ಅನಾರೋಗ್ಯಪೀಡಿತ ಶಿಶುವನ್ನು 4ನೇ ಮಹಡಿಯಿಂದ ಕೆಳಗೆಸೆದ ತಾಯಿ

Update: 2019-07-23 13:39 GMT

ಲಕ್ನೊ,ಜು.23: ತನ್ನ ಮೂರು ತಿಂಗಳ ಶಿಶುವಿನ ಅನಾರೋಗ್ಯದಿಂದ ಬೇಸತ್ತ ತಾಯಿಯೊಬ್ಬಳು ಅದನ್ನು ಉತ್ತರ ಪ್ರದೇಶದ ಲಕ್ನೋದ ಕಿಂಗ್ ಜಾರ್ಜ್‌ಸ್ ವೈದ್ಯಕೀಯ ವಿಶ್ವವಿದ್ಯಾನಿಲಯದ ನಾಲ್ಕನೇ ಮಹಡಿಯಿಂದ ಕೆಳಗೆಸೆದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಈ ಘಟನೆ ನಡೆದ ಸಂದರ್ಭ ಆರೋಪಿ ಮಹಿಳೆಯ ಪತಿ ಮತ್ತು ಬಾವ ಆಸ್ಪತ್ರೆಯ ಹೊರಗಡೆ ಮಲಗಿದ್ದರು. ತನ್ನ ಗಂಡು ಮಗು ನಾಪತ್ತೆಯಾಗಿದೆ ಎಂದು ಗದ್ದಲವೆಬ್ಬಿಸಿದ ಮಹಿಳೆ ಅದನ್ನು ಆಸ್ಪತ್ರೆಯ ಸಿಬ್ಬಂದಿ ಕದ್ದಿದ್ದಾರೆ ಎಂದು ಆರೋಪಿಸಿದ್ದಳು. ಈ ಕುರಿತು ವಿಚಾರಣೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಆರೋಪಿ ಮಹಿಳೆ ತನ್ನ ಮಗುವನ್ನು ಬಾಲ್ಕಿನಿಯಿಂದ ಹೊರಗೆಸೆಯುವುದು ಕಂಡುಬಂದಿತ್ತು.

ವೀಡಿಯೊ ದಾಖಲೆಯ ಆಧಾರದಲ್ಲಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ಗಂಡು ಮಗು ಎಪ್ರಿಲ್ 23ರಂದು ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಜನಿಸಿತ್ತು ಮತ್ತು ಅದು ಕಾಮಾಲೆ ರೋಗದಿಂದ ಬಳಲುತ್ತಿತ್ತು. ಮಗುವನ್ನು ಮೇ 26ರಂದು ಕೆಜಿಎಂಯುಗೆ ದಾಖಲಿಸಲಾಗಿತ್ತು. ಮಗುವಿನ ಕರುಳಿಗೆ ಹಾನಿಯಾಗಿದೆ ಹಾಗಾಗಿ ಅದು ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದರು.

ಆದರೆ ಅದಕ್ಕೂ ಮೊದಲ ತಾಯಿಯೇ ತನ್ನ ಕೈಯಾರೆ ಮಗುವನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News