×
Ad

ಅಮೆರಿಕ ಮತ್ತು ಭಾರತಗಳಲ್ಲಿರುವ ‘ಪತಂಜಲಿ’ ಉತ್ಪನ್ನಗಳ ಲೇಬಲ್ ವಿವರಗಳಲ್ಲಿ ವ್ಯತ್ಯಾಸ

Update: 2019-07-21 21:50 IST

ಹೊಸದಿಲ್ಲಿ,ಜು.21: ಆಯುರ್ವೇದ ಔಷಧಿಗಳು ಮತ್ತು ಇತರ ಬಳಕೆದಾರ ವಸ್ತುಗಳನ್ನು ತಯಾರಿಸುವ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಅಮೆರಿಕಕ್ಕೆ ರಫ್ತು ಮಾಡುತ್ತಿರುವ ಎರಡು ಶರಬತ್ ಬಾಟಲಿಗಳ ಮೇಲಿನ ಲೇಬಲ್‌ಗಳಲ್ಲಿಯ ಹೇಳಿಕೆಗಳಲ್ಲಿ ವ್ಯತ್ಯಾಸವಿರುವುದನ್ನು ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ(ಯುಎಸ್‌ಎಫ್‌ಡಿಎ) ಪತ್ತೆ ಹಚ್ಚಿದೆ.

ಅಮೆರಿಕಕ್ಕೆ ರಫ್ತಾಗುವ ಶರಬತ್‌ಗಳಿಗೆ ಹೋಲಿಸಿದರೆ ಭಾರತದೊಳಗೆ ಮಾರಾಟಗೊಳ್ಳುವ ಶರಬತ್ ಬಾಟಲ್‌ಗಳ ಮೇಲೆ ಹೆಚ್ಚುವರಿ ಔಷಧೀಯ ಮತ್ತು ಆಹಾರ ಸಂಬಂಧಿ ಹೇಳಿಕೆಗಳಿವೆ ಎಂದು ಅದು ಹೇಳಿದೆ. ಸಂಸ್ಥೆಯು ರಫ್ತು ಉದ್ದೇಶಿತ ಮತ್ತು ದೇಶೀಯ ಮಾರಾಟಕ್ಕಾಗಿ ಪ್ರತ್ಯೇಕ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ಘಟಕಗಳನ್ನು ಹೊಂದಿದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

ಅಮೆರಿಕದ ಆಹಾರ ಸುರಕ್ಷತಾ ನಿಯಮಗಳು ಭಾರತೀಯ ಕಾನೂನುಗಳಿಗಿಂತ ಹೆಚ್ಚು ಕಟ್ಟುನಿಟ್ಟಾಗಿವೆ.

 ಕಂಪನಿಯು ಅಮೆರಿಕದಲ್ಲಿ ಮಾರಾಟ ಮಾಡುತ್ತಿರುವ ಉತ್ಪನ್ನಗಳು ತಪ್ಪು ಬ್ರಾಂಡ್‌ನದ್ದಾಗಿದ್ದರೆ ಉತ್ಪನ್ನದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಯುಎಸ್‌ಎಫ್‌ಡಿಎ ಎಚ್ಚರಿಕೆಯ ಪತ್ರವನ್ನು ಹೊರಡಿಸಬಹುದು. ಜೊತೆಗೆ ಉತ್ಪನ್ನದ ಇಡೀ ಬ್ಯಾಚ್‌ನ್ನು ವಶಪಡಿಸಿಕೊಳ್ಳಬಹುದು,ಕಂಪನಿಯ ವಿರುದ್ಧ ಅಮೆರಿಕದ ನ್ಯಾಯಾಲಯದಿಂದ ಆದೇಶವನ್ನು ಪಡೆದುಕೊಳ್ಳಬಹುದು. ಅದು ಕಂಪನಿಯ ವಿರುದ್ಧ ಕ್ರಿಮಿನಲ್ ಕ್ರಮವನ್ನೂ ಜರುಗಿಸಬಹುದು. ಈ ಕ್ರಮದಡಿ ಕಂಪನಿಗೆ ಐದು ಲಕ್ಷ ಡಾಲರ್‌ಗಳ ದಂಡ ಮತ್ತು ಕಂಪನಿಯ ಅಧಿಕಾರಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಯುಎಸ್‌ಎಫ್‌ಡಿಎದ ತನಿಖಾಧಿಕಾರಿ ಮೌರೀನ್ ಎ.ವೆಂಝೆಲ್ ಅವರು ಕಳೆದ ವರ್ಷದ ಮೇ 7-8ರಂದು ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಹರಿದ್ವಾರ ಸ್ಥಾವರದ ಯೂನಿಟ್ 3ರ ತಪಾಸಣೆಯನ್ನು ನಡೆಸಿದ್ದರು.

ಪತಂಜಲಿ ಬ್ರಾಂಡ್ ಹೆಸರಿನಲ್ಲಿ ‘ಬೆಲ್ ಶರಬತ್’ ಮತ್ತು ‘ಗುಲಾಬ್ ಶರಬತ್’ ಉತ್ಪನ್ನಗಳು ಭಾರತದಲ್ಲಿ ಮತ್ತು ಅಮೆರಿಕದಲ್ಲಿ ಮಾರಾಟವಾಗುತ್ತಿದ್ದು,ದೇಶಿಯ ಮಾರುಕಟ್ಟೆಗಾಗಿ ಉತ್ಪನ್ನಗಳ ಲೇಬಲ್‌ನಲ್ಲಿ ಔಷಧಿಯ ಮತ್ತು ಆಹಾರ ಸಂಬಂಧಿತ ಹೆಚ್ಚುವರಿ ಹೇಳಿಕೆಗಳನ್ನು ತಾನು ಗಮನಿಸಿದ್ದೇನೆ ಎಂದು ವೆಂಝೆಲ್ ತನ್ನ ತಪಾಸಣಾ ವರದಿಯಲ್ಲಿ ತಿಳಿಸಿದ್ದಾರೆ.

ತಪಾಸಣೆ ವೇಳೆ ಜೇನು ಸಂಸ್ಕರಣ ಸ್ಥಳದಲ್ಲಿ ಯಂತ್ರಗಳ ಮೇಲೆ ಪಾರಿವಾಳಗಳು ಹಾರಾಡುತ್ತಿದ್ದವು. ಅವುಗಳನ್ನು ಅಲ್ಲಿಂದ ನಿವಾರಿಸಲಾಗುವುದು ಎಂದು ಡಿಜಿಎಂ(ರಫ್ತು) ನಿತಿನ್ ಜೈನ್ ತಿಳಿಸಿದ್ದರು. ಮೇ 8ರಂದು ಜೇನು ಸಂಸ್ಕರಣ ಪುನರಾರಂಭಗೊಂಡಾಗ ಅಲ್ಲಿ ಪಾರಿವಾಳಗಳಿರಲಿಲ್ಲ. ಸ್ಥಾವರದಲ್ಲಿ ಜೇನನ್ನು ಅಂತಿಮ ಉತ್ಪನ್ನದ ಟ್ಯಾಂಕ್‌ನಿಂದ ಫಿಲ್ಲರ್‌ಗಳಿಗೆ ಪಂಪ್‌ ಮಾಡಲಾಗುತ್ತಿತ್ತು ಮತ್ತು ಇವೇ ಫಿಲ್ಲರ್‌ಗಳನ್ನು ದೇಶಿಯ ಮಾರಾಟದ ಮತ್ತು ರಫ್ತು ಉದ್ದೇಶಿತ ಜೇನು ಉತ್ಪನ್ನಗಳಿಗೆ ಬಳಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಊಟದ ಬಳಿಕ ಪಚನಕ್ಕೆ ನೆರವಾಗುವ ಡೈಜೆಸ್ಟಿಫ್ ಪಾನೀಯಗಳ ತಯಾರಿಕೆ ಕಟ್ಟಡವನ್ನು ತಾನು ಪ್ರವೇಶಿಸಿದ್ದ ಸಂದರ್ಭ ರಫ್ತು ಮತ್ತು ದೇಶಿಯ ಮಾರುಕಟ್ಟೆಗಳಿಗಾಗಿ ಪ್ರತ್ಯೇಕ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಪ್ರದೇಶಗಳಿವೆ ಎಂದು ತನಗೆ ತಿಳಿಸಲಾಗಿತ್ತು. ಪ್ರಯೋಗಾಲಯದ ಸಿಬ್ಬಂದಿಗಳು ಮತ್ತು ಬ್ಯಾಚ್ ರೆಕಾರ್ಡ್‌ಗಳು ಲಿಖಿತ ಕಾರ್ಯಾಚರಣೆ ಪದ್ಧತಿಗಳನ್ನು ಅನುಸರಿಸುತ್ತಿರುವಂತೆ ಕಂಡು ಬಂದಿತ್ತಾದರೂ ತನ್ನ ತಪಾಸಣೆಯ ವೇಳೆ ಅವು ಕಾರ್ಯಾಚರಣೆಯಲ್ಲಿರಲಿಲ್ಲ. ಹೀಗಾಗಿ ಉತ್ಪಾದನೆಯ ವೇಳೆ ಈ ಪದ್ಧತಿಗಳು ಅನುಸರಣೆಯಾಗುತ್ತಿದ್ದವೇ ಎನ್ನುವುದು ತನಗೆ ತಿಳಿದಿಲ್ಲ ಎಂದು ವೆಂಝೆಲ್ ವರದಿಯಲ್ಲಿ ಹೇಳಿದ್ದಾರೆ.

ತನ್ನ ತಪಾಸಣೆಯ ವೇಳೆ ಕಂಪನಿಯು ಅಮೆರಿಕಕ್ಕೆ ರಫ್ತು ಉದ್ದೇಶದ ಯಾವುದೇ ಸರಕುಗಳನ್ನು ತಯಾರಿಸುತ್ತಿರಲಿಲ್ಲ ಎಂದೂ ಅವರು ವರದಿಯಲ್ಲಿ ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News