×
Ad

ಕನ್ವರಿಯಾ ಪಾದವನ್ನು ಮಸಾಜ್ ಮಾಡಿದ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ

Update: 2019-07-28 19:55 IST

ಲಕ್ನೋ,ಜು.28: ಕನ್ವರಿಯಾ ಓರ್ವರ ಪಾದಕ್ಕೆ ತಾನು ಮಸಾಜ್ ಮಾಡಿದ್ದನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಜಯ ಕುಮಾರ ಪಾಂಡೆ ಅವರು,ಸಮಾಜಕ್ಕೆ ಒಳ್ಳೆಯ ಸಂದೇಶವೊಂದನ್ನು ರವಾನಿಸಲು ತಾನು ಆ ಕಾರ್ಯ ಮಾಡಿದ್ದೆ ಎಂದು ಹೇಳಿದ್ದಾರೆ.

ಪಾಂಡೆ ಅವರು ಕನ್ವರಿಯಾ ಪಾದಕ್ಕೆ ಮಸಾಜ್ ಮಾಡುತ್ತಿರುವ ವೀಡಿಯೊವೊಂದನ್ನು ಶುಕ್ರವಾರ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದ ಜಿಲ್ಲಾ ಪೊಲೀಸ್ ಇಲಾಖೆಯು,‘ಜನರನ್ನು ರಕ್ಷಿಸುವುದು ಮಾತ್ರವಲ್ಲ,ಅವರಿಗೆ ಸೇವೆಯನ್ನೂ ಸಲ್ಲಿಸುತ್ತೇವೆ’ ಎಂಬ ಅಡಿಬರಹವನ್ನು ನೀಡಿತ್ತು.

ಕನ್ವರ್ ಶಿವನ ಭಕ್ತರು ಕೈಗೊಳ್ಳುವ ವಾರ್ಷಿಕ ಯಾತ್ರೆಯಾಗಿದೆ. ಕನ್ವರಿಯಾಗಳು ಎಂದು ಕರೆಯಲಾಗುವ ಈ ಯಾತ್ರಿಗಳು ಕಾವಡಿಗಳಲ್ಲಿ ಗಂಗಾಜಲವನ್ನು ಹೊತ್ತುಕೊಂಡಿರುತ್ತಾರೆ. ಬರಿಗಾಲುಗಳಲ್ಲಿ ನಡೆಯುವ ಅವರು ನೂರಾರು ಕಿ.ಮೀ.ಗಳನ್ನು ಕ್ರಮಿಸುತ್ತಾರೆ.

ಶುಕ್ರವಾರ ರಾತ್ರಿ ಶಾಮ್ಲಿಯಲ್ಲಿ ಕನ್ವರಿಯಾಗಳಿಗಾಗಿ ಏರ್ಪಡಿಸಲಾಗಿದ್ದ ನಿಸರ್ಗ ಚಿಕಿತ್ಸೆ ಶಿಬಿರದ ಉದ್ಘಾಟನೆಗೆ ಪಾಂಡೆಯವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಅವರು ವಯಸ್ಸಾದ ಕನ್ವರಿಯಾ ಓರ್ವರ ಪಾದಗಳಿಗೆ ಮಸಾಜ್ ಮಾಡಿದ್ದರು.

ಪೊಲೀಸರೀಗ ಹೆಚ್ಚಿನ ಪಾತ್ರಗಳನ್ನು ಹೊಂದಿದ್ದಾರೆ. ಅನುಕಂಪ ಮತ್ತು ಮಾನವೀಯತೆ ಅವುಗಳಲ್ಲಿ ಸೇರಿವೆ. ಪೊಲೀಸರು ಜನರಿಂದ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಪೊಲೀಸರು ಗಾಯಾಳುಗಳಿಗೆ ನೆರವು ಮತ್ತು ಪ್ರಥಮ ಚಿಕಿತ್ಸೆ ನೀಡಬಹುದಾದರೆ ಎಸ್‌ಪಿಯೋರ್ವ ದುರ್ಬಲ ವ್ಯಕ್ತಿಗೆ ಮಸಾಜ್ ಮಾಡುವ ಮೂಲಕ ಹಿತಕರ ಅನುಭವವನ್ನೇಕೆ ನೀಡಬಾರದು ಎಂದು ಪಾಂಡೆ ಸುದ್ದಿಗಾರರಿಗೆ ಪ್ರಶ್ನಿಸಿದರು.

ಸಹಾರನಪುರದ ಡಿಐಜಿ ಉಪೇಂದ್ರ ಕುಮಾರ ಅಗರ್ವಾಲ್ ಅವರೂ ಪಾಂಡೆಯವರನ್ನು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News