‘ವಂದೇ ಭಾರತ್’ ಎಕ್ಸ್‌ಪ್ರೆಸ್ ತಯಾರಿಕೆ ಸ್ಪರ್ಧೆಯಲ್ಲಿ ಚೀನಾ ಕಂಪೆನಿಗಳು

Update: 2019-07-20 16:32 GMT

ಹೊಸದಿಲ್ಲಿ,ಜು.20: ದಿಲ್ಲಿಯಿಂದ ಮಾತಾ ವೈಷ್ಣೋದೇವಿಯ ತಳ ಕತ್ರಕ್ಕೆ ಪ್ರಯಾಣಿಕರನ್ನು ಸಾಗಿಸುವ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ನ ನಿರ್ಮಾಣಕ್ಕೆ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ರದ್ದಾಗಿದೆ. ಈ ಹಿನ್ನೆಲೆಯಲ್ಲಿ 1,500 ಕೋಟಿ ರೂ.ನ ಹೊಸ ಟೆಂಡರನ್ನು ಅತೀಶೀಘ್ರದಲ್ಲಿ, ಚೀನಾ ಸೇರಿದಂತೆ ಹೆಚ್ಚಿನ ತರ ಗುತ್ತಿಗೆದಾರರು ಭಾಗವಹಿಸಲು ಸಾಧ್ಯವಾಗುವಂತೆ ಪರಿಷ್ಕೃತ ನಿಯಮಗಳೊಂದಿಗೆ ಕರೆಯಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಹಿಂದಿನ ಟೆಂಡರ್‌ನಲ್ಲಿ ಚೀನಾದ ಕಂಪೆನಿಗಳಿಗೆ ಕೇವಲ ಸೀಮಿತ ವಸ್ತುಗಳ ತಯಾರಿಕೆಗೆ ಬಿಡ್ ಕರೆಯಲು ಅವಕಾಶ ನೀಡಲಾಗಿತ್ತು ಮತ್ತು ಚೀನಾದ ಕೇವಲ ಒಂದು ಕಂಪೆನಿ ಭಾಗವಹಿಸಿತ್ತು. ಆದರೆ ಸದ್ಯ ರೂಪಿಸಲಾಗುತ್ತಿರುವ ಹೊಸ ನಿಯಮಗಳಲ್ಲಿ ಚೀನಾದ ಕಂಪೆನಿಗಳಿಗೆ ಹೆಚ್ಚಿನ ಬಿಡ್ ಕರೆಯಲು ಅವಕಾಶ ನೀಡಲಾಗುತ್ತಿರುವುದರಿಂದ ದೇಶೀಯ ಕಂಪೆನಿಗಳಿಗೆ ಕಠಿಣ ಸ್ಪರ್ಧೆ ಎದುರಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮೊದಲ ‘ವಂದೇ ಭಾರತ’ ಎಕ್ಸ್‌ಪ್ರೆಸ್ ಈಗಾಗಲೇ ದಿಲ್ಲಿ ಮತ್ತು ವಾರಣಾಸಿ ನಡುವೆ ಕಾರ್ಯಾಚರಿಸುತ್ತಿದೆ. ಈ ಎಕ್ಸ್‌ಪ್ರೆಸ್ ಮೂಲಕ ರೈಲ್ವೇ ಇಲಾಕೆ ಪ್ರತಿದಿನ ಸರಾಸರಿ 45 ಲಕ್ಷ ರೂ. ಆದಾಯ ಗಳಿಸುತ್ತಿದೆ. ಇದು ಒಂದು ದಿನದ ರೈಲು ಪ್ರಯಾಣದಿಂದ ರೈಲ್ವೇ ಇಲಾಖೆ ಗಳಿಸುವ ಅತೀಹೆಚ್ಚು ಆದಾಯವಾಗಿದೆ. ಸದ್ಯ ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಸೆಳೆಯುವತ್ತ ಗಮನಹರಿಸಿರುವ ರೈಲ್ವೇ ಇಲಾಖೆ ದಿಲ್ಲಿಯಿಂದ ಕತ್ರಕ್ಕೆ ವಂದೆ ಭಾರತ್ ಎಕ್ಸ್‌ಪ್ರೆಸನ್ನು ಹೆಚ್ಚಿನ ಸುಧಾರಿತ ಸೌಲಭ್ಯಗಳು ಮತ್ತು ಕಡಿಮೆ ನಿಲುಗಡೆಯೊಂದಿಗೆ ಪರಿಚಯಿಸಲು ನಿರ್ಧರಿಸಿದೆ. ಈ ಮಾರ್ಗದಲ್ಲಿ ಸಾಗುವ ಸೂಪರ್ ಫಾಸ್ಟ್ ರೈಲು ನಿಲ್ದಾಣ ತಲುಪಲು 11 ಗಂಟೆ 40 ನಿಮಿಷ ತೆಗೆದುಕೊಂಡರೆ ವಂದೆ ಭಾರತ್ ಎಕ್ಸ್‌ಪ್ರೆಸ್ ಕೇವಲ 8 ಗಂಟೆಗಳಲ್ಲಿ ತನ್ನ ಗುರಿ ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News