ವಾಮಾಚಾರದ ಆರೋಪ: ನಾಲ್ವರ ಥಳಿಸಿ, ಕತ್ತು ಕೊಯ್ದು ಹತ್ಯೆ

Update: 2019-07-22 15:06 GMT

ರಾಂಚಿ, ಜು. 22: ವಾಮಾಚಾರ ಮಾಡಿದ ಆರೋಪದಲ್ಲಿ 60 ವರ್ಷ ಮೇಲ್ಪಟ್ಟ ನಾಲ್ವರನ್ನು ಅವರ ಮನೆಗಳಿಂದ ಹೊರಗೆಳೆದು ಥಳಿಸಿ, ಕತ್ತುಕೊಯ್ದು ಹತ್ಯೆಗೈದ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಗ್ರಾಮವೊಂದರಲ್ಲಿ ಸಂಭವಿಸಿದೆ.

 ಮೃತಪಟ್ಟವರನ್ನು ಚಾಪಾ ಭಗತ್ (62), ಅವರ ಪತ್ನಿ ಪಿರಿ ದೇವಿ (60), ಉಮಾ ರಾವ್ (65), ಅವರ ಪತ್ನಿ ಫಗನಿ ದೇವಿ (62) ಎಂದು ಗುರುತಿಸಲಾಗಿದೆ.

ಈ ನಾಲ್ವರನ್ನು ರವಿವಾರ ಅವರ ಮನೆಯಿಂದ ಬೆಳಗ್ಗೆ 1 ಹಾಗೂ 3 ಗಂಟೆಯ ನಡುವೆ ಗ್ರಾಮಸ್ಥರ ಗುಂಪೊಂದು ಹೊರಗೆ ಎಳೆದುಕೊಂಡು ಬಂದು ದೊಣ್ಣೆಯಿಂದ ಥಳಿಸಿತು. ಮನೆಯೊಳಗೆ ಕೂಡಿ ಹಾಕಿ ಹಲ್ಲೆ ನಡೆಸಿತು. ಅನಂತರ ಅವರ ಕತ್ತು ಕತ್ತರಿಸಿ ಹತ್ಯೆಗೈದಿತು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಾಮೋದರ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ಒಂದು ಗಂಟೆಯ ಬಳಿಕ ಸಿಸಾಯಿ ಪೊಲೀಸ್ ಠಾಣೆಯ ಉಸ್ತುವಾರಿ ಸುಧೀರ್ ಪ್ರಸಾದ್ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.

 ಈ ಸಂದರ್ಭ ಗುಂಪು ಪರಾರಿಯಾಗಿತ್ತು. ನಾಲ್ವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ‘‘ಮೇಲ್ನೋಟಕ್ಕೆ ಈ ನಾಲ್ವರು ವಾಮಾಚಾರದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ವಾಮಾಚಾರದ ನಂಬಿಕೆಯ ಕಾರಣದಿಂದ ಈ ಕೃತ್ಯ ನಡೆದಿದೆ. ತನಿಖೆ ನಡೆಯುತ್ತಿದೆ’’ ಎಂದು ಪೊಲೀಸ್ ಅಧೀಕ್ಷಕ ಅಂಜನಿ ಕುಮಾರ್ ಝಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News