ಕೋಲಾಹಲದ ಮಧ್ಯೆ ಲೋಕಸಭೆಯಲ್ಲಿ ಆರ್‌ಟಿಐ ತಿದ್ದುಪಡಿ ಮಸೂದೆ ಅಂಗೀಕಾರ

Update: 2019-07-24 16:08 GMT

ಹೊಸದಿಲ್ಲಿ, ಜು.23: ಕೇಂದ್ರ ಮತ್ತು ರಾಜ್ಯ ಮಟ್ಟದ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಹಕ್ಕು ಆಯುಕ್ತರ ವೇತನ, ಅಧಿಕಾರಾವಧಿಯನ್ನು ನಿಗದಿಗೊಳಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುವ ಮಾಹಿತಿ ಹಕ್ಕು ಕಾಯ್ದೆ (ತಿದ್ದುಪಡಿ)ಮಸೂದೆ 2019ಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ.

ವಿಪಕ್ಷಗಳ ಗದ್ದಲ, ಕೋಲಾಹಲದ ಮಧ್ಯೆ ಮಸೂದೆ 218-79 ಮತಗಳ ಅಂತರದಿಂದ ಅಂಗೀಕೃತಗೊಂಡಿದೆ. ಮಸೂದೆಯನ್ನು ಟೀಕಿಸಿರುವ ವಿಪಕ್ಷಗಳು ಇದರಿಂದ ಮಾಹಿತಿ ಹಕ್ಕು ಪ್ರಾಧಿಕಾರದ ಅಧಿಕಾರ, ಸ್ವಾತಂತ್ರ್ಯ ಮೊಟಕುಗೊಳ್ಳುತ್ತದೆ. ಕೇಂದ್ರ ಮತ್ತು ರಾಜ್ಯ ಮಾಹಿತಿ ಹಕ್ಕು ಆಯುಕ್ತರ ಮೇಲೂ ಕೇಂದ್ರ ಸರಕಾರದ ನಿಯಂತ್ರಣದ ಮೂಲಕ ಇದನ್ನು ನಾಶಗೊಳಿಸಲು ಸರಕಾರ ಮುಂದಾಗಿದೆ ಎಂದು ವಿಪಕ್ಷಗಳು ಟೀಕಿಸಿವೆ.

ಸಾಂಸ್ಥಿಕ ಸ್ವಾತಂತ್ರ್ಯದ ಎರಡು ಅತ್ಯುನ್ನತ ರಕ್ಷಾಕವಚಗಳನ್ನು ಈ ಮಸೂದೆ ರದ್ದುಗೊಳಿಸಿದೆ. ಅಲ್ಲದೆ ರಾಜ್ಯ ಮಾಹಿತಿ ಆಯುಕ್ತರನ್ನು ನಿಯಂತ್ರಿಸುವ ಮೂಲಕ ಕೇಂದ್ರ ಸರಕಾರ ಇದನ್ನು ನಾಶಗೊಳಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ಥರೂರ್ ಹೇಳಿದ್ದಾರೆ. ಕೇರಳದ ಸಂಸದ ಎನ್‌ಕೆ ಪ್ರೇಮಚಂದ್ರನ್ ಅವರೂ ಮಸೂದೆಯನ್ನು ಟೀಕಿಸಿದ್ದಾರೆ.

  ಸ್ವಯಂ ಪ್ರೇರಿತರಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಗರಿಷ್ಟ ಮಾಹಿತಿ ಒದಗಿಸಬೇಕು ಎಂಬ ಅಂಶವು ಈ ಮಸೂದೆಯಲ್ಲಿ ಒಳಗೊಂಡಿದೆ. ಆದ್ದರಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವ ಪ್ರಕರಣ ಹಾಗೂ ಅಗತ್ಯತೆ ಕಡಿಮೆಯಾಗಲಿದೆ. ಐದು ವರ್ಷದಲ್ಲಿ ನಾವು ಮಾಡಿರುವ ಬದಲಾವಣೆಯಿಂದಾಗಿ ವೆಬ್‌ಸೈಟ್‌ಗಳಲ್ಲಿ ತ್ವರಿತವಾಗಿ ವಿಷಯಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಅಲ್ಲದೆ ಸಂಸ್ಥೆಯ ಸ್ವಾಯತ್ತತೆಯ ಮೇಲೆ ಪರಿಣಾಮ ಬೀರುವ ಯಾವ ಕೆಲಸವನ್ನೂ ಕೇಂದ್ರ ಸರಕಾರ ಮಾಡುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

ಆರ್‌ಟಿಐ ಕಾಯ್ದೆ ಅಳಿವಿನ ಅಂಚಿನಲ್ಲಿದೆ: ಸೋನಿಯಾ

ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರಕಾರ ಎಲ್ಲಾ ಭಾರತೀಯ ಪ್ರಜೆಗಳನ್ನೂ ದುರ್ಬಲಗೊಳಿಸಿದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

2005ರಲ್ಲಿ ಅಂಗೀಕೃತಗೊಂಡಿರುವ ಐತಿಹಾಸಿಕ ಮಾಹಿತಿ ಹಕ್ಕು ಕಾಯ್ದೆಯನ್ನು ನಾಶಗೊಳಿಸಲು ಕೇಂದ್ರ ಸರಕಾರ ದೃಢಸಂಕಲ್ಪ ಮಾಡಿರುವುದು ಅತ್ಯಂತ ಆತಂಕಕಾರಿಯಾಗಿದೆ. ಬಹಳಷ್ಟು ಸಮಾಲೋಚನೆಯ ಬಳಿಕ ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿರುವ ಈ ಕಾಯ್ದೆ ಈಗ ಅಳಿವಿನ ಅಂಚಿನಲ್ಲಿದೆ ಎಂದು ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದಾರೆ.

ಎಲ್ಲಾ ಹಂತದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮೂಡಿಸಿದ ಆರ್‌ಟಿಐ ಕಾಯ್ದೆಯಿಂದ 60 ಲಕ್ಷ್ಕಕೂ ಹೆಚ್ಚಿನ ಜನರಿಗೆ ಸಹಾಯವಾಗಿದೆ. ಇದರಿಂದಾಗಿ ಪ್ರಜಾಪ್ರಭುತ್ವದ ಮೂಲಾಧಾರ ಗಟ್ಟಿಯಾಗಿದೆ. ಆರ್‌ಟಿಐ ಕಾರ್ಯಕರ್ತರು ಹಾಗೂ ಇತರ ಹೋರಾಟಗಾರರಿಂದ ಸಮಾಜದ ದುರ್ಬಲ ವರ್ಗದವರಿಗೆ ಸಹಾಯವಾಗಿದೆ ಎಂದವರು ಹೇಳಿದ್ದಾರೆ.

ತನಗಿರುವ ಶಾಸಕಾಂಗ ಬಹುಮತದ ಮೂಲಕ ಕೇಂದ್ರ ಸರಕಾರ ತನ್ನ ಉದ್ದೇಶ ಸಾಧಿಸಬಹುದು. ಆದರೆ ಇದರಿಂದಾಗಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಅಶಕ್ತನಾಗುತ್ತಾನೆ ಎಂದು ಸೋನಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News