“ನಾನು ವಾಪಸ್ ಬರುತ್ತೇನೆ”: ಸೋನಭದ್ರ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾದ ನಂತರ ಪ್ರಿಯಾಂಕ ಗಾಂಧಿ

Update: 2019-07-20 10:10 GMT
Photo: hindustantimes.com

ವಾರಣಾಸಿ, ಜು.20: “ನಾನು ಮತ್ತೆ ಬರುತ್ತೇನೆ'' -ಹೀಗೆಂದು ಉತ್ತರ ಪ್ರದೇಶದ ಅಧಿಕಾರಿಗಳಿಗೆ ಹೇಳಿದವರು ಎಐಸಿಸಿ ಪ್ರಧಾನ  ಕಾರ್ಯದರ್ಶಿ ಪ್ರಿಯಾಂಕ ಗಾಂಧಿ.

ಹತ್ತು ಮಂದಿಯನ್ನು ಬಲಿ ಪಡೆದ ಮಿರ್ಜಾಪುರ್ ಜಿಲ್ಲೆಯ ಸೋನಭದ್ರ ಸಮೀಪದ ಉಂಭಾ ಎಂಬಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲೆಂದು ಶುಕ್ರವಾರ ಬಂದಿದ್ದ ಪ್ರಿಯಾಂಕ ಅವರನ್ನು ಜಿಲ್ಲಾಡಳಿತದ ಅಧಿಕಾರಿಗಳು ತಡೆದು ವಶಕ್ಕೆ ಪಡೆದು ರಾತ್ರಿಯಿಡೀ ಗೆಸ್ಟ್ ಹೌಸಿನಲ್ಲಿರಿಸಿದ್ದರು. ಇಂದು ಬೆಳಗ್ಗೆ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲು ಅನುಮತಿಸಿ ನಂತರ ‘ಅವರನ್ನು ಬಂಧಿಸಲಾಗಿಲ್ಲ, ಮಿರ್ಜಾಪುರ ಹೊರತುಪಡಿಸಿ ಆಕೆ ಬೇರೆಲ್ಲಿ ಬೇಕಾದರೂ ಹೋಗಬಹುದು’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ ನಂತರ ಪ್ರಿಯಾಂಕಾ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

“ನನ್ನನ್ನು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗದಂತೆ ತಡೆದ ಅಧಿಕಾರಿಗಳು ಈಗ ನನ್ನನ್ನು ಬಂಧಿಸಲಾಗಿಲ್ಲ, ನಾನು ಎಲ್ಲಿ ಬೇಕಾದರೂ ಹೋಗಲು ಸ್ವತಂತ್ರ ಎನ್ನುತ್ತಿದ್ದಾರೆ. ನಾನು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿದ್ದೇನೆ, ಸದ್ಯ ನಾನು ವಾಪಸಾಗುತ್ತಿದ್ದೇನೆ. ಆದರೆ ತಿರುಗಿ ಮತ್ತೆ ಬರುತ್ತೇನೆ ಎಂದು ಅಧಿಕಾರಿಗಳಿಗೆ ಹೇಳ ಬಯಸುತ್ತೇನೆ'' ಎಂದು ಪ್ರಿಯಾಂಕ ಹೇಳಿದರು.

ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವೊದಗಿಸಬೇಕೆಂದು ಆಗ್ರಹಿಸಿದ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.

 ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಯಬೇಕು, ಸಂತ್ರಸ್ತರ ಕುಟುಂಬಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಹಾಗೂ ಆದಿವಾಸಿಗಳು ಉಳುವ ಭೂಮಿಯ ಹಕ್ಕುಗಳನ್ನು ಅವರಿಗೇ ನೀಡಬೇಕು ಎಂದು ಪ್ರಿಯಾಂಕ ರಾಜ್ಯದ ಆದಿತ್ಯನಾಥ್ ಸರಕಾರವನ್ನು ಆಗ್ರಹಿಸಿದರು.

ಘಟನೆಯಲ್ಲಿ ಸಾವನ್ನಪ್ಪಿದ ಹತ್ತು ಮಂದಿಯ ಕುಟುಂಬ ಸದಸ್ಯರನ್ನು ಪ್ರಿಯಾಂಕ ತಾವಿದ್ದ ಚುನಾರ್ ಫೋರ್ಟ್ ಅತಿಥಿ ಗೃಹದಲ್ಲಿ ಭೇಟಿಯಾದರು. ಕೆಲವರಂತೂ ದುಃಖ ತಡೆಯಲಾರದೆ ಜೋರಾಗಿ ಅತ್ತು ಬಿಟ್ಟರು. ಪ್ರಿಯಾಂಕ ಅವರೆಲ್ಲರನ್ನು ಸಮಾಧಾನ ಪಡಿಸಿ ಅವರಿಗೆ ಕುಡಿಯಲು ನೀರು ನೀಡಿದರು. “ನಾವು ನಿಮ್ಮ ಜತೆಗಿದ್ದೇವೆ, ನಿಮ್ಮ ದನಿಯಾಗುತ್ತೇವೆ” ಎಂದು ಪ್ರಿಯಾಂಕ ಅವರನ್ನು ಸಂತೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News