ಮಾನವ ಹಕ್ಕುಗಳ ಕಾಯ್ದೆಗೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

Update: 2019-07-19 16:54 GMT

ಹೊಸದಿಲ್ಲಿ,ಜು.19: ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ,1993ಕ್ಕೆ ತಿದ್ದುಪಡಿಗಳನ್ನು ತರುವ ಮಸೂದೆಯನ್ನು ಲೋಕಸಭೆಯು ಶುಕ್ರವಾರ ಅಂಗೀಕರಿಸಿತು. ತಿದ್ದುಪಡಿಗಳು ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್‌ಎಚ್‌ಆರ್‌ಸಿ) ಮತ್ತು ರಾಜ್ಯ ಮಾನವ ಹಕ್ಕು ಆಯೋಗ (ಎಸ್‌ಎಚ್‌ಆರ್‌ಸಿ)ಗಳ ರಚನೆ ಮತ್ತು ನೇಮಕಾತಿ ನಿಬಂಧನೆಗಳಲ್ಲಿ ಬದಲಾವಣೆಗಳನ್ನು ತರಲು ಉದ್ದೇಶಿಸಿವೆ.

ಮಸೂದೆಯು ಎನ್‌ಎಚ್‌ಆರ್‌ಸಿ ಮತ್ತು ಎಸ್‌ಎಚ್‌ಆರ್‌ಸಿಗಳನ್ನು ಹೆಚ್ಚು ಪ್ರಾತಿನಿಧಿಕ ಮತ್ತು ಶಕ್ತಿಶಾಲಿಯನ್ನಾಗಿಸ ಲಿದೆ ಎಂದು ಕೇಂದ್ರವು ಹೇಳಿದರೆ, ಬದಲಾವಣೆಗಳು ತೃಪ್ತಿಕರವಾಗಿಲ್ಲ ಮತ್ತು ಅಲಂಕಾರಿಕವಾಗಿವೆ ಹಾಗೂ ಮಾನವ ಹಕ್ಕು ಸಂಸ್ಥೆಗಳಿಗೆ ಅಂತರರಾಷ್ಟ್ರೀಯ ಮಾನದಂಡವಾಗಿರುವ ಪ್ಯಾರಿಸ್ ನೀತಿಗಳಿಗನುಗುಣವಾಗಿಲ್ಲ ಎಂದು ಪ್ರತಿಪಕ್ಷವು ಪ್ರತಿಪಾದಿಸಿತು.

ಮಸೂದೆಯು ಭಾರತದ ಮಾಜಿ ಮುಖ್ಯ ನ್ಯಾಯಾಧೀಶರು ಮಾತ್ರವಲ್ಲ,ಎಲ್ಲ ಮಾಜಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಎನ್‌ಎಚ್‌ಆರ್‌ಸಿಯ ಅಧ್ಯಕ್ಷರನ್ನಾಗಿ ನೇಮಿಸಲು ಅವಕಾಶವನ್ನು ಕಲ್ಪಿಸಿದೆ. ಇಬ್ಬರು ಮಾನವ ಹಕ್ಕು ತಜ್ಞರ ಬದಲು ಓರ್ವ ಮಹಿಳೆ ಸೇರಿದಂತೆ ಮೂವರು ಮಾನವ ಹಕ್ಕು ತಜ್ಞರನ್ನು ಹಾಗೂ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ,ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದಂತಹ ಇತರ ಆಯೋಗಗಳ ಅಧ್ಯಕ್ಷರನ್ನೂ ಎನ್‌ಎಚ್‌ಆರ್‌ಸಿಯ ಸದಸ್ಯರನ್ನಾಗಿ ನೇಮಕಗೊಳಿಸಲು ಮಸೂದೆಯು ಪ್ರಸ್ತಾಪಿಸಿದೆ.

  ಮಸೂದೆಯು ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕು ಆಯೋಗಗಳ ಅಧಿಕಾರಾವಧಿಯನ್ನು ಈಗಿನ ಐದು ವರ್ಷಗಳಿಂದ ಮೂರು ವರ್ಷಗಳಿಗೆ ತಗ್ಗಿಸಲಿದೆ. ಆಯೋಗಕ್ಕೆ ಸದಸ್ಯರ ಮರುನೇಮಕಕ್ಕೆ ಐದು ವರ್ಷಗಳ ಮಿತಿಯನ್ನೂ ಅದು ತೆಗೆದುಹಾಕಲಿದೆ.

 ಮಸೂದೆಯಲ್ಲಿನ ಬದಲಾವಣೆಗಳು ಹೆಚ್ಚಿನ ಆಡಳಿತಾತ್ಮಕ ಮತ್ತು ಹಣಕಾಸು ಅಧಿಕಾರಗಳೊಂದಿಗೆ ಮಾನವ ಹಕ್ಕುಗಳಿಗೆ ಸುರಕ್ಷತೆಯನ್ನು ಒದಗಿಸಲಿವೆ ಎಂದು ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ತಿಳಿಸಿದರು.

ಆದರೆ ಇನ್ನಷ್ಟು ಉತ್ತಮ ತಿದ್ದುಪಡಿಗಳಿಗೆ ಪ್ರತಿಪಕ್ಷ ಸದಸ್ಯರು ಆಗ್ರಹಿಸಿದರು.

ವಕೀಲ ದಂಪತಿಗಳಾದ ಇಂದಿರಾ ಜೈಸಿಂಗ್ ಮತ್ತು ಆನಂದ ಗ್ರೋವರ್ ಅವರ ನಿವಾಸಗಳು ಮತ್ತು ಕಚೇರಿಗಳಲ್ಲಿ ಇತ್ತೀಚಿನ ಶೋಧ ಕಾರ್ಯಾಚರಣೆಗಳು ಮತ್ತು ಕಳೆದ ವರ್ಷ ಮಾನವ ಹಕ್ಕುಗಳ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರ ಬಂಧನವನ್ನು ಉಲ್ಲೇಖಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು,ಪ್ರಸಕ್ತ ಸರಕಾರದ ಆಡಳಿತದಲ್ಲಿ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಧ್ವನಿಯನ್ನುಡುಗಿಸಲಾಗುತ್ತಿದೆ ಎಂದರು.

ಮಸೂದೆಯಲ್ಲಿ ಹಲವಾರು ಲೋಪಗಳಿವೆ ಮತ್ತು ಮಾನವ ಹಕ್ಕು ಸಂಸ್ಥೆಗಳಿಗೆ ಸ್ವಾಯತ್ತೆಯನ್ನು ತರಲು ಅದು ವಿಫಲಗೊಂಡಿದೆ ಎಂದರು.

ಡಿಎಂಕೆ ಸದಸ್ಯೆ ಕನಿಮೋಳಿ ಮತ್ತು ಕಾಂಗ್ರೆಸ್ ಸದಸ್ಯ ಸೌಗತ ರಾಯ್ ಅವರೂ ಮಸೂದೆಯನ್ನು ಟೀಕಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News