ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ಕೋರಿದ ಮನವಿ ತಿರಸ್ಕರಿಸಿದ ಉಚ್ಚ ನ್ಯಾಯಾಲಯ
ಹೊಸದಿಲ್ಲಿ, ಜು.26: ವಂದೇ ಮಾತರಂ ಅನ್ನು ಜನಗಣ ಮನದಂತೆ ರಾಷ್ಟ್ರಗೀತೆಯನ್ನಾಗಿ ಅಥವಾ ರಾಷ್ಟ್ರೀಯ ಹಾಡು ಎಂದು ಘೋಷಿಸಲು ಕೇಂದ್ರಕ್ಕೆ ನಿರ್ದೇಶ ನೀಡಬೇಕೆಂದು ಕೋರಿ ಹಾಕಲಾಗಿದ್ದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಈ ಮನವಿಯನ್ನು ಪುರಸ್ಕರಿಸಲು ಯಾವುದೇ ಕಾರಣ ಸಿಗುತ್ತಿಲ್ಲ ಎಂದು ಮುಖ್ಯ ನ್ಯಾಯಾಧೀಶ ಡಿ.ಎನ್ ಪಟೇಲ್ ಮತ್ತು ನ್ಯಾಯಾಧೀಶ ಸಿ.ಹರಿ ಶಂಕರ್ ಅವರ ಪೀಠ ತಿಳಿಸಿದೆ. ವಂದೇ ಮಾತರಂ ಅನ್ನು ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಹಾಡನ್ನಾಗಿ ಘೋಷಿಸುವಂತೆ ಸರಕಾರ ಸೂಚಿಸಲು ನಮಗೆ ಯಾವುದೇ ಕಾರಣ ಸಿಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ನಾಯಕ ಮತ್ತು ನ್ಯಾಯವಾದಿ ಅಶ್ವಿನ್ ಕುಮಾರ್ ಉಪಾಧ್ಯಾಯ್ ಹಾಕಿರುವ ಮನವಿಯಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರು ಬರೆದಿರುವ ವಂದೇ ಮಾತರಂ ಹಾಡಿಗೆ ನೋಬೆಲ್ ವಿಜೇತ ರವೀಂದ್ರನಾಥ್ ಠಾಗೋರ್ ಅವರು ಬರೆದ ರಾಷ್ಟ್ರಗೀತೆ ಜನಗಣ ಮನಕ್ಕೆ ನೀಡಲಾಗುವ ಗೌರವವನ್ನೇ ನೀಡಬೇಕು ಎಂದು ಕೋರಿದ್ದರು.