ಕುಲಭೂಷಣ್ ರಾಜತಾಂತ್ರಿಕ ನೆರವು ಒದಗಿಸಿದ ಪಾಕಿಸ್ತಾನ

Update: 2019-07-19 15:45 GMT

ಹೊಸದಿಲ್ಲಿ, ಜು.19: ಮರಣ ದಂಡನೆಗೆ ಒಳಗಾಗಿರುವ ಕುಲಭೂಷಣ್ ಯಾದವ್‌ರಿಗೆ ರಾಜತಾಂತ್ರಿಕ ನೆರವು ಒದಗಿಸಬೇಕು ಎಂದು ಹೇಗ್‌ನಲ್ಲಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಯಾದವ್‌ರಿಗೆ ಭಾರತದ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಸಂಪರ್ಕಿಸುವ ಹಕ್ಕನ್ನು ನೀಡಲಾಗಿದೆ ಎಂದು ಪಾಕಿಸ್ತಾನ ಶುಕ್ರವಾರ ತಿಳಿಸಿದೆ.

ಐಸಿಜೆ ನಿರ್ಧಾರದ ಅನುಸಾರವಾಗಿ, ಕಮಾಂಡರ್ ಕುಲಭೂಷಣ್ ಯಾದವ್‌ ಅವರಿಗೆ ವಿಯೆನ್ನ ಒಪ್ಪಂದದ ರಾಜತಾಂತ್ರಿಕ ಸಂಬಂಧಗಳ ಬಗೆಗಿನ 36ನೇ ವಿಧಿಯ ಪ್ಯಾರಗ್ರಾಫ್ 1(ಬಿ)ಯಡಿ ಹಕ್ಕುಗಳ ಕುರಿತು ಮಾಹಿತಿ ನೀಡಲಾಗಿದೆ. ಒಂದು ಜವಾಬ್ದಾರಿಯುತ ರಾಷ್ಟ್ರವಾಗಿ, ಜಾದವ್ ಅವರಿಗೆ ಪಾಕಿಸ್ತಾನದ ಕಾನೂನಿನ ಪ್ರಕಾರ ರಾಜತಾಂತ್ರಿಕ ನೆರವನ್ನು ನೀಡಲಾಗುವುದು, ಅದಕ್ಕಾಗಿ ಸಾಧ್ಯತೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನ ಐಸಿಜೆ ತೀರ್ಪನ್ನು ಪಾಲಿಸಬೇಕು ಎಂದು ಭಾರತ ಗುರುವಾರ ತಿಳಿಸಿತ್ತು. ಭಾರತ ಮಾಡಿರುವ ಹಲವು ಮನವಿಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಯಾದವ್‌ರಿಗೆ ತಕ್ಷಣ ರಾಜತಾಂತ್ರಿಕ ನೆರವನ್ನು ಒದಗಿಸಬಹುದಾಗಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಸೇನಾ ನ್ಯಾಯಾಲಯ 2017ರಲ್ಲಿ ಮರಣ ದಂಡನೆ ವಿಧಿಸಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗೆ ರಾಜತಾಂತ್ರಿಕ ನೆರವನ್ನು ಒದಗಿಸದೆ ಪಾಕಿಸ್ತಾನ ವಿಯೆನ್ನ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಐಸಿಜೆ ತನ್ನ ಆದೇಶದಲ್ಲಿ ತಿಳಿಸಿತ್ತು.

ಜೈಲಿನಲ್ಲಿರುವ ಯಾದವ್‌ರಿಗೆ ಅವರನ್ನು ಭೇಟಿಯಾಗಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡಿ ಎಂದು ಭಾರತ ಮಾಡಿದ ಮನವಿಗಳಿಗೆ ಪಾಕಿಸ್ತಾನ ಸ್ಪಂದಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News