ಬ್ಯಾಂಕಿಂಗ್ ಕ್ಷೇತ್ರ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ: ಕೇಂದ್ರ ಸಚಿವ ಗಡ್ಕರಿ ಕಳವಳ

Update: 2019-07-20 15:46 GMT

ನಾಗ್ಪುರ,ಜು.20: ಬ್ಯಾಂಕಿಂಗ್ ಕ್ಷೇತ್ರವು ವಿವಿಧ ರಂಗಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಕೇಂದ್ರ ಹೆದ್ದಾರಿಗಳು ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶನಿವಾರ ಇಲ್ಲಿ ಕಳವಳ ವ್ಯಕ್ತಪಡಿಸಿದರು.

ಪಾರದರ್ಶಕತೆಯನ್ನು ಖಚಿತಪಡಿಸುವುದು ಮತ್ತು ಠೇವಣಿಗಳ ಮೇಲೆ ಪ್ರತಿಫಲವನ್ನು ನೀಡುವುದೂ ಬ್ಯಾಂಕಿಂಗ್ ಕ್ಷೇತ್ರದ ಮುಂದಿರುವ ಸವಾಲುಗಳಾಗಿವೆ ಎಂದ ಅವರು,ಜನರೂ ತಮ್ಮ ಸಾಲಗಳನ್ನು ಸಕಾಲಕ್ಕೆ ಬ್ಯಾಂಕುಗಳಿಗೆ ಮರುಪಾವತಿ ಮಾಡಬೇಕು ಎಂದರು.

ಇಂಡಿಯನ್ ಬ್ಯಾಂಕಿನ ವಲಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಎಂಎಸ್‌ಎಂಇ ಕ್ಷೇತ್ರದಲ್ಲಿ ಬ್ಯಾಂಕ್ ಸಾಲಗಳನ್ನು 59 ನಿಮಿಷಗಳಲ್ಲಿ ಮಂಜೂರು ಮಾಡಲಾಗುವುದೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಸಾಲ ಮಂಜೂರಾತಿಯು ಜಿಎಸ್‌ಟಿ ಮತ್ತು ಆದಾಯ ತೆರಿಗೆಯೊಂದಿಗೆ ತಳುಕು ಹಾಕಿಕೊಂಡಿದೆ. ಉತ್ತಮ ತೆರಿಗೆ ಪಾವತಿಯ ದಾಖಲೆ ಹೊಂದಿರುವವರು ತ್ವರಿತವಾಗಿ ಸಾಲಗಳನ್ನು ಪಡೆಯತ್ತಾರೆ ಎಂದರು.

ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳಡಿ ಮಂಜೂರಾದ ಸಾಲಗಳನ್ನು ತ್ವರಿತವಾಗಿ ವಿತರಣೆಯಾಗುವಂತೆ ನೋಡಿಕೊಳ್ಳುವುದು ಬ್ಯಾಂಕುಗಳ ಕರ್ತವ್ಯವಾಗಿದೆ ಎಂದರು.

ಎಂಎಸ್‌ಎಂಇ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಾಗೂ ಬೆಳವಣಿಗೆಯನ್ನು ಉತ್ತೇಜಿಸಲು ಕೈಮಗ್ಗ ಮತ್ತು ಕರಕುಶಲ ಕೈಗಾರಿಕೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಗಡ್ಕರಿ,

ಮಹಾರಾಷ್ಟ್ರದ ವಿದರ್ಭದಲ್ಲಿಯ ಹತ್ತಿ ಬೆಳೆಯುವ ಪ್ರದೇಶದಲ್ಲಿ ಸೋಲಾರ್ ಚರಖಾ ಕ್ಲಸ್ಟರ್‌ಗಳನ್ನು ಆರಂಭಿಸಲಾಗುವುದು ಮತ್ತು ರಫ್ತು ಗುಣಮಟ್ಟದ ಸಿದ್ಧ ಉಡುಪುಗಳನ್ನು ಅಲ್ಲಿ ತಯಾರಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News