ಸೋನಿಪತ್‌ನಿಂದ ದಿಲ್ಲಿಗೆ ಸ್ಥಳಾಂತರ

Update: 2019-07-23 18:41 GMT

ಹೊಸದಿಲ್ಲಿ, ಜು.23: ಉತ್ತಮ ವ್ಯವಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತದ ಕುಸ್ತಿ ಒಕ್ಕೂಟ(ಡಬ್ಲುಎಫ್‌ಐ)ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ಪುರುಷರ ಟ್ರಯಲ್ಸ್ ನ್ನು ಮಂಗಳವಾರ ಸೋನಿಪತ್ ಸಾಯ್ ಕೇಂದ್ರದಿಂದ ದಿಲ್ಲಿಯ ಐಜಿ ಸ್ಟೇಡಿಯಂಗೆ ಸ್ಥಳಾಂತರಿಸಲು ನಿರ್ಧರಿಸಿದೆ.

ಸೋನಿಪತ್‌ನ ಸಾಯ್ ಕೇಂದ್ರದಲ್ಲಿನ ಕಿರಿದಾದ ಹಾಲ್‌ನಲ್ಲಿ ಸುರಕ್ಷತೆ ಕುರಿತು ಕೆಲವು ರೆಫರಿಗಳು ಆತಂಕ ವ್ಯಕ್ತಪಡಿಸಿ ಭಾರತ ಕುಸ್ತಿ ಒಕ್ಕೂಟಕ್ಕೆ ಮನವಿ ಸಲ್ಲಿಸಿದ್ದರು. ಸೋನಿಪತ್‌ನ ಬಹಾಲ್‌ಗಢ ಸೆಂಟರ್‌ನಲ್ಲಿ ಕುಸ್ತಿ ಅಭಿಮಾನಿಗಳಿಗೆ ಕುಳಿತುಕೊಂಡು ಎಲ್ಲ ಪ್ರಕ್ರಿಯೆ ನೋಡಲು ಸ್ಥಳವಿರಲಿಲ್ಲ. ‘‘ವಿಶ್ವ ಚಾಂಪಿಯನ್‌ಶಿಪ್ ಟ್ರಯಲ್ಸ್‌ನ ಹಿತದೃಷ್ಟಿಯಿಂದ ನಾವು ಸೋನಿಪತ್‌ನಿಂದ ದಿಲ್ಲಿಯ ಐಜಿ ಸ್ಟೇಡಿಯಂಗೆ ಟ್ರಯಲ್ಸ್ ನ್ನು ಸ್ಥಳಾಂತರಗೊಳಿಸಿದ್ದೇವೆ. ಬಹಾಲ್‌ಗಢದ ಕಿರಿದಾದ ಕುಸ್ತಿ ಹಾಲ್‌ನಲ್ಲಿ ಹೆಚ್ಚು ಅಭಿಮಾನಿಗಳು ಜಮಾಯಿಸಲು ಸಾಧ್ಯವಾಗುತ್ತಿರಲಿಲ್ಲ’’ಎಂದು ಡಬ್ಲುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ಥೋಮರ್ ಹೇಳಿದ್ದಾರೆ.

ರೆಫರಿಗಳ ಕೋರಿಕೆಯ ಮೇರೆಗೆ ಸ್ಥಳ ಬದಲಾವಣೆ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಥೋಮರ್,‘‘ಇಲ್ಲ. ಇದು ರೆಫರಿಗಳಿಗೆ ಸಂಬಂಧಪಟ್ಟ ವಿಚಾರವಲ್ಲ. ಡಬ್ಲುಎಫ್‌ಐ ಎಲ್ಲೇ ಟ್ರಯಲ್ಸ್ ನಡೆಸಿದರೂ ರೆಫರಿಗಳು ಹಾಜರಾಗಬೇಕು. ಐಜಿ ಸ್ಟೇಡಿಯಂನಲ್ಲಿ ಆಸನದ ವ್ಯವಸ್ಥೆ ಉತ್ತಮವಾಗಿದೆ. ಅಲ್ಲಿ ಟ್ರಯಲ್ಸ್‌ನ್ನು ಚೆನ್ನಾಗಿ ಮಾಡಬಹುದು’’ ಎಂದರು.

ಐಜಿ ಸ್ಟೇಡಿಯಂನಲ್ಲಿ ನಡೆದ 2018ರ ಕಾಮನ್‌ವೆಲ್ತ್ ಗೇಮ್ಸ್ ಟ್ರಯಲ್ಸ್‌ನ ವೇಳೆ ಸ್ಟಾರ್ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಪರ್ವೀನ್ ರಾಣಾ ಬೆಂಬಲಿಗರ ಮಧ್ಯೆ ಹೊಡೆದಾಟ ನಡೆದಿತ್ತು. ಪುರುಷರ ಟ್ರಯಲ್ಸ್ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಕೇವಲ ಆರು ಒಲಿಂಪಿಕ್ಸ್ ತೂಕ ವಿಭಾಗಗಳಾದ 57 ಕೆಜಿ, 65 ಕೆಜಿ, 74 ಕೆಜಿ, 86 ಕೆಜಿ, 97 ಕೆಜಿ ಹಾಗೂ 125 ಕೆಜಿಯಲ್ಲಿ ಟ್ರಯಲ್ಸ್ ನಡೆಯಲಿದೆ.

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾಗಿರುವ ಸುಶೀಲ್ ಕುಮಾರ್ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಟ್ರಯಲ್ಸ್‌ಗೆ ಅವರ ಪ್ರವೇಶಾತಿಯನ್ನು ಕಳುಹಿಸಿ ಕೊಡಲಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಇತರ ನಾಲ್ಕು ವಿಭಾಗಗಳಿಗೆ ಟ್ರಯಲ್ಸ್ ನಡೆಯಲಿದೆ. ಮಹಿಳಾ ವಿಭಾಗದ ಟ್ರಯಲ್ಸ್ ರವಿವಾರ ಲಕ್ನೋದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News