ಆರ್‌ಟಿಐ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ ನೀಡದಂತೆ ಆಗ್ರಹಿಸಿ ರ್ಯಾಲಿ

Update: 2019-08-01 17:34 GMT

ಹೊಸದಿಲ್ಲಿ, ಆ. 1: ಸಂಸತ್ತಿನಲ್ಲಿ ಕಳೆದ ವಾರ ಮಂಜೂರಾದ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಗೆ ಒಪ್ಪಿಗೆ ನೀಡದಂತೆ ಆಗ್ರಹಿಸಿ ಇಲ್ಲಿನ ರಾಷ್ಟ್ರಪತಿ ಭವನಕ್ಕೆ ರ್ಯಾಲಿ ನಡೆಸಿದ ಹೋರಾಟಗಾರರ ಗುಂಪೊಂದನ್ನು ದಿಲ್ಲಿ ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡರು.

  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ತಮ್ಮ ಮನವಿಗಳನ್ನು ಸಲ್ಲಿಸಲು ರಾಷ್ಟ್ರಪತಿ ಭವನದ 38ನೇ ಸಂಖ್ಯೆಯ ಗೇಟಿನ ಹೊರಭಾಗದಲ್ಲಿ ‘ನ್ಯಾಷನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಸ್ ಟು ಇನ್‌ಫಾರ್ಮೇಶನ್’ನ ಕಾರ್ಯಕರ್ತರು ಸೇರಿದ ಸಂದರ್ಭ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.

ವಶಕ್ಕೆ ತೆಗೆದುಕೊಂಡ ಕಾರ್ಯಕರ್ತರನ್ನು ಬಸ್‌ನ ಮೂಲಕ ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

‘‘ಮಾಹಿತಿ ಹಕ್ಕು ತಿದ್ದುಪಡಿಗೆ ಒಪ್ಪಿಗೆ ನೀಡದಂತೆ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲು ಬಯಸಿದ ಪ್ರತಿಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ದೇಶದಲ್ಲಿ ಶಾಂತಿಯುತವಾಗಿ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸುವ ಹಕ್ಕು ನಮಗಿಲ್ಲವೇ? ಇದು ಪ್ರಜಾಪ್ರಭುತ್ವವೇ ?’’ ಎಂದು ಸತಾರ್ಕ್ ನಾಗರಿಕ ಸಂಘದ ಅಂಜಲಿ ಭಾರದ್ವಾಜ್ ಪ್ರಶ್ನಿಸಿದ್ದಾರೆ.

ಮಾಹಿತಿ ಆಯೋಗದ ಸ್ವಾತಂತ್ರವನ್ನು ಕೀಳಂದಾಜು ಮಾಡಿದ ಕೇಂದ್ರದ ಎನ್‌ಡಿಎ ಸರಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News