂಧಿ ವಾದ್ರಾ ಬಂಧನ ಉತ್ತರಪ್ರದೇಶದ ಆದಿತ್ಯನಾಥ್ ಸರಕಾರದ ನಿರಂಕುಶ ಅಧಿಕಾರದ ಬಳಕೆ ಎಂದಿದ್ದಾರೆ. ಉತ್ತರಪ್ರದೇಶದ ಸೋನ್‌ಭದ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನ ಕಾನೂನು ಬಾಹಿರ. ಇದು ನಮ್ಮನ್ನು ವಿಚಲಿತಗೊಳಿಸಿದೆ. ತಮ್ಮ ಭೂಮಿಯಿಂದ ತೆರವುಗೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹತ್ಯೆಯಾದ 10 ಮಂದಿ ಆದಿವಾಸಿ ರೈತರ ಕುಟುಂಬದವರನ್ನು ಭೇಟಿಯಾಗಲು ತಡೆ ಒಡ್ಡುತ್ತಿರುವುದು ಆದಿತ್ಯನಾಥ್ ಸರಕಾರದ ನಿರಂಕುಶ ಅಧಿಕಾರದ ಬಳಕೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News