ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ: ನಿವಾಸಿ ವೈದ್ಯರ ಎಚ್ಚರಿಕೆ

Update: 2019-07-31 18:19 GMT

ಹೊಸದಿಲ್ಲಿ, ಜು. 31: ರಾಷ್ಟ್ರೀಯ ವೈದ್ಯಕೀಯ (ಎನ್‌ಎಂಸಿ) ಮಸೂದೆ ಪ್ರತಿಭಟಿಸಿ ತುರ್ತು ವಿಭಾಗದಲ್ಲಿ ಸೇವೆ ಹಿಂದೆಗೆತ ಸೇರಿದಂತೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ನಿವಾಸಿ ವೈದ್ಯರು ಬೆದರಿಕೆ ಒಡ್ಡಿರುವುದರಿಂದ ದಿಲ್ಲಿಯ ಆರ್‌ಎಂಎಲ್ ಹಾಗೂ ಸಫ್ದರ್‌ಜಂಗ್‌ನ ಎಐಐಎಂಎಸ್ ಸಹಿತ ಸರಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ತೊಂದರೆಗೆ ಒಳಗಾಗಲಿದೆ.

ಜುಲೈ 29ರಂದು ಲೋಕಸಭೆಯ ಅನುಮೋದನೆ ದೊರೆತ ಬಳಿಕ ಭಾರತೀಯ ವೈದ್ಯಕೀಯ ಮಂಡಳಿಗೆ ಬದಲಿಗೆ ಇನ್ನೊಂದು ಸಂಸ್ಥೆ ಸ್ಥಾಪಿಸಲು ಕೋರಿದ ಮಸೂದೆ ಗುರುವಾರ ರಾಜ್ಯಸಭೆಯಲ್ಲಿ ಮಂಡನೆ ಹಿನ್ನೆಲೆಯಲ್ಲಿ ನಿವಾಸಿ ವೈದ್ಯರು ಈ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ನಿವಾಸಿ ವೈದ್ಯರು ಒಪಿಡಿ, ತುರ್ತು ವಿಭಾಗಗಳು ಹಾಗೂ ತುರ್ತು ನಿಗಾ ಘಟಕಗಳಲ್ಲಿ ಕಾರ್ಯ ನಿರ್ವಹಿಸದಿರಲು ನಿರ್ಧರಿಸಿದ್ದಾರೆ. ರಾಜ್ಯ ಸಭೆಯಲ್ಲಿ ಮಸೂದೆ ಮಂಡನೆ ಹಾಗೂ ಮಂಜೂರು ವಿರುದ್ಧ ಪ್ರತಿಭಟನೆ ಅನಿರ್ದಿಷ್ಟಾವಧಿ ಮುಂದುವರಿಯಲಿದೆ. ಈ ಮಸೂದೆ ಬಡವರ ವಿರೋಧಿ, ವಿದ್ಯಾರ್ಥಿಗಳ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ನಿವಾಸಿ ವೈದ್ಯರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಸುಮೇಧ್ ಸಂದನ್‌ಶಿವ್ ಹೇಳಿದ್ದಾರೆ. ಪ್ರಸ್ತಾಪಿತ ಮುಷ್ಕರದ ಬಗ್ಗೆ ಎಐಐಎಂಎಸ್, ಆರ್‌ಎಂಎಲ್ ಹಾಗೂ ಇತರ ಕೆಲವು ಆಸ್ಪತ್ರೆಗಳ ನಿವಾಸಿ ವೈದ್ಯರ ಸಂಘಟನೆ ಆಡಳಿತ ಮಂಡಳಿಗೆ ಪ್ರತ್ಯೇಕ ನೋಟಿಸುಗಳನ್ನು ನೀಡಿದೆ. ಇದಲ್ಲದೆ, ಮಸೂದೆಯ ಪ್ರಸ್ತುತ ಆವೃತ್ತಿ ವಿರುದ್ಧ ವಿವಿಧ ಆಸ್ಪತ್ರೆಗಳ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮುಂದುವರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News