ಕಳೆದ 5 ವರ್ಷದಲ್ಲಿ 1 ಕೋಟಿ ಮರ ಕಡಿಯಲು ಅನುಮತಿ: ಕೇಂದ್ರ ಸರಕಾರ

Update: 2019-07-27 16:49 GMT

 ಹೊಸದಿಲ್ಲಿ, ಜು.27: ಅಭಿವೃದ್ಧಿ ಕಾರ್ಯದ ಹಿನ್ನೆಲೆಯಲ್ಲಿ ಕಳೆದ 5 ವರ್ಷದಲ್ಲಿ ಪರಿಸರ ಸಚಿವಾಲಯ 1 ಕೋಟಿಗೂ ಅಧಿಕ ಮರಗಳನ್ನು ಕಡಿಯಲು ಅನುಮತಿ ನೀಡಿದೆ ಎಂದು ಸರಕಾರ ಸಂಸತ್ತಿಗೆ ಮಾಹಿತಿ ನೀಡಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪರಿಸರ ಸಚಿವಾಲಯದ ಸಹಾಯಕ ಸಚಿವ ಬಾಬುಲ್ ಸುಪ್ರಿಯೊ, 2014ರಿಂದ 2019ರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯದ ಹಿನ್ನೆಲೆಯಲ್ಲಿ 1.09 ಕೋಟಿ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ಇದರಲ್ಲಿ 2018-19ರಲ್ಲೇ 26.91 ಲಕ್ಷ ಮರ ಕಡಿಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಕಾರ್ಯ ನಡೆಸಲು , ವಿವಿಧ ಕಾಯ್ದೆಯಡಿ ಸೂಚಿಸಲಾದ ಕಾರ್ಯವಿಧಾನದಂತೆ ಸಂಬಂಧಿತ ಇಲಾಖೆಗಳ ಅನುಮತಿ ಪಡೆದು ಮರಗಳನ್ನು ಕಡಿಯಲಾಗಿದೆ. ಆದರೆ ಕಾಡ್ಗಿಚ್ಚಿನಿಂದ ನಾಶವಾಗಿರುವ ಮರಗಳ ಬಗ್ಗೆ ಯಾವುದೇ ಅಂಕಿ ಅಂಶ ಇಲಾಖೆಯ ಬಳಿಯಿಲ್ಲ ಎಂದು ಸಚಿವರು ಹೇಳಿದರು. 2014-15ರಲ್ಲಿ 23.3 ಲಕ್ಷ ಮರಗಳನ್ನು ಕಡಿಯಲು, 2015-16ರಲ್ಲಿ 16.9 ಲಕ್ಷ ಮರಗಳು, 2016-17ರಲ್ಲಿ 17.01 ಲಕ್ಷ ಮರಗಳು ಹಾಗೂ 2017-18ರಲ್ಲಿ 25.5 ಲಕ್ಷ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ಹಸಿರು ಭಾರತ ಅಭಿಯಾನದಡಿ ಕಳೆದ ನಾಲ್ಕು ವರ್ಷಗಳಲ್ಲಿ 12 ರಾಜ್ಯಗಳ 87,113.86 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಮತ್ತು ಪರ್ಯಾಯ ಇಂಧನ ಸಾಧನಗಳನ್ನು ಪೂರೈಸಲು 237.07 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ರಾಷ್ಟ್ರೀಯ ಅರಣ್ಯೀಕರಣ ಯೋಜನೆಯಡಿ, ಹೊಸದಾಗಿ 94,828 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನೆಡಲು ಕಳೆದ ನಾಲ್ಕು ವರ್ಷದಲ್ಲಿ ರಾಜ್ಯಗಳಿಗೆ 328.90 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಬಿಜೆಪಿ ಭವಿಷ್ಯವನ್ನು ನಾಶ ಮಾಡುತ್ತಿದೆ: ಕಾಂಗ್ರೆಸ್

1 ಕೋಟಿಗೂ ಅಧಿಕ ಮರಗಳನ್ನು ಕಡಿಯಲು ಅನುಮತಿ ನೀಡಿರುವುದನ್ನು ಕಾಂಗ್ರೆಸ್ ಖಂಡಿಸಿದ್ದು ಈ ಮೂಲಕ ಬಿಜೆಪಿ ನಮ್ಮ ಭವಿಷ್ಯವನ್ನು ನಾಶಗೊಳಿಸುತ್ತಿದೆಯೇ ಎಂದು ಪ್ರಶ್ನಿಸಿದೆ. ಮರಗಳು ಪರಿಸರವನ್ನು ಸಂರಕ್ಷಿಸುತ್ತವೆ. ಮರಗಳಿಲ್ಲದೆ ಬದುಕಿಲ್ಲ. ಆದರೆ ಮೋದಿ ಸರಕಾರ ಕಳೆದ ಐದು ವರ್ಷದಲ್ಲಿ 1 ಕೋಟಿಗೂ ಹೆಚ್ಚು ಮರಗಳನ್ನು ಅಭಿವೃದ್ಧಿ ಕಾರ್ಯದ ನೆಪದಲ್ಲಿ ಕಡಿದು ಹಾಕಿದೆ ಎಂದು ಕಾಂಗ್ರೆಸ್‌ನ ಪ್ರಧಾನ ವಕ್ತಾರ ರಣದೀಪ್ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News