×
Ad

ಕ್ಷೀರ ಸಾಗರದಲ್ಲಿ 28 ಹೊಸ ನಕ್ಷತ್ರಗಳನ್ನು ಗುರುತಿಸಿದ ಭಾರತೀಯ ವಿಜ್ಞಾನಿಗಳು

Update: 2019-07-26 21:24 IST

ನೈನಿತಾಲ್, ಜು.26: ಆರ್ಯಭಟ ವೀಕ್ಷಣಾ ವಿಜ್ಞಾನಗಳ ಸಂಶೋಧನಾ ಸಂಸ್ಥೆ (ಎಆರ್‌ಐಇಎಸ್-ಎರೀಸ್)ನ ವಿಜ್ಞಾನಿಗಳು ಕ್ಷೀರ ಸಾಗರ ನಕ್ಷತ್ರಪುಂಜದಲ್ಲಿ 28 ಹೊಸ ನಕ್ಷತ್ರಗಳನ್ನು ಗುರುತಿಸಿದ್ದಾರೆ. ಸದಾ ತನ್ನ ಹೊಳಪು ಅಥವಾ ಬೆಳಕಿನ ತೀವ್ರತೆಯನ್ನು ಬದಲಿಸುತ್ತಲೇ ಇರುವ ಈ ಹೊಸ ನಕ್ಷತ್ರಗಳ ಆವಿಷ್ಕಾರ ಬಹಳ ಅಪರೂಪದ ಸಾಧನೆಯಾಗಿದೆ ಎಂದು ಎರೀಸ್ ನಿರ್ದೇಶಕ ವಹಾಬುದ್ದೀನ್ ತಿಳಿಸಿದ್ದಾರೆ.

ಇದೇ ಮೊದಲ ಬಾರಿ ಕೋಮ ಬೆರೆನ್ಸೀಸ್ ತಾರಾಗಣದ ಎನ್‌ಜಿಸಿ 4147 ವೃತ್ತದ ಗೊಂಚಲಿನಲ್ಲಿ ಹೊಳಪು ಬದಲಿಸುವ ನಕ್ಷತ್ರಗಳನ್ನು ಗುರುತಿಸಲಾಗಿದೆ ಎಂದು ಎರೀಸ್‌ನ ಮಾಜಿ ನಿರ್ದೇಶಕ ಅನಿಲ್ ಪಾಂಡೆ ತಿಳಿಸಿದ್ದಾರೆ. ಗ್ಲೊಬುಲರ್ ಗೊಂಚಲಿನ ಸಂಯೋಜನೆಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಎರೀಸ್ ವಿಜ್ಞಾನಿಗಳ ಸಂಶೋಧನೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಹೊಸ ನಕ್ಷತ್ರಗಳ ಪತ್ತೆಯಿಂದ ಭೂಮಿಗೆ ನಿರೀಕ್ಷೆಗಿಂತ ಸಮೀಪವಿರುವ ಎನ್‌ಜಿಸಿ 4147ನ ಆಂತರಿಕ ರಚನೆಯ ಬಗ್ಗೆ ಬಹುಮುಖ್ಯ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಪಾಂಡೆ ಅಭಿಪ್ರಾಯಿಸಿದ್ದಾರೆ.

ವೃತ್ತೀಯ ಗೊಂಚಲುಗಳು ಗುರುತ್ವಾಕಾರ್ಷಣೆಯಿಂದಾಗಿ ಗಟ್ಟಿಯಾಗಿ ಸೆಳೆಯಲ್ಪಟ್ಟಿರುತ್ತದೆ. ಹಾಗಾಗಿ ಅದು ವೃತ್ತಾಕಾರವನ್ನು ಪಡೆದುಕೊಳ್ಳುತ್ತದೆ ಮತ್ತು ತನ್ನ ಕೇಂದ್ರದೆಡೆಗೆ ಅತೀಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News