ಅಲಿಗಡ:ಜಿಲ್ಲಾಧಿಕಾರಿಗಳು ರಸ್ತೆಯಲ್ಲಿ ಹನುಮಾನ್ ಚಾಲೀಸಾ ಪಠಿಸುವಂತೆ ಮಾಡುವುದಾಗಿ ಸಂಘ ಪರಿವಾರದ ಬೆದರಿಕೆ
ಅಲಿಗಡ(ಉ.ಪ್ರ),ಜು.28: ಅಲಿಗಡ ಜಿಲ್ಲಾಧಿಕಾರಿ ಸಿ.ಬಿ.ಸಿಂಗ್ ಅವರು ರಸ್ತೆಯಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವಂತೆ ಮಾಡುವುದಾಗಿ ಸಂಘ ಪರಿವಾರದ ಸಂಘಟನೆ ಹಿಂದು ಜಾಗರಣ ಮಂಚ್ ಬೆದರಿಕೆಯೊಡ್ಡಿದೆ. ಜಿಲ್ಲಾಡಳಿತವು ರಸ್ತೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿದ ಬಳಿಕ ಈ ಬೆದರಿಕೆ ಹೊರಬಿದ್ದಿದೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಚ್‌ನ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಿಂಗ್ ಅವರು,ನಾವು ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸುವುದಿಲ್ಲ. ನಮಗೆ ನಿರ್ದೇಶಗಳನ್ನು ಹೊರಡಿಸಲು ಅವರು ಯಾರು? ಮುಕ್ತ ಸ್ಥಳಗಳಲ್ಲಿ ನಾವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ಅವರು ತಡೆದರೆ ಅವರು ರಸ್ತೆಯಲ್ಲಿ ಹನುಮಾನ್ ಚಾಲೀಸಾ ಪಠಿಸುವಂತೆ ನಾವು ಮಾಡುತ್ತೇವೆ ಎಂದು ಹೇಳಿದರು.
ಪ್ರತಿ ಶುಕ್ರವಾರ ಮುಸ್ಲಿಮರ ನಮಾಝ್‌ಗೆ ಪ್ರತಿಯಾಗಿ ಪ್ರತಿ ಮಂಗಳವಾರ ಮತ್ತು ಶನಿವಾರ ರಸ್ತೆಗಳಲ್ಲಿ ಹನುಮಾನ್ ಚಾಲೀಸಾ ಪಠಣ ಮತ್ತು ಆರತಿಗಳನ್ನು ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಹಾಪುರ್‌ನಿಂದ ಆರಂಭಗೊಂಡಿದ್ದ ಇದು ಶೀಘ್ರವೇ ಪಶ್ಚಿಮ ಉತ್ತರ ಪ್ರದೇಶದ ಆರಕ್ಕೂ ಅಧಿಕ ಜಿಲ್ಲೆಗಳಿಗೆ ವ್ಯಾಪಿಸಿದೆ.
ಶುಕ್ರವಾರ ಉಭಯ ಸಮುದಾಯಗಳ ಪ್ರತಿನಿಧಿಗಳ ಸಭೆಯನ್ನು ಕರೆದಿದ್ದ ಸಿಂಗ್,ಇಂತಹ ಚಟುವಟಿಕೆಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟಾಗುತ್ತದೆ. ರಸ್ತೆಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಈದ್‌ನಂತಹ ಸಂದರ್ಭಗಳಲ್ಲಿ ಇದು ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದರು.