ಮಹಿರ: ಇದು ಹೀರಾಳ ತಾಯಿಯ ಹೀರೋಯಿಸಂ!

Update: 2019-07-27 18:32 GMT

ಕತೆಯ ಬಗ್ಗೆ ಯಾವುದೇ ಎಳೆಯನ್ನು ಬಿಟ್ಟು ಕೊಡದೇ ಚಿತ್ರೀಕರಣ ಶುರು ಮಾಡಿದಂಥ ಸಿನೆಮಾ ಮಹಿರ. ಆದರೆ ಇದು ತಾಯಿ ಮಗಳ ಕತೆ ಮತ್ತು ತಾಯಿಯದು ಆ್ಯಕ್ಷನ್ ಲೇಡಿ ಪಾತ್ರ ಎನ್ನುವುದನ್ನು ಚಿತ್ರದ ಪೋಸ್ಟರ್‌ಗಳೇ ರಿವೀಲ್ ಮಾಡಿದ್ದವು. ಈ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸುವ ರೀತಿಯಲ್ಲಿ ಚಿತ್ರ ಶುರುವಾಗುತ್ತದೆ.

 ಅದು ಸಮುದ್ರ ತೀರದಲ್ಲಿರುವ ಸುಂದರವಾದ ಕೆಫೆ. ಮಾಯಾ ಎನ್ನುವ ಮಹಿಳೆಯೇ ಅದರ ಮಾಲಕಿ. ಆಕೆಗೆ ಆಧ್ಯಾ ಹೆಸರಿನ ಟೀನೇಜ್ ಮಗಳಿದ್ದಾಳೆ. ತಾಯಿಯನ್ನು ಮಾಯಾ ಎಂದು ಹೆಸರು ಕರೆದೇ ಕೂಗುತ್ತಿರುವ ಮಗಳು ಆಕೆ! ಸದಾ ಮೋಟಾರು ಬೈಕಲ್ಲಿ ಸುತ್ತಾಡಿಕೊಂಡು ಗಂಡು ಬೀರಿಯಂತೆ ತಿರುಗಾಡುವ ಈ ಹೈಸ್ಕೂಲ್ ಹುಡುಗಿ, ಕ್ಲಾಸ್ಮೇಟ್ ಹುಡುಗನ ಮೇಲೆ ಕೈ ಮಾಡುವ ಮೂಲಕ ಸುದ್ದಿಯಾಗುತ್ತಾಳೆ. ಆಕೆ ಹುಡುಗನಿಗೆ ಹೊಡೆಯುವ ವೀಡಿಯೊ ವಾಟ್ಸ್‌ಆ್ಯಪ್ ಮೂಲಕ ಎಲ್ಲೆಡೆ ವೈರಲ್ ಆಗುತ್ತದೆ. ಆಕೆಯ ಸಂದರ್ಶನಕ್ಕೆ ಪತ್ರಿಕಾ ವರದಿಗಾರ್ತಿಯೊಬ್ಬರ ಆಗಮನವಾಗುತ್ತದೆ. ಅದರಲ್ಲಿ ಪ್ರಕಟವಾಗುವ ಅವಳ ಸಂದರ್ಶನ ಮತ್ತು ಆಕೆಯ ತಾಯಿ ಮಾಯಾಳ ಹಳೆಯ ಫೋಟೊ ಇಡೀ ಘಟನೆಗೆ ಹೊಸ ತಿರುವು ನೀಡುತ್ತದೆ. ಇದು ಒಬ್ಬಳು ಮಗಳ ಕುರಿತಾದ ಚಿತ್ರ ಎನ್ನುವ ನಂಬಿಕೆಯನ್ನು ಸಿನೆಮಾ ಬದಲಾಯಿಸಿ ಬಿಡುತ್ತದೆ. ಯಾಕೆಂದರೆ ಮಾಯಾ ಒಬ್ಬಳು ಅಂಡರ್ ಕವರ್ ಏಜೆಂಟ್, ಆಕೆಯ ನಿಜವಾದ ಹೆಸರು ದೇವಕಿ ಮತ್ತು ಈಗ ಆಕೆಯ ವಿರುದ್ಧ ಇಡೀ ಇಲಾಖೆಯೇ ನಿಂತಿದೆ ಎನ್ನುವ ಸತ್ಯಗಳು ಹೊರಗೆ ಬೀಳುತ್ತವೆ. ದೇವಕಿಯಂತಹ ಉತ್ತಮ ಅಧಿಕಾರಿಯ ವಿರುದ್ಧ ಆಕೆಯದೇ ಇಲಾಖೆ ಯಾಕೆ ತಿರುಗಿ ನಿಂತಿದೆ ಎನ್ನುವ ವಿಚಾರವನ್ನು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಹೇಳಲಾಗಿದೆ.
‘ಮಹಿರ’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಆ್ಯಕ್ಷನ್ ತುಂಬಿರುವ ಚಿತ್ರ. ಇಲ್ಲಿನ ಹೊಡೆದಾಟಗಳು ನೈಜವೆನಿಸುವಂತಿವೆ. ಆ ನೈಜತೆಗೆ ಪೂರಕವಾದ ಬಾಡಿ ಲ್ಯಾಂಗ್ವೇಜ್ ಮೂಲಕ ಮಾಯಾ ಯಾನೇ ದೇವಕಿ ಪಾತ್ರಧಾರಿ ವರ್ಜೀನಿಯ ರಾಡ್ರಿಗಸ್ ಗಮನ ಸೆಳೆಯುತ್ತಾರೆ. ಮಗಳು ಆಧ್ಯಾ ಪಾತ್ರವನ್ನು ಚೈತ್ರಾ ಆಚಾರ್ ನಿರ್ವಹಿಸಿದ್ದಾರೆ. ತಾಯಿ ಮಗಳ ಕತೆ ಎನ್ನುವಂತೆ ಆರಂಭಗೊಳ್ಳುವ ಸಿನೆಮಾ ಅನೂಹ್ಯವಾದ ಬದಲಾವಣೆಯೊಂದಿಗೆ, ಆ ಎರಡೂ ಪಾತ್ರಗಳಿಗೆ ಅಷ್ಟೇ ಒತ್ತು ನೀಡುವಂಥ ಎಂಡಿಂಗ್ ಪಡೆದುಕೊಂಡಿದೆ. ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರವನ್ನು ನಿರ್ವಹಿಸಿರುವುದು ರಾಜ್ ಬಿ. ಶೆಟ್ಟಿ. ತನಿಖಾಧಿಕಾರಿ ಪ್ರತಾಪ್ ಹೆಸರಲ್ಲಿ ಕಾಣಿಸಿರುವ ರಾಜ್ ಬಿ. ಶೆಟ್ಟಿ, ತಮ್ಮ ವಿಭಿನ್ನ ಶೈಲಿಯ ಕ್ಯಾರೆಕ್ಟರ್‌ನಿಂದಲೇ ಗಮನ ಸೆಳೆಯುತ್ತಾರೆ. ದೈತ್ಯ ಗಾತ್ರದ ಇಂಟರ್ ಪೋಲ್ ಚೀಫ್ ಪಾಟೀಲ್ ಆಗಿ ಬಾಲಾಜಿ ಮನೋಹರ್ ಮನ ಸೆಳೆದಿದ್ದಾರೆ. ಮಾಯಾ ಯಾನೇ ದೇವಕಿಯ ಜೋಡಿಯಾಗಿ ನಟಿಸಿರುವ ದಿಲೀಪ್ ರಾಜ್ ಎರಡು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ನವಾಝ್ ಪಾತ್ರದಲ್ಲಿ ಖ್ಯಾತ ನಟ ಎಂ.ಕೆ. ಮಠ ಅವರು ತಣ್ಣನೆಯ ಕ್ರೌರ್ಯ ತೋರಿಸುವ ಖಳನ ಪಾತ್ರಕ್ಕೆ ಜೀವ ನೀಡಿದ್ದಾರೆ. ಭಯೋತ್ಪಾದನೆಯ ಮಾಸ್ಟರ್ ಮೈಂಡ್ ತೌಸೀಫ್ ಆಗಿ ಖುದ್ದು ನಿರ್ದೇಶಕ ಮಹೇಶ್ ಗೌಡ ನಟಿಸಿದ್ದಾರೆ. ಪೀಟರ್ ಆಗಿ ದೇವಕಿಗೆ ಸಹಾಯ ನೀಡುವ ಗೋಪಾಲಕೃಷ್ಣ ದೇಶಪಾಂಡೆ, ಪ್ರಾಂಶುಪಾಲರ ಪಾತ್ರದಲ್ಲಿ ಬಂದು ಹೋಗುವ ಬಾಬು ಹಿರಣ್ಣಯ್ಯ ಮೊದಲಾದವರ ಪಾತ್ರಗಳು ಕೂಡ ನೆನಪಲ್ಲಿ ಉಳಿಯುತ್ತವೆ.
ಮಿಥುನ್ ಮುಕುಂದನ್ ನೀಡಿರುವ ಹಿನ್ನೆಲೆ ಸಂಗೀತ ಚಿತ್ರದ ಸನ್ನಿವೇಶಗಳಿಗೆ ಪೂರಕವೆನಿಸುತ್ತದೆ.

ಕೀರ್ತನ್ ಪೂಜಾರಿ ಛಾಯಾಗ್ರಹಣದಲ್ಲಿ ಮೂಡಿ ಬಂದಿರುವ ದೃಶ್ಯಗಳು ಕುತೂಹಲ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಕತೆ ಇದೇ ರೀತಿಯಲ್ಲಿ ಕೊನೆಯಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟವಾದ ಸುಳಿವು ಕೊಟ್ಟ ಮೇಲೆಯೂ ಕತೆಯನ್ನು ಎಳೆದಾಡಿರುವುದು ಪ್ರೇಕ್ಷಕರ ಸಹನೆ ಪರೀಕ್ಷಿಸುವಂತೆ ಮಾಡುತ್ತದೆ. ಬಿಗ್ ಬಜೆಟ್ ಚಿತ್ರಗಳಲ್ಲಿ ಕಂಡಿರುವಂಥ ಇಂಟರ್‌ಪೋಲ್‌ನಂಥ ಸಂಸ್ಥೆಯ ಸಾಹಸ ಸನ್ನಿವೇಶಗಳನ್ನು ಚಿಕ್ಕದಾಗಿ ತೋರಿಸಬೇಕಾದ ಅನಿವಾರ್ಯತೆ ಚಿತ್ರಕ್ಕೆ ಇರಬಹುದು ಎಂದು ಒಪ್ಪಬಹುದು. ಆದರೆ ಅವರೇ ಹುಡುಕಾಟ ನಡೆಸುತ್ತಿರುವ ಮಾಜಿ ಅಂಡರ್ ಕವರ್ ಏಜೆಂಟ್ ಒಬ್ಬಳು ಸ್ವತಃ ಆ ಕಟ್ಟಡದೊಳಗೆ ಹೋಗುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಅದರಲ್ಲಿಯೂ ಎಲ್ಲ ಸೆಕ್ಯೂರಿಟಿಗಳನ್ನು ಭೇದಿಸಿ ನೇರ ಅಡುಗೆ ಕೋಣೆಗೆ ನುಗ್ಗಿದಂತೆ ಹೋಗಿ ಚೀಫ್ ಮುಂದೆ ನಿಲ್ಲುವುದು ನಗು ತರಿಸಿಬಿಡುತ್ತದೆ. ಒಟ್ಟಿನಲ್ಲಿ ಒಂದೊಳ್ಳೆಯ ಪ್ರಯತ್ನದ ಸಾಕಾರಕ್ಕೆ ತಾವೇ ನೀಡಿರುವ ನಾಟಕೀಯ ಕ್ಲೈಮ್ಯಾಕ್ಸ್ ಮೂಲಕ ನಿರ್ದೇಶಕರೇ ಚಿತ್ರಕ್ಕೆ ಮುಳುವಾಗಿರುವುದು ಸತ್ಯ.

ತಾರಾಗಣ: ವರ್ಜೀನಿಯ ರಾಡ್ರಿಗಸ್, ರಾಜ್ ಬಿ. ಶೆಟ್ಟಿ
ನಿರ್ದೇಶನ: ಮಹೇಶ್ ಗೌಡ
ನಿರ್ಮಾಣ: ವಿವೇಕ್ ಕೊಡಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News