ಇಂಗ್ಲೆಂಡ್ ಬ್ಯಾಂಕ್ ಮುಖ್ಯಸ್ಥನ ಹುದ್ದೆಗೆ ಅರ್ಜಿ ಸಲ್ಲಿಸದಿರಲು ‘ಬ್ರೆಕ್ಸಿಟ್’ ಕಾರಣ

Update: 2019-07-22 17:32 GMT

ಲಂಡನ್, ಜು. 22: ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಮುಖ್ಯಸ್ಥನ ಹುದ್ದೆಗೆ ಅರ್ಜಿ ಸಲ್ಲಿಸದಿರಲು, ‘ಬ್ರೆಕ್ಸಿಟ್’ ಒಡ್ಡಿದ ರಾಜಕೀಯ ಸವಾಲುಗಳೇ ಕಾರಣ ಎಂಬ ಇಂಗಿತವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ವ್ಯಕ್ತಪಡಿಸಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಹೊರಬರುವ (ಬ್ರೆಕ್ಸಿಟ್) ಪ್ರಕ್ರಿಯೆಯಲ್ಲಿ ಬ್ರಿಟನ್ ತೊಡಗಿದೆಯಾದರೂ, ಅದು ಪೂರ್ಣಗೊಂಡಿಲ್ಲ.

ಬಿಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ, ಬ್ಯಾಂಕ್ ಮುಖ್ಯಸ್ಥನ ಹುದ್ದೆಗೆ ತಾನು ಅರ್ಜಿ ಸಲ್ಲಿಸಲಿಲ್ಲ ಎಂಬುದನ್ನು ಅವರು ಖಚಿತಪಡಿಸಿದರು. ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆಯು ಇತ್ತೀಚಿನ ಸಮಯದಲ್ಲಿ ಹೆಚ್ಚು ರಾಜಕೀಕರಣಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಮುಖ್ಯಸ್ಥ ಮಾರ್ಕ್ ಕಾರ್ನಿ ಜನವರಿಯಲ್ಲಿ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಹಾಗಾಗಿ, ಬ್ರಿಟನ್ ಸರಕಾರವು ಅವರ ಉತ್ತರಾಧಿಕಾರಿಯ ಶೋಧದಲ್ಲಿದೆ.

‘‘ಒಂದು ದೇಶದ ರಾಜಕೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅದನ್ನು ಹೇಗೆ ನಿಭಾಯಿಸುವುದು ಎಂಬುದನ್ನು ತಿಳಿದಿರುವ ವ್ಯಕ್ತಿಯೊಬ್ಬರನ್ನು ಆ ದೇಶವು ಹೊಂದುವುದು ಒಳ್ಳೆಯದು’’ ಎಂದು ರಾಜನ್ ಹೇಳಿದರು.

‘‘ನಾನೋರ್ವ ಹೊರಗಿನವ ಎನ್ನುವುದು ಸ್ಪಷ್ಟ. ಹಾಗಾಗಿ, ಆ ದೇಶದ ರಾಜಕೀಯದ ಆಳ ಒಳಸುಳಿಗಳು ನನಗೇನೂ ಗೊತ್ತಿಲ್ಲ’’ ಎಂದು ಅವರು ನುಡಿದರು.

ರಾಜನ್ ಈಗ ಶಿಕಾಗೊ ಬೂತ್ ಸ್ಕೂಲ್ ಆಫ್ ಬಿಸ್ನೆಸ್‌ನಲ್ಲಿ ಶಿಕ್ಷಕರಾಗಿದ್ದಾರೆ. ಅವರು ಒಮ್ಮೆ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News