251 ಮೀ. ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಿಸಲು ಆದಿತ್ಯನಾಥ್ ಚಿಂತನೆ

Update: 2019-07-23 13:52 GMT

ಲಕ್ನೊ, ಜು.23: ಅಯೋಧ್ಯೆಯಲ್ಲಿ ರಾಮನ 251 ಮೀ. ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶ ಸರಕಾರದ ಸೋಮವಾರ ನಡೆದ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.

ಈ ಪ್ರತಿಮೆ ನಿರ್ಮಾಣವಾದಲ್ಲಿ ಅದು ಜಗತ್ತಿನ ಅತೀಎತ್ತರದ ಪ್ರತಿಮೆಯಾಗಲಿದೆ. ಈ ಪ್ರತಿಮೆ ಈಗಾಗಲೇ ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಅವರ 183 ಮೀ. ಎತ್ತರದ ಪ್ರತಿಮೆಯನ್ನೂ ಹಿಂದಿಕ್ಕಲಿದೆ. ರಾಮನ ಪ್ರತಿಮೆಯನ್ನು ನೂರು ಎಕರೆ ಜಾಗದಲ್ಲಿ ನಿರ್ಮಿಸಲಾಗುವುದು ಮತ್ತು ಇದಕ್ಕೆ ಗುಜರಾತ್‌ನಿಂದ ತಾಂತ್ರಿಕ ಸಹಾಯವನ್ನು ಪಡೆಯಲಾಗುವುದು ಎಂದು ಆದಿತ್ಯನಾಥ್ ತಿಳಿಸಿದ್ದಾರೆ. ಅಲ್ಲಿ ರಾಮನ ಹಿನ್ನೆಲೆಯನ್ನು ವರ್ಣಿಸುವ ಡಿಜಿಟಲ್ ವಸ್ತು ಸಂಗ್ರಹಾಲಯ, ವಿಚಾರ ಕೇಂದ್ರ, ಗ್ರಂಥಾಲಯ, ಆಹಾರ ಮಳಿಗೆ ಹಾಗೂ ಇತರ ಸೌಲಭ್ಯಗಳು ಇರಲಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಹಲವು ವರ್ಷಗಳಿಂದ ದೇವಸ್ಥಾನ-ಮಸೀದಿ ವಿವಾದದಲ್ಲಿ ಸಿಲುಕಿರುವ ಅಯೋಧ್ಯೆಯಲ್ಲಿ ಮುಖ್ಯಮಂತ್ರಿ ನೇತೃತ್ವದ ಟ್ರಸ್ಟ್ ಅಭಿವೃದ್ಧಿಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದೆ.

ಜಮೀನು ಸಮೀಕ್ಷೆ, ಪರಿಸರ ಮೌಲ್ಯಮಾಪನ ಮತ್ತು ಸಾಧ್ಯತೆಗಳ ಅಧ್ಯಯನ ನಡೆಸಲು ಸರಕಾರ ಕರಗ್ಪುರ ಐಐಟಿ ಮತ್ತು ನಾಗ್ಪುರ ಮೂಲದ ರಾಷ್ಟ್ರೀಯ ಪಾರಿಸಾರಿಕ ಇಂಜಿನಿಯರ್ ಸಂಶೋಧನಾ ಸಂಸ್ಥೆಯ ಸಹಾಯವನ್ನು ಪಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News