ಬಾಲಕಿಯ ಅತ್ಯಾಚಾರ: ಸೌದಿಗೆ ತೆರಳಿ ಆರೋಪಿಯನ್ನು ಬಂಧಿಸಿದ ಮೆರಿನ್ ಜೋಸೆಫ್

Update: 2019-07-19 17:35 GMT

ತಿರುವನಂತಪುರಂ, ಜು.17: ಕೇರಳದಲ್ಲಿ ದಲಿತ ಬಾಲಕಿಯ ಅತ್ಯಾಚಾರ ನಡೆಸಿ ಬಳಿಕ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇರಳದ ಕೊಲ್ಲಂ ಪೊಲೀಸ್ ಆಯುಕ್ತೆ ಮೆರಿನ್ ಜೋಸೆಫ್ ಮತ್ತವರ ತಂಡ ಸೌದಿ ಅರೇಬಿಯಾದ ರಿಯಾದ್‌ ನಲ್ಲಿ ಬಂಧಿಸಿದೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದ ಕೊಲ್ಲಂ ನಿವಾಸಿ ಸುನಿಲ್ ಕುಮಾರ್ ರಜೆ ಕಳೆಯಲು ಭಾರತಕ್ಕೆ ಬಂದಿದ್ದ ಸಂದರ್ಭ 2017ರಲ್ಲಿ ತನ್ನ ಸ್ನೇಹಿತನ ಸಹೋದರನ ಪುತ್ರಿ, 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಸೌದಿಗೆ ತೆರಳಿ ತಲೆಮರೆಸಿಕೊಂಡಿದ್ದ. ಬಾಲಕಿ ವಿಷಯವನ್ನು ಮನೆಯವರಲ್ಲಿ ಹೇಳಿದಾಗ ಪ್ರಕರಣ ದಾಖಲಿಸಲಾಗಿತ್ತು. ಈತನ ಪತ್ತೆಗಾಗಿ ಇಂಟರ್‌ ಪೋಲ್ ನೋಟಿಸ್ ಜಾರಿಯಾಗಿತ್ತು. ಈ ಮಧ್ಯೆ ಬಾಲಕಿ ಹಾಗೂ ಆಕೆಯನ್ನು ಸುನಿಲ್‌ ಗೆ ಪರಿಚಯಿಸಿದ್ದ ಅವಳ ಸಂಬಂಧಿ ಯುವಕ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಈ ಪ್ರಕರಣ ನನೆಗುದಿಗೆ ಬಿದ್ದಿತ್ತು.

ಜೂನ್‌ ನಲ್ಲಿ ಕೊಲ್ಲಂನ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡ ಮೆರಿನ್ ಜೋಸೆಫ್, ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿಗೆ ಶಿಕ್ಷೆಯಾಗಲೇಬೇಕು ಎಂದು ಪಣತೊಟ್ಟು ಈ ಪ್ರಕರಣದ ಬೆನ್ನು ಬಿದ್ದರು. ಇವರ ನಿರಂತರ ಪ್ರಯತ್ನಕ್ಕೆ ಕಡೆಗೂ ಫಲ ದೊರಕಿದ್ದು, ಸುನಿಲ್‌ನನ್ನು ಬಂಧಿಸಿ ಜೈಲಿನಲ್ಲಿಟ್ಟಿರುವುದಾಗಿ ಕೆಲ ದಿನಗಳ ಹಿಂದೆ ಸೌದಿ ಪೊಲೀಸರು ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಅಲ್ಲಿಗೆ ತೆರಳಿದ ಮೆರಿನ್ ಜೋಸೆಫ್ ಮತ್ತವರ ತಂಡ ಇದೀಗ ಆತನನ್ನು ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News