×
Ad

ಟ್ರಾಫಿಕ್ ಪೇದೆಯಾಗಿದ್ದ ಕಾರ್ಗಿಲ್ ವೀರ ಯೋಧನಿಗೆ ಡಬಲ್ ಭಡ್ತಿ ನೀಡಿದ ಪಂಜಾಬ್ ಸರಕಾರ

Update: 2019-07-26 20:53 IST
Photo: indianexpress.com

ಚಂಡೀಗಡ, ಜು.26: ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದ ವೀರಚಕ್ರ ಪ್ರಶಸ್ತಿ ವಿಜೇತ ಸತ್ಪಾಲ್ ಸಿಂಗ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಒಂದೇ ಬಾರಿ ಎರಡು ಪದೋನ್ನತಿ ನೀಡಲು ಆದೇಶ ನೀಡಿದ್ದಾರೆ.

ಸತ್ಪಾಲ್ ಸಿಂಗ್ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಪೇದೆಯಾಗಿ ಸಂಚಾರ ನಿರ್ವಹಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ತಿಳಿದ ಅಮರಿಂದರ್ ಸಿಂಗ್ ಕೂಡಲೇ ಈ ಆದೇಶವನ್ನು ಹೊರಡಿಸಿದ್ದಾರೆ.

ಸತ್ಪಾಲ್ ಸಿಂಗ್ ಅವರನ್ನು 2010ರಲ್ಲಿ ಪೊಲೀಸ್ ಇಲಾಖೆಗೆ ನೇಮಕ ಮಾಡುವ ಸಮಯದಲ್ಲಿ ಆಗಿನ ಅಕಾಲಿದಳ-ಬಿಜೆಪಿ ಸರಕಾರ ಅವರ ಪ್ರತಿಷ್ಟೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.

ಸೇನೆಯಿಂದ ನಿವೃತ್ತಿ ಹೊಂದಿದ ನಂತರ ಪಂಜಾಬ್ ಪೊಲೀಸ್ ಸೇರಿರುವ ಸತ್ಪಾಲ್ ಸಿಂಗ್ ಅವರು ಕಾರ್ಗಿಲ್ ಯುದ್ಧದಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಅವರಿಗೆ ಸಹಾಯಕ ಉಪ ನಿರೀಕ್ಷಕ ಸ್ಥಾನಕ್ಕೆ ಪದೋನ್ನತಿ ನೀಡಲು ಮುಖ್ಯಮಂತ್ರಿಗಳು ನೇರ ನಿರ್ದೇಶ ನೀಡಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಸತ್ಪಾಲ್ ಸಿಂಗ್ ಅವರ ಪದೋನ್ನತಿಗಾಗಿ ಪಂಜಾಬ್ ಪೊಲೀಸ್ ಕಾನೂನಿನ ನಿಯಮ 12.3ಯನ್ನು ಸಡಿಲಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಒಪರೇಶನ್ ವಿಜಯ್ ಸಂದರ್ಭದಲ್ಲಿ ಸತ್ಪಾಲ್ ಸಿಂಗ್ ದ್ರಾಸ್ ಸೆಕ್ಟರ್‌ನಲ್ಲಿ ನಿಯೋಜಿತಗೊಂಡಿದ್ದರು ಮತ್ತು ಪಾಕಿಸ್ತಾನಿ ಸೇನಾ ಕಪ್ತಾನ ಕರ್ನಲ್ ಶೇರ್ ಖಾನ್ ಸೇರಿದಂತೆ ನಾಲ್ವರನ್ನು ಹತ್ಯೆಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News