×
Ad

ಉಗ್ರ ದಾಳಿಯಲ್ಲಿ 8 ಗುಂಡು ತಗುಲಿದ್ದ ಸಿ.ಆರ್.ಪಿ.ಎಫ್ ಯೋಧ ಮತ್ತೆ ಕರ್ತವ್ಯಕ್ಕೆ

Update: 2019-07-27 17:39 IST
ಚಿತ್ರ ಕೃಪೆ: thequint.com

ಶ್ರೀನಗರ: ಜಮ್ಮು ಕಾಶ್ಮೀರದ ಲೇತ್ಪುರ ಸಮೀಪ 2016ರಲ್ಲಿ ಉಗ್ರ ದಾಳಿಯಲ್ಲಿ ಎಂಟು ಗುಂಡುಗಳು ದೇಹದೊಳಗೆ ಹೊಕ್ಕು ಜೀವನ್ಮರಣ ಹೋರಾಟ ನಡೆಸಿ ಕೊನೆಗೂ ಸಾವನ್ನು ಗೆದ್ದು ಬಂದ ಸಿ ಆರ್ ಪಿ ಎಫ್ ಹೆಡ್ ಕಾನ್‍ಸ್ಟೇಬಲ್ ಖುರ್ಷೀದ್ ಅಹ್ಮದ್  ಶ್ರೀನಗರದಲ್ಲಿ ಮತ್ತೆ ಕರ್ತವ್ಯಕ್ಕೆ ಸೇರಿದ್ದಾರೆ.

ಅವರ ಬೆನ್ನ ಮೂಳೆಗಾದ ಹಾನಿಯಿಂದ ಅವರು ಮುಂದೆ ನಡೆಯುವುದು ಅಸಾಧ್ಯವಾಗಬಹುದೇನೋ ಎಂದು ವೈದ್ಯರು ಆಗ ಸಂಶಯ ವ್ಯಕ್ತಪಡಿಸಿದ್ದರು. ಆದರೆ ಅಹ್ಮದ್ ಅವರು ನಿರೀಕ್ಷೆಗೂ ಮೀರಿ ಚೇತರಿಸಿಕೊಂಡಿದ್ದಾರೆ.

ಈಗ ಅವರು ಸಿ.ಆರ್.ಪಿ.ಎಫ್ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. “ನನ್ನ ಸಹೋದ್ಯೋಗಿಗಳ ವರ್ಗಾವಣೆ, ಪಾಸ್ ಮತ್ತಿತರ ಕೆಲಸಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ನಿರ್ವಹಿಸುತ್ತೇನೆ,'' ಎಂದು ಅವರು ಹೇಳುತ್ತಾರೆ.

ಜೂನ್ 25, 2016ರಂದು ಲೇತ್ಪುರ ಎಂಬಲ್ಲಿ ಅಹ್ಮದ್ ಮತ್ತಿತರ ಕೆಲ ಸಿ.ಆರ್.ಪಿ.ಎಫ್ ಜವಾನರು ಬಂದೂಕು ತರಬೇತಿ ಮುಗಿಸಿ ವಾಪಸಾಗುತ್ತಿದ್ದಾಗ ನಾಲ್ಕು ಮಂದಿ ಉಗ್ರರು ಅವರತ್ತ ಗುಂಡಿನ ಮಳೆಗರೆದಿದ್ದರು. ಈ ದಾಳಿಯಲ್ಲಿ ಎಂಟು ಸಿಆರ್‍ಪಿಎಫ್ ಜವಾನರು ಮೃತರಾಗಿ 22 ಮಂದಿ ಗಾಯಗೊಂಡಿದ್ದರು.

ತೀವ್ರ ಗಾಯಗೊಂಡಿದ್ದ ಅಹ್ಮದ್ ಎರಡು ತಿಂಗಳು ಐಸಿಯುವಿನಲ್ಲಿದ್ದರು. ನಂತರ ಅವರನ್ನು ದಿಲ್ಲಿಯ ಏಮ್ಸ್ ಗೆ ಸೇರಿಸಲಾಗಿತ್ತು. ಅಲ್ಲಿ ಅವರು ಚೇತರಿಕೆ ಕಂಡಿದ್ದರು.

ತಮ್ಮ ಕಷ್ಟ ಕಾಲದಲ್ಲಿ ತಮಗೆ ನೆರವು ನೀಡಿದ ಕುಟುಂಬ ವರ್ಗ ಹಾಗೂ ಸಿ.ಆರ್.ಪಿ.ಎಫ್ ಗೆ ಧನ್ಯವಾದ ತಿಳಿಸುವ ಅವರು ರಾಜ್ಯ ಸರಕಾರದಿಂದ ತಮಗೆ ನಯಾ ಪೈಸೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News