ಗುಂಪು ಥಳಿತ ನಿಗ್ರಹಿಸಲು ಸಚಿವರ ಸಮಿತಿ: ನೇತೃತ್ವ ವಹಿಸಲಿರುವ ಅಮಿತ್ ಶಾ

Update: 2019-07-30 10:57 GMT

ಹೊಸದಿಲ್ಲಿ, ಜು.30:  ದೇಶದಲ್ಲಿ ಗುಂಪು ಥಳಿತ ಘಟನೆಗಳನ್ನು ನಿಯಂತ್ರಿಸಲು ಕಳೆದ ವರ್ಷ ರಚನೆಗೊಂಡ ಸಚಿವರ ಸಮಿತಿಯ ನೇತೃತ್ವವನ್ನು ಗೃಹ ಸಚಿವ ಅಮಿತ್ ಶಾ ವಹಿಸಲಿದ್ದಾರೆ.

ಈ ಸಚಿವರ ಸಮಿತಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಇದ್ದಾರೆ.

ಗುಂಪು ಥಳಿತ ಅಪರಾಧಗಳ ವಿರುದ್ಧ ಕಠಿಣ ಕ್ರಮಗಳು ಹಾಗೂ ನಿವಾರಣೋಪಾಯಗಳನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಜುಲೈ 2018ರ ತೀರ್ಪಿನಲ್ಲಿ ನೀಡಿದ ಸೂಚನೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅಪೀಲಿನ ಮೇಲೆ ವಿಚಾರಣೆ ನಡೆಸಿದ್ದ ಉನ್ನತ ನ್ಯಾಯಾಲಯ ಕಳೆದ ವಾರ ಕೇಂದ್ರ, ರಾಜ್ಯ ಸರಕಾರಗಳು ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತ್ತು.

ಸರಕಾರವು ಗುಂಪು ಥಳಿತ ಘಟನೆಗಳ ಕುರಿತು ಚರ್ಚಿಸಿ ಕೈಗೊಳ್ಳಬೇಕಾದ ಕ್ರಮ ಕುರಿತಾದ ಶಿಫಾರಸು ನೀಡಲು ಸಚಿವರ ಸಮಿತಿಯನ್ನು ರಚಿಸಿತ್ತು ಎಂದು ಜುಲೈ 24ರಂದು ರಾಜ್ಯ ಸಭೆಗೆ ನೀಡಿದ ಮಾಹಿತಿಯಲ್ಲಿ ಗೃಹ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದರು.

ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ ನೇತೃತ್ವದ ಉನ್ನತಾಧಿಕಾರ ಸಮಿತಿ ಸೆಪ್ಟೆಂಬರ್ 2018ರಲ್ಲಿ ಸರಕಾರಕ್ಕೆ ನೀಡಿದ ವರದಿಯಲ್ಲಿ  ಗುಂಪು ಥಳಿತ ಹಾಗೂ ಹತ್ಯೆ ತಡೆಯಲು ಕಠಿಣ ಕಾನೂನು ಜಾರಿಗೆ ಸೂಚಿಸಿದ ನಂತರ ಕೇಂದ್ರ ಸಾಮಾಜಿಕ ಜಾಲತಾಣಗಳಿಗೆ ವದಂತಿಗಳಿಗೆ ಎಡೆ ಮಾಡಿ ಕೊಡುವಂತಹ ಪೋಸ್ಟ್ ಗಳನ್ನು ತೆಗೆದು ಹಾಕಲು ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News