ಕಾಶ್ಮೀರ ವಿವಾದ: ಟ್ರಂಪ್ ಮಧ್ಯಸ್ಥಿಕೆ ಪರ ಮೆಹಬೂಬ ಮುಫ್ತಿ ಒಲವು

Update: 2019-07-23 15:35 GMT

ಶ್ರೀನಗರ, ಜು.23: ಕಾಶ್ಮೀರ ವಿಷಯದಲ್ಲಿ ಮೂರನೇ ಪಕ್ಷ ಮಧ್ಯಸ್ಥಿಕೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಹುದೊಡ್ಡ ನೀತಿ ಪರಿವರ್ತನೆಯಾಗಿದ್ದು, ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕ ಶಾಂತಿ ನೆಲೆಸುವಂತೆ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಮಂಗಳವಾರ ಅಭಿಪ್ರಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ನನ್ನಲ್ಲಿ ಮನವಿ ಮಾಡಿದ್ದಾರೆ ಎಂದು ಟ್ರಂಪ್ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆ ನಡೆದ ಸಮಾಲೋಚನೆಯ ಸಮಯದಲ್ಲಿ ತಿಳಿಸಿದ್ದರು. ಟ್ರಂಪ್ ಹೇಳಿಕೆಯನ್ನು ನಿರಾಕರಿಸಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಪಾಕಿಸ್ತಾನ ಜೊತೆಗಿನ ಯಾವುದೇ ವಿವಾದವನ್ನು ಕೇವಲ ದ್ವಿಪಕ್ಷೀಯವಾಗಿ ಮಾತ್ರ ಚರ್ಚಿಸಲಾಗುವುದು ಎನ್ನುವುದು ಭಾರತದ ನಿಶ್ಚಿತ ನಿಲುವಾಗಿದೆ ಎಂದು ತಿಳಿಸಿದೆ.

ಭಾರತ ಸರಕಾರ ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ಮೂರನೇ ಪಕ್ಷದ ಮಧ್ಯಸ್ಥಿಕೆಯ ಕಲ್ಪನೆಯನ್ನು ನಿರಾಕರಿಸಿದ್ದರೂ ಟ್ರಂಪ್ ನೀಡಿರುವ ಹೇಳಿಕೆ ಬಹುದೊಡ್ಡ ನೀತಿ ಪರಿವರ್ತನೆಯಾಗಿದೆ. ಕಲುಷಿತ ಸಂಬಂಧಗಳನ್ನು ಸರಿಪಡಿಸುವಲ್ಲಿ ಅಮೆರಿಕ ಉತ್ತಮ ದಾಖಲೆಯನ್ನು ಹೊಂದಿಲ್ಲವಾದರೂ ಎರಡೂ ದೇಶಗಳು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಈ ಅವಕಾಶವನ್ನು ಬಳಸಿಕೊಳ್ಳಲಿವೆ ಎಂಬ ಭರವಸೆ ಹೊಂದಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News