ಬ್ಯಾಟಲ್ ಆಫ್ ಸೆಕ್ಸಸ್: ಲಿಂಗ ತಾರತಮ್ಯದ ವಿರುದ್ಧದ ಹೋರಾಟ

Update: 2019-07-28 06:18 GMT

ಕಳೆದ ವಾರದ ಅಂಕಣದಲ್ಲಿ ರಾಷ್ಟ್ರೀಯ ಭಾವನೆಯನ್ನು ಉದ್ದೀಪಿಸಲು, ಎರಡು ಸಮುದಾಯಗಳ ನಡುವಿನ ಸಂಘರ್ಷವನ್ನು ನಿವಾರಿಸಿ ಭಾವೈಕ್ಯವನ್ನು ಸಾಧಿಸಲು ಆಟವೊಂದು ನೆರವಿಗೆ ಬಂದ ಕಥೆಯ ‘ಇನ್‌ವಿಕ್ಟಸ್’ ಚಲನಚಿತ್ರದ ಪರಿಚಯವಾಯಿತು. ಆಟದ ಮೂಲಕವೇ ಪುರುಷ ಅಹಂಕಾರವನ್ನು ಮಣಿಸಿದ, ಮಹಿಳಾ ವಿಮೋಚನಾ ಚಳವಳಿಗೆ ಮತ್ತಷ್ಟು ಪ್ರೇರಣೆ ನೀಡಿದ ದಿಟ್ಟ ಹೋರಾಟಗಾರ್ತಿಯೊಬ್ಬಳ ಕಥನ ಇಲ್ಲಿದೆ

ಟೆನಿಸ್ ಚರಿತ್ರೆಯಲ್ಲಿ ಘಟಿಸಿದ ಪ್ರಕರಣಗಳನ್ನು ಆಧರಿಸಿ ನಿರ್ಮಿಸಿದ ‘ಬ್ಯಾಟಲ್ ಆಫ್ ಸೆಕ್ಸಸ್’ (2017) ಮೇಲುನೋಟಕ್ಕೆ ಒಂದು ಆನಂದಿಸಬಹುದಾದ ಕ್ರೀಡಾ ಸಿನೆಮಾದಂತೆ ಭಾಸವಾದರೂ, ಅದು ದೃಷ್ಟಿಕೋನವನ್ನು ಬದಲಾಯಿಸಿದ ಚರಿತ್ರೆಯ ತುಣುಕನ್ನು ಆಧರಿಸಿದ ಕಾರಣ ಅದೊಂದು ಮಹತ್ವದ ಚಿತ್ರ ಎನಿಸಿದೆ. ಹೆಣ್ಣಿನ ಲೈಂಗಿಕತೆಯ ಬಗೆಗಿನ ಸಾಂಪ್ರದಾಯಿಕ ಕಟ್ಟುಪಾಡುಗಳು ಪಲ್ಲಟಗೊಳ್ಳುತ್ತಿದ್ದ ಮತ್ತು ಮಹಿಳಾ ವಿಮೋಚನಾ ಚಳವಳಿಗಳು ಅಮೆರಿಕದಲ್ಲಿ ಗರಿಗಟ್ಟಿಕೊಳ್ಳುತ್ತಿದ್ದ ಕಾಲದಲ್ಲಿ ಕ್ರೀಡಾಂಗಣದಲ್ಲಿ ನಡೆದ ಹೋರಾಟವೊಂದು ಸ್ಥಾಯಿಯಾಗಿದ್ದ ಪುರುಷರ ನಂಬಿಕೆಯನ್ನು ಸ್ಫೋಟಿಸಿತು. ಪುರುಷ ಪ್ರಪಂಚ ನಿರ್ಮಿಸಿದ ಚೌಕಟ್ಟುಗಳು ಹರಿದುಹೋದವು. ಒಂದು ಕಾಲದಲ್ಲಿ ವಿಶ್ವದ ನಂಬರ್ ಒನ್ ಆಟಗಾರನೆನಿಸಿದ್ದ ಬಾಬಿ ರಿಗ್ಸ್ ಮತ್ತು ಸಮಕಾಲೀನ ಮಹಿಳಾ ಚಾಂಪಿಯನ್ ಬಿಲಿಜೀನ್ ಕಿಂಗ್ ನಡುವೆ ನಡೆದ ಪಂದ್ಯಾವಳಿಯು 1970ರ ದಶಕದಲ್ಲಿ ಮುಂಚೂಣಿಗೆ ಬರುತ್ತಿದ್ದ ಮಹಿಳಾ ವಿಮೋಚನಾ ಚಳವಳಿಯ ದೃಷ್ಟಿಯಿಂದ ಗಮನಾರ್ಹವಾದ ಘಟನೆಯೆನಿಸಿತು.
ಅಲ್ಲದೆ ‘ಬ್ಯಾಟಲ್ ಆಫ್ ಸೆಕ್ಸಸ್’ ಚಿತ್ರವು 1973ರಲ್ಲಿ ನಡೆದ ಬಿಲಿಜೀನ್ ಕಿಂಗ್ ಮತ್ತು ಬಾಬಿ ರಿಗ್ಸ್ ನಡುವಣ ಟೆನಿಸ್ ಪಂದ್ಯವನ್ನು ಆಧರಿಸಿದ ಕತೆಯಾದರೂ, ಅದು ಪ್ರಧಾನವಾಗಿ ಬಿಲಿಜೀನ್ ಕಿಂಗ್‌ಳ ಬದುಕಿನ ಸಂಘರ್ಷಮಯ ಅವಧಿಯನ್ನು ಕುರಿತ ಚಿತ್ರ. ಒಂದೆಡೆ ಪುರುಷ ಸಾಮ್ರಾಜ್ಯದ ಹೇರಿಕೆಗಳನ್ನು, ಮತ್ತೊಂದೆಡೆ ಲೈಂಗಿಕತೆಯ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಎದುರಿಸಿ ನಿಂತು, ಗೆಲುವು ಸಾಧಿಸಿ, ಸಮಾನತೆಗೆ ಹೊಸ ಅರ್ಥವನ್ನು ತಂದುಕೊಟ್ಟ ಕ್ರೀಡಾಪಟುವೊಬ್ಬಳ ಸಾಹಸಗಾಥೆ.
ಈ ಚಿತ್ರದ ಕಥನವನ್ನು ಅರಿಯುವ ಮೊದಲು, ಟೆನಿಸ್ ಆಟ, ಈ ಕಥನದಲ್ಲಿ ಭಾಗಿಯಾದ ಪಾತ್ರಗಳ ಹಿನ್ನೆಲೆಗಳನ್ನು ಅರಿತರೆ, ಚಿತ್ರದ ಆಶಯವನ್ನು ಅರಿತುಕೊಳ್ಳಲು ನೆರವಾಗಬಹುದು.
ಜಗತ್ತಿನ ಅತ್ಯಂತ ಪ್ರತಿಷ್ಠಿತ ನಾಲ್ಕು ಟೆನಿಸ್ ಪಂದ್ಯಾವಳಿ ಗಳನ್ನು (ವಿಂಬಲ್ಡನ್, ಅಮೆರಿಕನ್, ಆಸ್ಟ್ರೇಲಿಯನ್ ಮತ್ತು ಫ್ರೆಂಚ್) ಗ್ರಾನ್‌ಸ್ಲ್ಯಾಂ ಟೂರ್ನಮೆಂಟ್‌ಗಳೆಂದು ಕರೆಯುತ್ತಾರೆ. ಅವು ಸ್ಪರ್ಧಿಗಳಿಗೆ ಅತ್ಯಂತ ಆಕರ್ಷಕ ಬಹುಮಾನ, ಸಾರ್ವಜನಿಕ ಮತ್ತು ಮಾಧ್ಯಮಗಳಲ್ಲಿ ಜನಪ್ರಿಯತೆ ತಂದುಕೊಡುವ ಜೊತೆಗೆ ಆಟಗಾರರ ಸೋಲು-ಗೆಲುವುಗಳನ್ನು ಆಧರಿಸಿ ಶ್ರೇಯಾಂಕ (ರ್ಯಾಂಕಿಂಗ್ ಪಾಯಿಂಟ್ಸ್) ನೀಡುವುದರಿಂದ ಜಗತ್ತಿನ ಪ್ರತಿಷ್ಠಿತ ಪಂದ್ಯಾವಳಿಯೆನಿಸಿವೆ. ಹಾಗಾಗಿ ಒಂದು ಟೂರ್ನಿ ನಡೆವಾಗ ಮತ್ತೊಂದು ನಿಗದಿಯಾಗದಂತೆ ವರ್ಷಪೂರ್ತಿ ಬೇರೆ ಬೇರೆ ಋತುಗಳಲ್ಲಿ ಆಟ ಏರ್ಪಾಡಾಗುವಂತೆ ಕ್ರೀಡಾಸಂಸ್ಥೆಗಳು ನೋಡಿಕೊಂಡಿವೆ. ಗ್ಲಾನ್‌ಸ್ಲ್ಯಾಂ ಟೂರ್ನಿಗಳು ಮೊದಲು ಹವ್ಯಾಸಿ ಟೆನಿಸ್ ಆಟಗಾರರಿಗೆ ಮಾತ್ರ ಪ್ರವೇಶವನ್ನು ಸೀಮಿತಗೊಳಿಸಿದ್ದವು. 1968ರಲ್ಲಿ ಅಂತರ್‌ರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್ ಸಂಸ್ಥೆಯು ಗ್ರಾನ್‌ಸ್ಲ್ಯಾಂ ಮತ್ತು ಡೇವಿಸ್‌ಕಪ್ ಟೂರ್ನಮೆಂಟುಗಳಲ್ಲಿ ವೃತ್ತಿಪರರಿಗೂ ಪ್ರವೇಶವನ್ನು ಮುಕ್ತಗೊಳಿಸಿತು. ಅಂದಿನಿಂದ ಓಪನ್ ಎರಾ ಅಥವಾ ಮುಕ್ತ ಯುಗ ಟೆನಿಸ್‌ನಲ್ಲಿ ಆರಂಭವಾಯಿತು. ಟೆನಿಸ್ ಹೆಚ್ಚು ಸ್ಪರ್ಧಾತ್ಮಕವಾಯಿತು. ಆಟ ರೋಚಕವಾಯಿತು. ಆಟಗಾರರು ದೇವ ದೇವತೆಗಳೆನಿಸಿದರು. ಅನೇಕರು ಕುಬೇರರಾದರು. ಬದುಕು ಮತ್ತು ಆರ್ಥಿಕ ನಿರ್ವಹಣೆಯಲ್ಲಿ ತಾಳ ತಪ್ಪಿದ ಬೋರಿಸ್ ಬೆಕರ್‌ನಂಥವರು ಭಿಕಾರಿಗಳೂ ಆದರು!
ಗ್ರಾನ್ ಸ್ಲ್ಯಾಂ ಪಂದ್ಯಾವಳಿಗಳನ್ನು ಮುಕ್ತ ಯುಗಕ್ಕೆ ಪರಿವರ್ತಿಸಲು ಶ್ರಮಿಸಿದವರಲ್ಲಿ 1940, 1950ರ ದಶಕದ ಅಗ್ರಮಾನ್ಯ ಆಟಗಾರನಾಗಿದ್ದ ಜಾನ್ ಆಲ್ಬರ್ಟ್ ಕ್ರೇಮರ್ ಕೂಡ ಒಬ್ಬ. ಆತ ಕ್ರೀಡಾ ಬರಹಗಾರನಾಗಿ, ವೀಕ್ಷಕ ವಿವರಣೆಗಾರನಾಗಿ ಪ್ರಸಿದ್ಧನಲ್ಲದೆ ಅನೇಕ ಟೆನಿಸ್ ಸಂಸ್ಥೆಗಳಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ. 1970ರಲ್ಲಿ ಅಮೆರಿಕದ ಲಾನ್ ಟೆನಿಸ್ ಅಸೋಸಿಯೇಷನ್ ಅಡಿ ಆತ ಆಯೋಜಿಸಿದ ಓಪನ್ ಟೆನಿಸ್ ಟೂರ್ನಿಯೊಂದರಲ್ಲಿ ಗೆದ್ದ ಪುರುಷ ಸ್ಪರ್ಧಿಗೆ ನೀಡುವ ಬಹುಮಾನ ಮೊತ್ತದ ಎಂಟನೇ ಒಂದರಷ್ಟು ಅಂದರೆ ಶೇ. 12.5ರಷ್ಟು ಮೊತ್ತ ಮಹಿಳಾ ಆಟಗಾರರಿಗೆ ನಿಗದಿಯಾಗಿತ್ತು. ಎಲ್ಲಾ ಪಂದ್ಯಗಳಿಗೂ ಮಾರಾಟ ಮಾಡುವ ಟಿಕೆಟ್ ದರ ಒಂದೇ ಆದರೂ ಮಹಿಳಾ ಆಟಗಾರ್ತಿಯರ ಬಹುಮಾನವನ್ನು ತಗ್ಗಿಸಿ ಸೃಷ್ಟಿಯಾಗಿರುವ ತಾರತಮ್ಯವನ್ನು ಸರಿಪಡಿಸಲು ಬಿಲಿಜೀನ್ ಕಿಂಗ್ ಮತ್ತು ‘ವರ್ಲ್ಡ್ ಟೆನಿಸ್’ ಕ್ರೀಡಾಪತ್ರಿಕೆಯ ಸಂಪಾದಕಿ ಹಾಗೂ ಮಾಜಿ ಆಟಗಾರ್ತಿ ಗ್ಲಾಡಿಸ್ ಮೆಡೆಲೀ ಹೆಲ್ಡ್‌ಮನ್ ಅವರು ಕ್ರೇಮರ್‌ನನ್ನು ಕೋರಿದರು. ಆದರೆ ಮಹಿಳೆಯರ ಟೆನಿಸ್ ಆಟ ಪುರುಷರ ಬಲಕ್ಕೆ ಸಮನಲ್ಲ ಎಂಬ ನೆಪವೊಡ್ಡಿ ಬಹುಮಾನದ ಮೊತ್ತವನ್ನು ಏರಿಸಲು ಒಪ್ಪಲಿಲ್ಲ. ಇದರಿಂದ ಕೆರಳಿದ ಬಿಲಿಜೀನ್ ಕಿಂಗ್ ಅಮೆರಿಕದ ಇತರ ಎಂಟು ವೃತ್ತಿಪರ ಮಹಿಳಾ ಆಟಗಾರ್ತಿಯರನ್ನು ಸೇರಿಸಿ ‘ವರ್ಜೀನಿಯಾ ಸ್ಲಿಮ್ಸ್ ಸರ್ಕಟ್’ ಎಂಬ ಮಹಿಳೆಯರಿಗಾಗಿಯೇ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿದಳು. (ಮುಂದೆ ಇದೇ ವುಮನ್ ಟೆನಿಸ್ ಅಸೋಸಿಯೇಷನ್ WTA ಆಯಿತು) ಗ್ಲಾಡಿಸ್ ಹೆಲ್ಡ್‌ಮನ್ ಇವರ ಬೆಂಬಲಕ್ಕೆ ನಿಂತಳು. ಮಹಿಳೆಯರ ಬಂಡಾಯದಿಂದ ಕೆರಳಿದ ಕ್ರೇಮರ್ ಅಮೆರಿಕದ ಲಾಸ್ ಟೆನಿಸ್ ಅಸೋಸಿಯೇಷನ್ ನಡೆಸುವ ಟೂರ್ನಿಗಳಲ್ಲಿ ಬಂಡುಕೋರ ಸಂಸ್ಥೆಯ ಆಟಗಾರರಿಗೆ ನಿಷೇಧ ಹೇರಿದ.
ಆರಂಭದಲ್ಲಿ ಮಹಿಳೆಯರ ಆಟದ ಪ್ರವಾಸಗಳು ಅನೇಕ ಅಡ್ಡಿ ಆತಂಕಗಳನ್ನು ಎದುರಿಸುತ್ತಿರುವಾಗಲೇ ಅದರ ಮುಂದಾಳುವಾಗಿದ್ದ ಬಿಲಿಜೀನ್ ಕಿಂಗ್ ಬದುಕೂ ತಳಮಳಗಳ ಹಾದಿಯಲ್ಲಿ ನಡೆಯುತ್ತಿತ್ತು. ಅಮೆರಿಕದಲ್ಲಿ ಅಟಾರ್ನಿಯಾಗಿದ್ದ, ವರ್ಲ್ಡ್ ಟೀನ್ ಟೆನಿಸ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬನಾದ ಲ್ಯಾರಿ ಕಿಂಗ್‌ನನ್ನು ಮದುವೆಯಾಗಿದ್ದ ಬಿಲಿ ಮಾನಸಿಕ ಹಿಂಸೆಗಳಿಗೆ ತುತ್ತಾಗಿದ್ದಳು. ತಾನು ಕ್ರಮೇಣ ಮಹಿಳೆಯರಿಗೆ ದೈಹಿಕವಾಗಿ ಒಲಿಯುತ್ತಿರುವುದನ್ನು ಗುರುತಿಸಿದಳು. ತನ್ನ ಕೇಶಾಲಂಕಾರ ಮಾಡುತ್ತಿದ್ದ ಮರ್ಲಿನ್ ಬಾರ್ನೆಟ್ ಜೊತೆ ಪ್ರೇಮಾಂಕುರವಾಯಿತು. ಸಲಿಂಗಕಾಮದ ಬಗ್ಗೆ ಈಗಿನಷ್ಟು ಮುಕ್ತ ವಾತಾವರಣ ಇರದಿದ್ದ ಆ ಕಾಲದಲ್ಲಿ, ತೀರಾ ಧಾರ್ಮಿಕವಾದ ತಂದೆ ತಾಯಿಗಳ ಮನ ನೋಯಿಸಲು ಇಷ್ಟಪಡದ ಬಿಲಿಜೀನ್ ತನ್ನಲ್ಲಾಗಿರುವ ಬದಲಾವಣೆಗಳನ್ನು ಹೇಳಿಕೊಳ್ಳಲಾರದಾದಳು. ಪುರುಷ ಪ್ರಾಬಲ್ಯದ ಆಟದ ಸಂಸ್ಥೆಗಳ ವಿರುದ್ಧ ದಂಗೆಯೆದ್ದ ಕಾರಣಕ್ಕೆ ಗಂಡುಬೀರಿ ಪಟ್ಟ ಪಡೆದ ಬಿಲಿಜೀನ್ ಮತ್ತೆ ಅವರ ಬಾಯಿಗೆ ತುತ್ತಾಗುವಂಥ ಮತ್ತೊಂದು ಸಾಮಾಜಿಕ ಕಟ್ಟಳೆಯನ್ನು ಮುರಿದಿದ್ದಳು. ಈ ಹೊಯ್ದೊಟ ಅವಳ ಆಟದ ಮೇಲೂ ಪರಿಣಾಮ ಬೀರಿತು.

ಅದೇ ವೇಳೆ 1940ರ ದಶಕದ ತುಂಬಾ ಟೆನಿಸ್ ರಂಗದಲ್ಲಿ ಬಿರುಗಾಳಿಯೆಬ್ಬಿಸಿದ್ದ ವಿಶ್ವ ನಂ. ಒನ್ ಆಟಗಾರನೆನಿಸಿದ್ದ ಬಾಬಿ ರಿಗ್ಸ್ (ರಾಬರ್ಟ್ ಲ್ಯಾರಿಮೋರಿ ರಿಗ್ಸ್) ತನ್ನ ವೈವಾಹಿಕ ಬದುಕಿನ ಬಿಕ್ಕಟ್ಟುಗಳನ್ನು ಬಿಡಿಸಲಾಗದೆ ಒದ್ದಾಡುತ್ತಿದ್ದ. ತನ್ನ ಸಮಕಾಲೀನ ಶ್ರೇಷ್ಠ ಆಟಗಾರರಾದ ಡಾನ್ ಬಡ್ಜ್, ಕ್ರೇಮರ್‌ರವರಂತೆ ಎತ್ತರದ ನಿಲುವು, ದೇಹದಾರ್ಢ್ಯ ಇಲ್ಲದಿದ್ದರೂ ರಿಗ್ಸ್ ತನ್ನ ಚುರುಕುತನ, ಚೆಂಡು ನಿಯಂತ್ರಣದ ಕೌಶಲ್ಯ ಮತ್ತು ಬುದ್ಧಿಮತ್ತೆಯಿಂದ ಎದುರಾಳಿಗಳನ್ನು ಕಂಗೆಡಿಸುತ್ತಿದ್ದ. ಎದುರಾಳಿಗಳು ಕೋರ್ಟಿನಲ್ಲಿ ಓಡಾಡುವ ವಿನ್ಯಾಸವನ್ನು ಕ್ಷಣಾರ್ಧದಲ್ಲಿ ಅರಿಯುತ್ತಿದ್ದ ರಿಗ್ಸ್ ತಲುಪಲಾಗದ ಕಡೆ ಚೆಂಡನ್ನು ಉದುರಿಸಿ ಗೆಲುವು ಸಾಧಿಸುವುದರಲ್ಲಿ ನಿಷ್ಣಾತನಾಗಿದ್ದ. 1939ರ ವಿಂಬಲ್ಡನ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ವಿಜೇತನಾಗಿ ಇತಿಹಾಸ ಬರೆದಿದ್ದ. ತನ್ನ ಆಟದ ಮೇಲೆ ಬೆಟ್ ಕಟ್ಟುತ್ತಿದ್ದ, ಅದೊಂದೇ ಟೂರ್ನಿಯಲ್ಲಿ ಮೂರು ಪ್ರಶಸ್ತಿ ಗೆಲ್ಲುವ ಸವಾಲೊಡ್ಡಿ ಮೂರನ್ನೂ ಗೆದ್ದು ಹಣ ಬಾಚಿಕೊಂಡಿದ್ದ. ಗ್ರಾನ್ ಸ್ಲ್ಯಾಂ ಹಾಗೂ ಪ್ರತಿಷ್ಠಿತ ಟೂರ್ನಿಗಳಲ್ಲಿ ಪ್ರಶಸ್ತಿ ಪಡೆದ ರಿಗ್ಸ್ ವೈಯಕ್ತಿಕ ಬದುಕಿನಲ್ಲಿ ತನ್ನದೇ ಬೇಜವಾಬ್ದಾರಿಗಳಿಂದ ವೈಫಲ್ಯ ಕಂಡಿದ್ದ. ಎರಡನೇ ಹೆಂಡತಿಯಿಂದ ವಿಚ್ಛೇದನ ಪಡೆದ ಮೇಲೆ ಶ್ರೀಮಂತ ಕುಟುಂಬದ ಪ್ರಿಸಿಲ ವೀಲನ್‌ಳನ್ನು 1957ರಲ್ಲಿ ಮದುವೆಯಾದ. ಐದಾರು ವರ್ಷಕ್ಕೆ ಸಂಬಂಧ ಹಳಸಿಹೋಗಿತ್ತು. ಕಾರಣ ಮಿತಿ ಮೀರಿದ ಜೂಜು, ಕುಡಿತ ಮತ್ತು ಷೋಕಿ.
1970ರ ವೇಳೆಗೆ ಪ್ರಿಸಿಲಾ ಗಂಡನನ್ನು ಹೊರಹಾಕಿದ್ದಳು. ಟೆನಿಸ್ ರಂಗದಲ್ಲಿ ಪುರುಷರು ಮತ್ತು ಮಹಿಳೆಯರ ಸಮಾನತೆ ಬಗ್ಗೆ ನಡೆಯುತ್ತಿದ್ದ ಚರ್ಚೆಯಿಂದ ಪ್ರೇರಿತನಾದ ಆತ ಮಹಿಳೆಯರ ಆಟದ ಗುಣಮಟ್ಟ ಎಂಥದ್ದು ಎಂದು ಹಳಿ ಯುತ್ತಿದ್ದ. ಮಹಿಳೆಯರು ಎಂದಿಗೂ ಪುರುಷರಷ್ಟು ಸಮರ್ಥ ಆಟಗಾರರಾಗಲು ಸಾಧ್ಯವಿಲ್ಲವೆಂದು ಬಡಾಯಿ ಕೊಚ್ಚಿಕೊಂಡ. ಬೇಕಾದರೆ ಐವತ್ತೈದು ವರ್ಷದ ತಾನು ಈಗಲೂ ಯಾವುದೇ ಆಟಗಾರ್ತಿಯನ್ನು ಸೋಲಿಸಬಲ್ಲೆ ಎಂದು ಸವಾಲು ಹಾಕಿದ.
1973ರ ವೇಳೆಗೆ ಬಿಲಿಜೀನ್ ಹುಟ್ಟುಹಾಕಿದ ಸಂಸ್ಥೆ ವುಮೆನ್ ಟೆನಿಸ್ ಅಸೋಸಿಯೇಷನ್ ಆಗಿ ಮಾನ್ಯತೆ ಪಡೆದು ಅಂತರ್‌ರಾಷ್ಟ್ರೀಯ ರಂಗದಲ್ಲಿ ದಾಪುಗಾಲು ಹಾಕುತ್ತಿತ್ತು. ಜೂಜು ಬಿಟ್ಟರೆ ಯಾವುದರಲ್ಲೂ ಆಸಕ್ತಿಯಿಲ್ಲದ ರಿಗ್ಸ್ ತನ್ನೊಡನೆ ಆಟವಾಡುವಂತೆ ಬಿಲಿಜೀನ್ ಕಿಂಗ್‌ಳನ್ನು ಕೆಣಕುತ್ತಲೇ ಇದ್ದ. ಆದರೆ ಆತನ ಸವಾಲನ್ನು ಉಪೇಕ್ಷಿಸಿದಳು. 1970ರಲ್ಲಿ ಬಿಲಿಜೀನ್ ಕಿಂಗ್‌ಳನ್ನು ಸೋಲಿಸಿ ವಿಂಬಲ್ಡನ್ ಕಿರೀಟ ಕಸಿದುಕೊಂಡಿದ್ದ ಜಗತ್ತಿನ ಟೆನಿಸ್ ಕ್ಷೇತ್ರದಲ್ಲಿ ಅತ್ಯಧಿಕ ಪ್ರಶಸ್ತಿ ಗಳಿಸಿದ ಖ್ಯಾತಿ ಪಡೆದ ಮಾರ್ಗರೇಟ್ ಕೋರ್ಟ್ ಈತನ ಮಾತಿನ ಗಾಳಕ್ಕೆ ಬಿದ್ದಳು. 1973ರ ಮೇ 13 ರಂದು ನಡೆದ ಮೊದಲ ಬ್ಯಾಟಲ್ ಆಫ್ ಸೆಕ್ಸಸ್‌ನಲ್ಲಿ ಮೂವತ್ತು ವರ್ಷದ, ನಂಬರ್ ಒನ್ ತಾರೆ, ಮಾರ್ಗರೇಟ್ ಕೋರ್ಟ್ ಳನ್ನು 55 ವರ್ಷದ ರಿಗ್ಸ್ 6-2, 6-1 ನೇರ ಸೆಟ್‌ಗಳಿಂದ ಸೋಲಿಸಿಬಿಟ್ಟ!.


ಅಪರೂಪದಲ್ಲಿ ಅಪರೂಪವೆನಿಸಿದ ಗಂಡು-ಹೆಣ್ಣಿನ ನಡುವಿನ ನೇರ ಸ್ಪರ್ಧೆಯಲ್ಲಿ ತನ್ನ ಬಡಾಯಿಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ವಿಜಯ ಸಾಧಿಸಿದ ರಿಗ್ಸ್ ಈಗ ಜಗತ್ತಿನ ಗಮನ ಸೆಳೆದ. ಮತ್ತಷ್ಟು ಉನ್ಮತ್ತನಾಗಿ ಬಿಲಿಜೀನ್ ಕಿಂಗ್‌ಳನ್ನು ಕೆಣಕತೊಡಗಿದ. 1972ರಲ್ಲಿ ಮತ್ತೆ ಜಗತ್ತಿನ ಅಗ್ರ ಶ್ರೇಯಾಂಕ ಪಡೆದಿದ್ದ ಬಿಲಿಜೀನ್ ಕಿಂಗ್‌ಳನ್ನು ಇಂಥದೊಂದು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿಲು ಆಯೋಜಕರು ದೊಡ್ಡ ಮೊತ್ತದ ಹಣಕ್ಕೆ (ಗೆದ್ದವರಿಗೆ ಒಂದು ಲಕ್ಷ ಡಾಲರ್. ಈಗಿನ ಆರು ಲಕ್ಷದಷ್ಟು ಡಾಲರ್‌ಗೆ ಸಮ) ಆಕರ್ಷಣೆ ಒಡ್ಡಿದರು! ರಾಷ್ಟ್ರೀಯ ಪ್ರಸಾರದ ಹಕ್ಕು ಪಡೆದ ಎಬಿಸಿ ದೂರವಾಣಿ ಸಂಸ್ಥೆಯು ಈ ಸ್ಪರ್ಧೆಯನ್ನು ‘ಬ್ಯಾಟಲ್ ಆಫ್ ಸೆಕ್ಸಸ್’ ಎಂಬ ಶೀರ್ಷಿಕೆಯಡಿ ಪ್ರಚಾರ ಮಾಡಿತು. ಕೊನೆಗೂ ಬಿಲಿಜೀನ್ ಕಿಂಗ್ ರಿಗ್ಸ್‌ನನ್ನು ಕೋರ್ಟ್‌ನಲ್ಲಿ ಎದುರಿಸಲು ಒಪ್ಪಿದಳು.
ಸ್ಪರ್ಧೆಯನ್ನು ರಿಗ್ಸ್ ಗಂಭೀರವಾಗೇನೂ ತೆಗೆದುಕೊಳ್ಳ ಲಿಲ್ಲ. ಆದರೆ ಕಿಂಗ್ ಆ ರೀತಿಯಲ್ಲಿರಲು ಸಾಧ್ಯವಿರಲಿಲ್ಲ. ತೀವ್ರ ಅಭ್ಯಾಸದಲ್ಲಿ ತೊಡಗಿದಳು. ತನ್ನ ಹಳೆಯ ಗೆಳತಿ ಬಂದು ಕೇಶಾಲಂಕಾರ ಮಾಡಿದ ಕೂಡಲೇ ಉಲ್ಲಸಿತ ಗೊಂಡಳು. ಸೆಪ್ಟ್ಟಂಬರ್ 20, 1973ರಲ್ಲಿ ಟೆಕ್ಸಾಸ್‌ನ ಹೌಸ್ಟನ್ ಗುಮ್ಮಟದ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ಆಟ ಆರಂಭವಾಗುವ ಮುನ್ನ ಬಿಲಿಜೀನ್ ಕಿಂಗ್ ನಾಲ್ವರು ದೃಢಕಾಯದ ಯುವಕರು ಎತ್ತಿಕೊಂಡು ಬರುವ ಪಲ್ಲಕ್ಕಿಯಲ್ಲಿ ಕ್ಲಿಯೋಪಾತ್ರಾಳಂತೆ ಕೋರ್ಟ್ ಗೆ ಬಂದಿಳಿದರೆ, ರಿಗ್ಸ್ ಸುಂದರಿಯರು ಎಳೆತರುವ ಗಾಡಿಯಲ್ಲಿ ಆಗಮಿಸುತ್ತಾನೆ. ಶುಗರ್ ಡ್ಯಾಡಿ ಕಂಪೆನಿಯ ದೊಡ್ಡ ಕ್ಯಾಂಡಿಯನ್ನು ಕಿಂಗ್ ಕೈಗೆ ರಿಗ್ಸ್ ನೀಡಿ ವಿಶ್ ಮಾಡಿದರೆ (ಆಕೆಯನ್ನು ಮಗು ಎಂದು ಅಣಕಿಸುವ ರೀತಿಯಲ್ಲಿ) ಪುರುಷ ಅಹಂಕಾರವನ್ನು ಹಂಗಿಸುವಂತೆ, ಚೀರುವ ಹಂದಿ ಮರಿಯೊಂದನ್ನು (ಮೇಲ್ ಚುವನಿಸ್ಟ್ ಪಿಗ್ ಎಂಬರ್ಥದಲ್ಲಿ) ಕಿಂಗ್ಸ್ ಎತ್ತಿ ರಿಗ್ಸ್‌ಗೆ ನೀಡುತ್ತಾಳೆ. ಈ ನಡುವೆ ಕ್ರೇಮರ್ ಆಟ ಘೋಷಣೆ, ವೀಕ್ಷಕ ವಿವರಣೆ ನೀಡುವುದಾದರೆ ಟೂರ್ನಿಯಿಂದ ಹೊರಗುಳಿಯುವುದಾಗಿ ಕಿಂಗ್ ಹಾಕಿದ ಷರತ್ತಿಗೆ ಆಯೋಜಕ ಸಂಸ್ಥೆ ಮಣಿಯುತ್ತದೆ. ಕಿಂಗ್ ಪುರುಷರ ಆಜ್ಞೆಗಳಿಗೆ ಒಡ್ಡಿದ ಮೊದಲ ಸವಾಲಿನ ಗೆಲುವು ಅದು. ಅಪರಿಮಿತ ಆತ್ಮ ವಿಶ್ವಾಸದಿಂದ ಆಡುವ ರಿಗ್ಸ್ ಮೊದಲ ಸೆಟ್‌ನಲ್ಲಿ 3-2ರಿಂದ ಮುನ್ನಡೆ ಸಾಧಿಸಿದಾಗ ಫಲಿತಾಂಶ ನಿರೀಕ್ಷಿತ ದಿಕ್ಕಿನಲ್ಲಿ ಸಾಗುವುದು ಸ್ಪಷ್ಟವಾಗುತ್ತಿರುವ ಕಿಂಗ್ ಪುಟಿದೇಳುತ್ತಾಳೆ. ದುರಂಹಕಾರದ ರಿಗ್ಸ್‌ಗೆ ಕೋರ್ಟಿನಲ್ಲಿ ಅಲೆದಾಡಿಸುತ್ತಾ ಅಕ್ಷರಶಃ ನೀರು ಕುಡಿಸುತ್ತಾಳೆ. ಸ್ಪಾನ್ಸರ್ ಹಣಕ್ಕಾಗಿ ಹಾಕಿಕೊಂಡಿದ್ದ ಶುಗರ್‌ಡ್ಯಾಡಿ ಕಂಪೆನಿಯ ಜರ್ಕಿನ್ ಅನ್ನು ಸುಸ್ತಾಗಿ ಆಟದ ಮಧ್ಯೆ ಕಳಚಬೇಕಾಗುತ್ತದೆ. ಒಂದು ಹಂತದಲ್ಲಿ ಕೈ ಮಣಿಕಟ್ಟಿನ ನೋವಿನಿಂದ ನರಳುತ್ತಾನೆ. ಹೀಗೆ ಆಟದಿಂದ ಆಟಕ್ಕೆ ಪುರುಷ ಅಹಂಕಾರ ಕಳಚುತ್ತಾ ಹೋಗುತ್ತದೆ. ಎದುರಾಳಿಯನ್ನು ಕೋರ್ಟಿನ ಮೂಲೆ ಮೂಲೆಗೆ ಅಟ್ಟಿ ಸುಸ್ತು ಪಡಿಸುತ್ತಾ ಕಿಂಗ್ ಕೊನೆಗೆ 6-4, 6-3, 6-3 ನೇರ ಸೆಟ್‌ಗಳಿಂದ ಮಣಿಸುತ್ತಾಳೆ.
 ಇದೊಂದು ಅಸಾಮಾನ್ಯ ಗೆಲುವು. ಪುರುಷ ಅಹಂಕಾರ ವನ್ನು ಮಣಿಸಿದ ಗೆಲುವು. ಅದೇ ವೇಳೆ ಭವ್ಯವಾದ ವೇದಿಕೆಯಲ್ಲಿ ನಡೆಯುತ್ತಿರುವ ಪ್ರಹಸನದಂತಿದ್ದರೂ, ಅನಾದಿಕಾಲದ ಲಿಂಗ ತಾರಮ್ಯದ ವಿರುದ್ಧದ ಹೋರಾಟವನ್ನು ಆಧರಿಸಿದ ಕಾರಣ ಆಟದ ಗಾಂಭೀರ್ಯಕ್ಕೆ ಕೊರತೆ ಇರಲಿಲ್ಲ. ಈ ಕಥನ ವೈಯಕ್ತಿಕ ಹೋರಾಟದ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಹೋರಾಟವೂ ಆಗಿತ್ತು. ಚಿತ್ರವು ಆಕರ್ಷಕವಾಗಲು, ರಂಜನೀಯವಾಗಿರಲು ಅದರ ಬಿಗಿಯಾದ ಚಿತ್ರಕತೆ ಮತ್ತು ಪ್ರಮುಖ ಕಲಾವಿದರ ಸಹಜಾಭಿನಯವೂ ಕಾರಣ. ನಿರ್ದೇಶಕ ಜೋಡಿ ವಲರಿ ಫ್ಯಾರಿಸ್ ಮತ್ತು ಜೊನಾಥನ್ ಡೇಟನ್ ಎಪ್ಪತ್ತರ ದಶಕದ ಸಾಮಾಜಿಕ, ರಾಜಕೀಯ ಮತ್ತು ಮಹಿಳಾ ಟೆನಿಸ್ ರಂಗವನ್ನು ಪರಿಚಯಿಸಲು ಬಳಸಿರುವ ದೃಶ್ಯಗಳು ಅವುಗಳ ಸಹಜತೆಯಿಂದ ಸೆಳೆಯುತ್ತವೆ. ಇವೆಲ್ಲವೂ ದೃಶ್ಯದಲ್ಲಿ ಕಳೆಗಟ್ಟ್ಟುವುದರಿಂದ ಪ್ರೇಕ್ಷಕ ಇತಿಹಾಸವೊಂದಕ್ಕೆ ಸಾಕ್ಷಿಯಾಗುವ ರೀತಿಯಲ್ಲಿ ನಿರ್ದೇಶಕರು ಚಿತ್ರವನ್ನು ರೂಪಿಸಿದ್ದಾರೆ. ಒಂದು ಕಾಲಘಟ್ಟದಲ್ಲಿ ಟೆನಿಸ್ ಹಿಡಿದ ಹೊರಳುದಾರಿಯನ್ನು ಎರಡು ಗಂಟೆಗಳ ಅವಧಿಗೆ ಹ್ರಸ್ವಗೊಳಿಸಿ ಗೆಲ್ಲುವುದು ಸುಲಭದ ಕಾರ್ಯವಲ್ಲ. ಆದರೆ ಚಿತ್ರದ ಆಶಯವನ್ನು ಬಿಂಬಿಸಲು ಅಗತ್ಯವಾದ ದೃಶ್ಯಗಳ ಜೋಡಣೆಯಲ್ಲಿ ಸಾಂಗತ್ಯ ಸಾಧಿಸಲು ಬಳಸಿರುವ ಸಂಭಾಷಣೆ, ಘಟನೆಗಳು ಚಿತ್ರವನ್ನು ಚೇತೋಹಾರಿ ಅನುಭವಕ್ಕೆ ಸಿದ್ಧಪಡಿಸುತ್ತವೆ. ನಿರ್ದೇಶಕರು ಆ ಕಾಲಘಟ್ಟವನ್ನು ಪುನಾರಚಿಸಲು ಪ್ರತಿಯೊಂದು ವಿವರಗಳಿಗೆ ನೀಡಿರುವ ಶ್ರಮ ಎದ್ದು ಕಾಣುತ್ತದೆ. ಬಿಲಿಜೀನ್ ಕಿಂಗ್ ಪಾತ್ರವನ್ನು ವಹಿಸಿರುವ ಎಮ್ಮ ಸ್ಟೋನ್ ಮೂಲ ಪಾತ್ರದ ಪ್ರತಿರೂಪದಂತಿಲ್ಲವಾದರೂ ಅಭಿನಯದ ಮೂಲಕವೇ ಕಿಂಗ್ಳ ಮನೋಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ತನ್ನ ಪ್ರತಿಭೆಯನ್ನು ತೋರಿಸಿದ್ದಾಳೆ. ಆಕೆ ಕಿಂಗ್‌ಳನ್ನು ಸಮಾನತೆಗಾಗಿ ಹೋರಾಡುವ ಒಬ್ಬ ಐಕಾನ್ ಆಗಿ ಅಥವಾ ಹೀರೋ ರೀತಿಯಲ್ಲಿ ವ್ಯಕ್ತಪಡಿಸದೆ ಆಟವೇ ಹೋರಾಟದ ಅಸ್ತ್ರವೆನ್ನುವ ರೀತಿಯಲ್ಲಿ ಸಂಯಮದ ನಟನೆಯಿಂದ ಗಮನಸೆಳೆಯುತ್ತಾಳೆ. ಒಂದೆಡೆ ಒಲವಿನ ಗಂಡನ ಪ್ರೀತಿಯನ್ನೂ ತೊರೆಯಲಾರದೆ ಮತ್ತೊಂದೆಡೆ ತಾನು ಒಲಿದ ಗೆಳತಿ ಮರಿಲಿನ್ ಬಾರ್ನೆಟ್‌ಳನ್ನು ಮರೆಯಲಾಗದೆ ಸಂಕಟ ಪಡುವ ವ್ಯಕ್ತಿಯಾಗಿ ಅದೇ ಸಮಯದಲ್ಲಿ ಪುರುಷ ಹೇರಿಕೆಗಳನ್ನು ಮುರಿಯುವ ದಿಟ್ಟ ಹೆಣ್ಣಾಗಿ ಹಾದು ಹೋಗುವ ಅಸಂಖ್ಯ ಭಾವನೆಗಳನ್ನು, ತೊಳಲಾಟಗಳನ್ನು ನಟಿ ಎಮ್ಮ ಸಮರ್ಥವಾಗಿ ಹೊರಹಾಕಿದ್ದಾಳೆ. ಹಾಗೆಯೇ ಅವಳ ಗೆಳತಿ, ಕೇಶವಿನ್ಯಾಸಕಿ ಮರಿಲಿನ್ ಬಾರ್ನೆಟ್ ಪಾತ್ರದಲ್ಲಿ ನಟಿ ಆಂದ್ರಿಯಾ ರೋಸೆನ್‌ಬರೋ ನಟನೆಯೂ ಶ್ಲಾಘನೀಯ. ಪತ್ನಿಯಿಂದ ತಿರಸ್ಕೃತನಾಗಿ, ಕುಡಿತ ಜೂಜಿನ ದಾಸನಾಗಿ, ಪುರುಷ ಹಿರಿಮೆಯನ್ನು ಸಾರುವ ಬಾಯಿಬಡುಕ ಬಾಬಿ ರಿಗ್ಸ್ ಪಾತ್ರವು ಸ್ವಲ್ಪ ಅತಿಯಾದ ಮಟ್ಟದಲ್ಲಿ ಕಾಮಿಕ್ ಆಗಿದೆಯೇನೋ ಎನಿಸುತ್ತದೆ. ತನ್ನ ಬೇಜವಾಬ್ದಾರಿ ವರ್ತನೆಯಿಂದ ಕಳೆದುಹೋದ ಪ್ರಸಿದ್ಧಿ, ಹಣವನ್ನು ಮರಳಿ ಪಡೆಯುವ ತವಕದಲ್ಲಿ ಮಹಿಳೆಯರನ್ನು ಅಪಮಾನಿಸುವ, ಕೆಣಕಿ ಸ್ಪರ್ಧೆಗೆ ಎಳೆಯುವ ಬಾಬಿ ರಿಗ್ಸ್‌ನ ವಿಲಕ್ಷಣಗಳನ್ನು ನಟ ಸ್ಟೀವ್ ಕ್ಯಾರೆಲ್ ಹೆಚ್ಚು ಕಾಮಿಕ್ ಆಗಿ ಕಾಣುವ ರೀತಿಯಲ್ಲಿ ನಟಿಸಿದ್ದಾರೆ. ಈ ಪಾತ್ರದ ಸಂಕೀರ್ಣತೆ ಕಿಂಗ್ ಪಾತ್ರದಷ್ಟು ಗಟ್ಟಿಯಾಗಿಲ್ಲದಿರುವುದು ಚಿತ್ರದ ಕೊರತೆ. ಆದರೆ 2016ರ ಅಮೆರಿಕ ಚುನಾವಣೆಯ ನಂತರ ಅಧಿಕಾರಕ್ಕೆ ಬಂದು ತನ್ನ ಒರಟುತನ, ಭಿನ್ನಾಭಿಪ್ರಾಯಗಳನ್ನು ಒಪ್ಪದ, ಕುಚೋದ್ಯದ ಮಾತು, ಮಹಿಳೆಯರ ಬಗೆಗಿನ ಅಸಹನೆ, ಬಡಾಯಿಕೊಚ್ಚುವ ಡೊನಾಲ್ಡ್ ಟ್ರಂಪ್‌ರನ್ನು ಈ ಪಾತ್ರದಲ್ಲಿ ಮರುಸೃಷ್ಟಿಸಿರಬಹುದೇನೋ ಎಂಬ ಅನುಮಾನವಿದೆ.
ಅದೇನೇ ಇರಲಿ, ಒಳ್ಳೆಯ ಕ್ರೀಡಾ ಬಯೋಪಿಕ್‌ಗಳು ವ್ಯಕ್ತಿಯೊಬ್ಬನ ಸಾಧನೆಯನ್ನು ಹೇಳುತ್ತಲೇ ಒಂದು ಕಾಲದ ಅನೇಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ‘ಭಾಗ್ ಮಿಲ್ಕಾ ಭಾಗ್’ ಚಿತ್ರ ಅಂಥ ಪ್ರಯತ್ನಗಳಲ್ಲೊಂದು. ಬ್ಯಾಟಲ್ ಆಫ್ ಸೆಕ್ಸಸ್ ಸಹ ತನ್ನ ಮಿತಿಗಳ ನಡುವೆಯೂ ಸಂಕಷ್ಟಕ್ಕೊಳಗಾದ ವ್ಯಕ್ತಿಗಳ ಖಾಸಗಿ ಬದುಕಿನ ತಲ್ಲಣಗಳನ್ನು ಹೇಳುತ್ತಲೇ ಗತಕಾಲಘಟ್ಟದ ಸಾಮಾಜಿಕ, ರಾಜಕೀಯ, ಚಳವಳಿಗಳ ಮೇಲೂ ಬೆಳಕು ಚೆಲ್ಲುವ ಗಮನಾರ್ಹ ಪ್ರಯತ್ನ.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News