ನಕಲಿ ಯೋಜನೆಗಳ ತಡೆಗೆ ಮಸೂದೆ ಮಂಡನೆ

Update: 2019-07-19 15:30 GMT

ಹೊಸದಿಲ್ಲಿ, ಜು.19: ದೇಶದಲ್ಲಿ ಜನರಿಗೆ ವಿವಿಧ ಆಮಿಷ ನೀಡಿ ಠೇವಣಿ ರೂಪದಲ್ಲಿ ಹಣವನ್ನು ಪಡೆಯುವ ದಂಧೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶುಕ್ರವಾರ ಲೋಕಸಭೆಯಲ್ಲಿ ಮಸೂದೆ ಮಂಡಿಸಲಾಯಿತು.

ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾಯ್ದೆ, 2019 ಅನ್ನು ಈ ಹಿಂದೆ ಜಾರಿಗೆ ತರಲಾಗಿದ್ದ ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಸುಗ್ರೀವಾಜ್ಞೆ, 2019ರ ಬದಲಾಗಿ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಗದ್ದಲವೆಬ್ಬಿಸುತ್ತಿರುವ ಮಧ್ಯೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೂತನ ಮಸೂದೆಯನ್ನು ಮಂಡಿಸಿದರು.

ಅಕ್ರಮವಾಗಿ ಹಣ ಪಡೆದು ನಡೆಸಲಾಗುವ ಯೋಜನೆಗಳಲ್ಲಿ ಠೇವಣಿಗಳನ್ನು ಮರುಪಾವತಿಸಲು ಮತ್ತು ಯೋಜನೆ ಆರಂಭಿಸಿದವರನ್ನು ಶಿಕ್ಷಿಸಲು ಪ್ರಸ್ತಾವಿತ ಮಸೂದೆಯಲ್ಲಿ ಸಾಕಷ್ಟು ನಿಬಂಧನೆಗಳು ಲಭ್ಯವಿದೆ. ನಿಯಂತ್ರಿತ ಠೇವಣಿ ಯೋಜನೆ ನಿಷೇಧ ಮಸೂದೆ, 2018 ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ಪರಿಗಣಿಸಲ್ಪಟ್ಟಿತ್ತು ಮತ್ತು ಚರ್ಚೆಯ ನಂತರ ಅಂಗೀಕರಿಸಲ್ಪಟ್ಟಿತ್ತು. ಆದರೆ ಈ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಪರಿಚಯಿಸುವ ದಿನ ಸದನ ಅನಿರ್ದಿಷ್ಟ ಸಮಯದವರೆಗೆ ಮುಂದೂಡಲ್ಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News