ದಲಿತರು ಚೆನ್ನಾಗಿರುವುದನ್ನು ನೋಡಲು ಬಿಜೆಪಿ ಬಯಸುವುದಿಲ್ಲ: ಸೋದರನ ವಿರುದ್ಧ ಐಟಿ ಕ್ರಮಕ್ಕೆ ಮಾಯಾವತಿ ವಾಗ್ದಾಳಿ

Update: 2019-07-19 16:02 GMT

ಲಕ್ನೋ,ಜು.19: ಆಡಳಿತ ಬಿಜೆಪಿ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಬಿಎಸ್‌ಪಿ ನಾಯಕಿ ಮಾಯಾವತಿ ಅವರು,ಚುನಾವಣೆ ಸಂದರ್ಭದಲ್ಲಿ ಪಕ್ಷವು ಸ್ವೀಕರಿಸಿದ್ದ ದೇಣಿಗೆಗಳನ್ನು ಬಹಿರಂಗಗೊಳಿಸುವಂತೆ ಅದಕ್ಕೆ ಸವಾಲೊಡ್ಡಿದರು. ಹಿಂದುಳಿದ ಜಾತಿಗಳಿಗೆ ಸೇರಿದ ಜನರು ಚೆನ್ನಾಗಿರುವುದನ್ನು ನೋಡಲು ಬಿಜೆಪಿ ಮತ್ತು ಆರೆಸ್ಸೆಸ್ ಬಯಸುವುದಿಲ್ಲ ಎಂದು ಅವರು ಆರೋಪಿಸಿದರು. ಮಾಯಾವತಿಯರ ಸೋದರನಿಗೆ ಸೇರಿದ 400 ಕೋ.ರೂ.ಮೌಲ್ಯದ ನಿವೇಶನವನ್ನು ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದರು.

ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ತನ್ನ ಬ್ಯಾಂಕ್‌ ಖಾತೆಗಳಲ್ಲಿ 2,000 ಕೋ.ರೂ.ಗಳನ್ನು ಸ್ವೀಕರಿಸಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆ ಹಣವನ್ನು ನೀಡಿದ್ದು ಯಾರು ಎನ್ನುವುದು ಸ್ಪಷ್ಟವಿಲ್ಲ ಮತ್ತು ಅದರ ಮೂಲವನ್ನು ತಿಳಿಯಲು ಪ್ರತಿಯೊಬ್ಬರೂ ಬಯಸಿದ್ದಾರೆ. ಅದು ಬೇನಾಮಿಯಾಗಿದೆ ಎಂದ ಮಾಯಾವತಿ,ಈ ಹಣದ ಮೂಲಕ ಬಡವರು ಮತ್ತು ಶೋಷಿತರ ಮತಗಳನ್ನು ಖರೀದಿಸಲಾಗಿತ್ತು ಎಂದು ಆರೋಪಿಸಿದರು.

ಶೋಷಿತ ವರ್ಗಗಳ ಜನರ ಪ್ರಗತಿಯನ್ನು,ವಿಶೇಷವಾಗಿ ಉದ್ಯಮಗಳಲ್ಲಿ ಅವರ ಏಳಿಗೆಯನ್ನು ಬಿಜೆಪಿ ಸಹಿಸುವುದಿಲ್ಲ ಮತ್ತು ಅವರ ವಿರುದ್ಧ ಅಧಿಕಾರ ಹಾಗೂ ಸರಕಾರಿ ಯಂತ್ರವನ್ನು ಬಳಸುತ್ತದೆ ಎಂದರು.

ಮಾಯಾವತಿಯವರ ಸೋದರ ಆನಂದ ಕುಮಾರ ಮತ್ತು ಅವರ ಪತ್ನಿ ವಿಚಿತ್ರಲತಾ ಅವರು ಅಕ್ರಮವಾಗಿ ಹೊಂದಿದ್ದರೆನ್ನಲಾದ    ಯ್ಡೂದಲ್ಲಿನ ಏಳು ಎಕರೆ ಭೂಮಿಯನ್ನು ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ. ಇವರಿಬ್ಬರೂ ಆಸ್ತಿಯ ನಕಲಿ ಮಾಲಿಕರಾಗಿದ್ದರು ಎಂದು ಸರಕಾರಿ ಆದೇಶದಲ್ಲಿ ಹೇಳಲಾಗಿದೆ. ಆನಂದ ಕುಮಾರ ಅವರು ಇತ್ತೀಚಿಗಷ್ಟೇ ಬಿಎಸ್‌ಪಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

  ಶೋಷಿತ ಜನರ ಧ್ವನಿಯನ್ನಡಗಿಸುವ ಬಿಜೆಪಿಯ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದ ಮಾಯಾವತಿ,ಅವರು (ಬಿಜೆಪಿ) ತಮ್ಮನ್ನು ಸತ್ಯ ಹರಿಶ್ಚಂದ್ರ ಎಂದು ತಿಳಿದುಕೊಂಡಿದ್ದರೆ ಅವರು ತಮ್ಮವರ ರಾಜಕೀಯಕ್ಕೆ ಬರುವ ಮೊದಲಿನ ಮತ್ತು ನಂತರದ ಸಂಪತ್ತಿನ ಬಗ್ಗೆ ತನಿಖೆ ನಡೆಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News