ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂಗಾರು ಉತ್ತಮ ಮಳೆ: ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ಹೆಚ್ಚಳ

Update: 2019-07-22 09:36 GMT

ಬಂಟ್ವಾಳ, ಜು.21: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಯು ಮೈದುಂಬಿ ಹರಿಯುತ್ತಿದೆ. ಇದರಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ 5 ಮೀಟರ್‌ಗಿಂತ ಹೆಚ್ಚಿನ ನೀರನ್ನು ರವಿವಾರ ಹೊರಬಿಡಲಾಯಿತು.

ವಾರದಿಂದೀಚೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾಗ ತೊಡಗಿದೆ. ಈ ಹಿನ್ನೆಲೆಯಲ್ಲಿ ಶಂಭೂರು ಎಎಂಆರ್ ಡ್ಯಾಂನ ಎಲ್ಲ ಬಾಗಿಲ ಮೂಲಕ ನೀರು ಬಿಡುಗಡೆ ಮಾಡಿದ್ದು, ಇದರಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಂಬೆ ಡ್ಯಾಂನಲ್ಲಿ 5 ಮೀ. ನೀರು ಸಂಗ್ರಹವನ್ನು 2018ರ ಜನವರಿ ಬಳಿಕ 6 ಮೀಟರ್‌ಗೆ ಸಂಗ್ರಹ ಮಾಡಲಾಗಿತ್ತು. ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ ಈ ಬಾರಿ ಬೇಸಿಗೆಯಲ್ಲಿ 6 ಮೀಟರ್ ನೀರು ಸಂಗ್ರಹಿಸಿದ ಬಳಿಕ ಇದೇ ಮೊದಲ ಬಾರಿಗೆ ನೀರಿನ ಪ್ರಮಾಣ ಹೆಚ್ಚಾಗಿ ನೀರನ್ನು ಹೊರಕ್ಕೆ ಹರಿಯಬಿಡಲಾಗಿದೆ. ಮೇ ತಿಂಗಳಾಂತ್ಯದಲ್ಲೂ 6 ಮೀಟರ್ ನೀರು ಸಂಗ್ರಹಿಸಿದ್ದೂ ಬೇಸಿಗೆಯ ಬಿಸಿಲ ಬೇಗೆಗೆ ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿ ರೇಶನ್ ಮೂಲಕ ನೀರು ಸರಬಾರಜು ಮಾಡಲಾಗಿತ್ತು. ಬಳಿಕ ಪೂರ್ವ ಮುಂಗಾರಿನ ಮಳೆ ಆರಂಭವಾಗುತ್ತಿದ್ದಂತೆಯೇ ನೀರು ಪೂರೈಕೆಯಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ ಎಂದು ಡ್ಯಾಂನ ನಿರ್ವಾಹಕ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

7 ಮೀ. ಸಂಗ್ರಹದ ಕುರಿತು ಪ್ರಸ್ತಾವ ಬಂದಿಲ್ಲ: ಒಟ್ಟು 7 ಮೀಟರ್ ನೀರು ಸಂಗ್ರಹ ಸಾಮರ್ಥ್ಯದ ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್‌ನಿಂದ 6 ಮೀಟರ್ ಎತ್ತರಕ್ಕೆ ಸಂಗ್ರಹದಿಂದ ಬಿ.ಮೂಡ, ಸಜೀಪ ಮುನ್ನೂರು ಹಾಗೂ ಪಾಣೆಮಂಗಳೂರು ಗ್ರಾಮದಲ್ಲಿ ಜಮೀನು ಮುಳುಗಡೆಯಾಗಿರುವ ಜಮೀನು ಮಾಲಕರಿಗೆ ಸೂಕ್ತ ಪರಿಹಾರ ನೀಡಲಾಗಿದೆ. ಉಳಿದ ಸಂತ್ರಸ್ತ ಭೂ ಮಾಲಕರಿಗೆ ಪರಿಹಾರ ನೀಡಲು ಸರಕಾರ ಅನುದಾನವಿದೆ. ಆದರೆ, ಶೇ.50ರಷ್ಟು ಭೂ ಮಾಲಕರ ಜಾಗ ಪತ್ರಗಳ ಬಗ್ಗೆ ಗೊಂದಲಗಳಿದ್ದು, ಇತ್ಯರ್ಥವಾದ ಬಳಿಕ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು ಎಂದರು.

ಈ ಸಂದರ್ಭ ತುಂಬೆ ವೆಂಟೆಡ್ ಡ್ಯಾಂನಲ್ಲಿ 7 ಮೀ. ನೀರು ಸಂಗ್ರಹಿಸುವ ಬಗ್ಗೆ ಇದುವರೆಗೂ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ಪತ್ರಿಕೆಗೆ ತಿಳಿಸಿದ್ದಾರೆ.

ಮಳೆಗಾಲದಲ್ಲಿ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹದಲ್ಲಿ ಹೆಚ್ಚಳವಿಲ್ಲ. ಇದೀಗ 5 ಮೀಟರ್‌ನಷ್ಟು ಮಾತ್ರ ನೀರನ್ನು ಡ್ಯಾಂನಲ್ಲಿ ಕಾಯ್ದಿರಿಸಲಾಗುತ್ತಿದೆ. ಈ ವರ್ಷದ ಡಿಸೆಂಬರ್ ತಿಂಗಳಿನವರೆಗೂ ನೀರಿನ ಒಳಹರಿವು ಇರುತ್ತವೆ. ಅಕ್ಟೋಬರ್ ತಿಂಗಳಾಂತ್ಯಕ್ಕೆ ನೀರಿನ ಒಳಹರಿವು ಕಡಿಮೆಯಾಗುವ ಲೆಕ್ಕಾಚರವಿದ್ದು, ಸಂರ್ಭದಲ್ಲಿ 6 ಮೀಟರ್ ನೀರನ್ನು ಸಂಗ್ರಹ ಮಾಡಲಾಗುವುದು.

-ಮುಹಮ್ಮದ್ ನಝೀರ್, ಆಯುಕ್ತರು, ಮನಪಾ

ಈಗ ಶಂಭೂರು ಎಎಂಆರ್ ಪವರ್ ಡ್ಯಾಂನಲ್ಲಿ ಮತ್ತು ತುಂಬೆ ಡ್ಯಾಂನಲ್ಲಿ ಶೇಖರಣೆಯಾದ ನೀರು ಹೊರತುಪಡಿಸಿ, ನೀರಿನ ಒಳಹರಿವಿನಲ್ಲಿ ದಿನೇ ದಿನೇ ಹೆಚ್ಚಾಗ ತೊಡಗಿದೆ. ಶಂಭೂರು ಎಎಂಆರ್ ಡ್ಯಾಂನ ಎಲ್ಲ ಬಾಗಿಲನ್ನು ತೆರೆದು ಕೆಳಭಾಗದಲ್ಲಿರುವ ತುಂಬೆ ಡ್ಯಾಂಗೆ ಬಿಟ್ಟಿರುವುದರಿಂದ ನಿನ್ನೆಯ ದಿವಸ ನೀರಿನ ಪ್ರಮಾಣ 5 ಮೀ.ಗಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ತುಂಬೆ ಡ್ಯಾಂನ ಮೇಲ್ಭಾಗದ 6 ಬಾಗಿಲ ಮೂಲಕ ಹೆಚ್ಚುವರಿ ನೀರನ್ನು ಹರಿಯಬಿಡಲಾಗಿದೆ.

-ಹಮೀದ್ ಬ್ರಹ್ಮರಕೂಟ್ಲು, ತುಂಬೆ ಡ್ಯಾಂ ಸಿಬ್ಬಂದಿ

ನದಿ ತೀರದ ಜನರಿಗೆ ಎಚ್ಚರಿಕೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ತುಂಬೆ ವೆಂಟೆಡ್ ಡ್ಯಾಂನಿಂದ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಹಾಗೂ ಶಂಭೂರು ಎಎಂಆರ್ ಹಾಗೂ ತುಂಬೆ ಡ್ಯಾಂನಿಂದ ನೀರಿನ ಒಳಹರಿವು ಹೆಚ್ಚಾದ ಕಾರಣ ಕೆಳಭಾಗದಲ್ಲಿರುವ ಪ್ರದೇಶಗಳಿಗೆ ಬಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಕೆಳಭಾಗದ ಇಕ್ಕೆಲಗಳಲ್ಲಿ ನದಿಯ ದಡದಲ್ಲಿ ವಾಸಿಸುವ ಜನರು ಮತ್ತು ಅವರ ಸಾಕುಪ್ರಾಣಿಗಳ ಸಂರಕ್ಷಣೆಯ ವಿಷಯವಾಗಿ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News