ತಸ್ಲೀಮಾ ನಸ್ರೀನ್ ಭಾರತ ವಾಸ ಅನುಮತಿ 1 ವರ್ಷಕ್ಕೆ ವಿಸ್ತರಣೆ

Update: 2019-07-21 15:51 GMT

ಹೊಸದಿಲ್ಲಿ, ಜು.21: ಬಾಂಗ್ಲಾದೇಶ ಮೂಲದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಭಾರತದಲ್ಲಿ ವಾಸಿಸುವ ಅನುಮತಿ ಪತ್ರದ ವಾಯಿದೆಯನ್ನು ಗೃಹ ಇಲಾಖೆ 3 ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ವೀಡನ್ ಪ್ರಜೆಯಾಗಿರುವ 56 ವರ್ಷದ ತಸ್ಲೀಮಾ ನಸ್ರೀನ್‌ಗೆ 2004ರಿಂದ ನಿರಂತರವಾಗಿ ವಾಸ ಅನುಮತಿಯನ್ನು ನವೀಕರಿಸಲಾಗುತ್ತಿದೆ. ಕಳೆದ ವಾರ ವಾಸ ಅನುಮತಿಯನ್ನು ಮೂರು ತಿಂಗಳು ವಿಸ್ತರಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಇದನ್ನು ಒಂದು ವರ್ಷಕ್ಕೆ ವಿಸ್ತರಿಸುವಂತೆ ನಸ್ರೀನ್ ಗೃಹ ಸಚಿವ ಅಮಿತ್ ಶಾರನ್ನು ಟ್ವಿಟರ್ ಮೂಲಕ ಕೋರಿದ್ದರು. “ಪ್ರತೀ ಸಾರಿ ನಾನು ಭಾರತ ವಾಸ ಅನುಮತಿ ಪತ್ರವನ್ನು ಐದು ವರ್ಷಕ್ಕೆ ವಿಸ್ತರಿಸುವಂತೆ ಕೋರಿಕೆ ಸಲ್ಲಿಸಿದರೂ 3 ತಿಂಗಳು ಮಾತ್ರ ವಿಸ್ತರಿಸಲಾಗುತ್ತಿದೆ. ಇದೀಗ ಗೃಹ ಸಚಿವರು ಕನಿಷ್ಟ ಒಂದು ವರ್ಷವಾದರೂ ವಿಸ್ತರಿಸುತ್ತಾರೆ ಎಂದು ನಿರೀಕ್ಷಿಸುತ್ತಿದ್ದೇನೆ” ಎಂದು ನಸ್ರೀನ್ ಜುಲೈ 17ರಂದು ಟ್ವೀಟ್ ಮಾಡಿದ್ದರು.

ಗೃಹ ಸಚಿವಾಲಯದ ಆದೇಶದ ಬಳಿಕ ಪ್ರತಿಕ್ರಿಯಿಸಿರುವ ನಸ್ರೀನ್, “ಟ್ವಿಟರ್ ತುಂಬಾ ಪ್ರಭಾವಶಾಲಿಯಾಗಿದೆ. ನನ್ನ ವಾಸ ಅನುಮತಿ ಪತ್ರದ ವಾಯಿದೆ ವಿಸ್ತರಿಸುವಂತೆ ಜುಲೈ 16ಕ್ಕೆ ಟ್ವೀಟ್ ಮಾಡಿದ್ದೆ. ಮೂರು ತಿಂಗಳು ವಿಸ್ತರಿಸಿರುವುದಾಗಿ ಜುಲೈ 17ರಂದು ಟ್ವಿಟರ್‌ನಲ್ಲಿ ಸೂಚನೆ ಬಂದಿತ್ತು. ಇದನ್ನು ಒಂದು ವರ್ಷ ವಿಸ್ತರಿಸುವಂತೆ ಹಲವು ಟ್ಬಿಟರ್ ಮಿತ್ರರು ಮತ್ತೆ ಗೃಹ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು. ಇದೀಗ ಇದನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ನಿರ್ಧಾರ ಬದಲಿಸಿದ್ದಕ್ಕೆ ಗೃಹ ಇಲಾಖೆಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News