ವಿಚಿತ್ರ ದೇಶಭಕ್ತರಲ್ಲಿ ನಾನೊಬ್ಬನಲ್ಲ

Update: 2019-08-01 18:30 GMT

ದುಂಡು ಮೇಜಿನ ಪರಿಷತ್ತಿನಲ್ಲಿ 19ನೇ ಜನವರಿಯಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭಾಷಣವಾಯಿತು. ತಮ್ಮ ಭಾಷಣದಲ್ಲವರು,

‘‘ಮಾನ್ಯ ಮುಖ್ಯಮಂತ್ರಿಗಳೇ, ಒಂದು ದೇಶದ ರಾಜಕೀಯ ಜೀವನವನ್ನು ಸರಿದಾರಿಗೆ ತರಲು ಪ್ರಯತ್ನಿಸುವಾಗ ಎರಡು ಮಹತ್ವದ ಪ್ರಶ್ನೆಗಳು ಕಾಡುತ್ತದೆ. ಹಾಗಾಗಿ ಈ ದುಂಡು ಮೇಜಿನ ಪರಿಷತ್ತಿನಲ್ಲಿ ಈ ಎರಡು ಪ್ರಶ್ನೆಗಳ ಬಗ್ಗೆಯೇ ಹೆಚ್ಚು ಗಮನ ಹರಿಸಬೇಕು. ಮೊದಲನೆಯದು ಜವಾಬ್ದಾರಿಯುತ ಸರಕಾರದ ಬಗ್ಗೆ ಹಾಗೂ ಎರಡನೆಯ ಪ್ರಾತಿನಿಧಿಕ ಸರಕಾರದ ಬಗ್ಗೆ. ನಮ್ಮ ಪ್ರಾಂತದ ಜವಾಬ್ದಾರಿಯುತ ಸರಕಾರದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ.

ನಮ್ಮ ಮತಭೇದಗಳನ್ನು ಲಘುವಾಗಿ ತೆಗೆದುಕೊಂಡು ಮಂಡಳವು ನನ್ನ ಬಗ್ಗೆ ಸಾದರಪಡಿಸಿರುವ ಅಹವಾಲುಗಳನ್ನು ನಾನು ಒಪ್ಪಿಕೊಳ್ಳುತ್ತೇನೆ ಹಾಗೂ ನಾನದರ ಪರವಾಗಿದ್ದೇನೆ. ಆದರೆ ಮಧ್ಯವರ್ತಿ ಸರಕಾರದ ಬಗ್ಗೆ ನನಗೆ ಅನುಮಾನವಿರುವುದರಿಂದ ನನ್ನ ದೃಷ್ಟಿಕೋನ ಬೇರೆಯದಾಗಿದೆ. ಸಂಘರಾಜ್ಯದ ಉಪಸಮಿತಿಯು ಇಂದಿನ ಆಡಳಿತ ಶಾಸನ ಪದ್ಧತಿಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿಲ್ಲ ಎಂದರೆ ನಾನು ಪ್ರಾಮಾಣಿಕನಾಗಲಾರೆ. ಆದರೆ ನನ್ನ ಪ್ರಾಮಾಣಿಕ ಅನಿಸಿಕೆಗಳನ್ನು ನಮ್ಮಿಂದ ಮುಚ್ಚಿಡುವುದು ಅಪ್ರಾಮಾಣಿಕತನವಾಗಬಹುದು. ಸಮಿತಿ ಸೂಚಿಸಿರುವ ಬದಲಾವಣೆಗಳು ವಾಸ್ತವಿಕವಾಗಿಲ್ಲ. ಅದಕ್ಕೆ ಯಾವುದೇ ಮೂಲಾಧಾರಗಳಿಲ್ಲ ಹಾಗೂ ಅವರಿಗಿರುವ ಜವಾಬ್ದಾರಿಯೂ ನಂಬಲರ್ಹವಾಗಿಲ್ಲ.

 ‘ನಾವು ಸ್ವಾತಂತ್ರದ ಬೀಜ ಬಿತ್ತುತ್ತಿದ್ದೇವೆ. ಆದರೆ ಮುಂದಿನ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಬೇಕು’ ಎಂದು ಲಾರ್ಡ್ ಚಾನ್ಸೆಲರ್ ಅವರು ನಮಗೆ ಹೇಳಿದ್ದಾರೆ. ಮಾನ್ಯರೆ, ಇಂದಿನ ಅತ್ಯಂತ ಮಹತ್ವವಾದ ಪರಿಷತ್ತಿನಲ್ಲಿ ಚಾನ್ಸೆಲರ್ ಅವರು ಮಾಡಿರುವ ಮಹ ತ್ಕಾರ್ಯಕ್ಕೆ ನಾವವರಿಗೆ ಆಭಾರಿಗಳಾಗಿದ್ದೇವೆ. ಅವರ ಈ ಕಾರ್ಯಕ್ಕೆ ನಾನವರಿಗೆ ಋಣಿಯಾಗಿದ್ದರೂ ಅವರು ನೆಟ್ಟ ಬೀಜ ಹೆಮ್ಮರವಾಗಿ ಬೆಳೆಯಲಾರದು ಅನಿಸುತ್ತಿದೆ. ಅವರು ಆರಿಸಿರುವ ಬೀಜದಲ್ಲಿ ಸತ್ವವೇ ಇಲ್ಲ ಹಾಗೂ ಅವರು ಬೀಜ ನೆಡುತ್ತಿರುವ ಭೂಮಿ ಆ ಬೀಜವನ್ನು ಮರವಾಗಿಸುವ ಅನುಕೂಲತೆಯಲಿಲ್ಲ. ಭಾವೀ ಭಾರತದ ಸಂಘರಾಜ್ಯದ ಸಂವಿಧಾನದ ಬಗ್ಗೆ ನನ್ನ ವಿಚಾರಗಳನ್ನು ನಾನು ಲಾರ್ಡ್ ಚಾನ್ಸೆಲರ್ ಅವರೆದುರು ಮಂಡಿಸಿದ್ದೇನೆ. ಅವರು ಅಧ್ಯಕ್ಷರಾಗಿರುವ ಸಮಿತಿಯು ಅದರ ಬಗ್ಗೆ ಯೋಚಿಸಿದೆಯೋ ಇಲ್ಲವೋ ಅನ್ನುವುದು ನನಗೆ ಗೊತ್ತಿಲ್ಲ. ಅವರು ಅಧ್ಯಕ್ಷರಾಗಿರುವ ಸಮಿತಿಯ ಅಹವಾಲಿನಲ್ಲಿ ಹಾಗೂ ನನ್ನ ವಿಚಾರಗಳಲ್ಲಿ ಯಾವುದೇ ಪರಾಮರ್ಶೆ ನನಗೆ ಕಂಡಿಲ್ಲ. ನನ್ನ ವಿಚಾರಗಳಲ್ಲೂ ಯಾವುದೇ ಬದಲಾವಣೆಗಳಾಗಿಲ್ಲ ಹಾಗೂ ನನ್ನ ವಿಚಾರಗಳಿಂದ ಬಹುದೂರವಿರುವ ಸಂವಿಧಾನಕ್ಕೆ ನಾನು ಅನುಮತಿ ಕೊಡುವುದು ಸಾಧ್ಯವಿಲ್ಲ. ನಿಜವಾಗಿಯೂ! ಈಗಿನ ವ್ಯವಸ್ಥೆ ಹಾಗೂ ಸಮಿತಿ ಸಾದರಪಡಿಸಿರುವ ಮಿಶ್ರತಳಿಯ ಪದ್ಧತಿ ಇವುಗಳಲ್ಲಿ ಒಂದನ್ನು ಆರಿಸುವ ಪರಿಸ್ಥಿತಿ ನನಗೆ ಬಂದರೆ ನಾನು ಸದ್ಯದ ಈಗಿರುವ ವ್ಯವಸ್ಥೆಯನ್ನೇ ಆರಿಸುತ್ತೇನೆ. ಆದರೆ ಸಮಿತಿಯ ಅಹವಾಲಿನಲ್ಲಿರುವ ಮಧ್ಯವರ್ತಿ ಸರಕಾರದ ಸಂವಿಧಾನ ಸರ್ ಟಿ.ಬಿ. ಸಪ್ರು ಅವರಿಗೆ ಒಪ್ಪಿಗೆಯಿದ್ದರೆ ನಾನು ವಿರೋಧಿಸುವ ಯಾವ ಕಾರಣವೂ ಇಲ್ಲ. ಅವರೂ ಪರಿಷತ್ತಿನ ಗೆಳೆಯರೂ ತತ್ವಜ್ಞರೂ ಹಾಗೂ ಮಾರ್ಗದರ್ಶಶಕರಾಗಿದ್ದಾರೆ. ಹಾಗೆಯೇ ಭಾರತದ ಯುವಕರ ಪ್ರತಿನಿಧಿಗಳಾದ ಜಯಕರ್ ಹಾಗೂ ಅಬ್ರಾಹ್ಮಣರ ಬಗ್ಗೆ ಮಾತನಾಡುವ ಎ.ಪಿ. ಪಾತ್ರೆಯವರಿಗೆ ಈ ಸಂವಿಧಾನದ ಬಗ್ಗೆ ಸಮಾಧಾನವಿದ್ದರೆ ನಾನೂ ಅದಕ್ಕೂ ವಿರೋಧಿಸುವವನಲ್ಲ.

ಈ ಸಂವಿಧಾನಕ್ಕೆ ನಾನೂ ವಿರೋಧಿಸು ವವನೂ ಅಲ್ಲ ಹಾಗೂ ಒಪ್ಪುವಂತಹವನೂ ಅಲ್ಲ ಅನ್ನುವಂತಹ ಪರಿಸ್ಥಿತಿ ನನ್ನದಾಗಿದೆ. ಹಾಗಾಗಿ ಈ ಸಂವಿಧಾನವನ್ನು ನಡೆಸಲಿಚ್ಛಿಸು ವವರಿಗೇ ಈ ಪ್ರಶ್ನೆಯನ್ನು ಬಿಡುತ್ತೇನೆ. ನಾನು ಪ್ರತಿನಿಧಿಯಾಗಿರುವ ಶಾಸನಪದ್ಧತಿಯು ನನಗ್ಯಾವ ಆಜ್ಞೆಯನ್ನೂ ಕೊಟ್ಟಿಲ್ಲವಾದ್ದರಿಂದ ನಾನು ಇಂತಹ ಧೋರಣೆಯನ್ನು ಪಾಲಿಸುವುದೇ ಉತ್ತಮ. ಉತ್ತರದಾಯಿ ಶಾಸನ ಪದ್ಧತಿಯನ್ನು ನಾನು ವಿರೋಧಿಸುವಂತಿಲ್ಲವಾದರೂ ಉತ್ತರದಾಯಿ ಸರಕಾರ ನಿಜವಾದ ಅರ್ಥದಲ್ಲಿ ಪ್ರಾತಿನಿಧಿಕ ಸರಕಾರವಾಗಿರದೆ ನಾನದಕ್ಕೆ ಮಾನ್ಯತೆ ಕೊಡುವಂತಿಲ್ಲ ಅನ್ನುವ ಆಜ್ಞೆ ನನಗಿದೆ. ಪರಿಷತ್ತು ಪ್ರಾತಿನಿಧಿಕ ಸರಕಾರದ ಪ್ರಶ್ನೆಗಳನ್ನು ಯಾವ ರೀತಿ ನಿರ್ವಹಿಸಿದೆ ಹಾಗೂ ಅದಕ್ಕೆ ಎಷ್ಟು ಯಶಸ್ಸು ಸಿಕ್ಕಿದೆ ಅನ್ನುವುದನ್ನು ಗಮನಿಸಿದಾಗ ನನಗೆ ನಿರಾಸೆಯಾಗುತ್ತದೆ. ಮತದಾನದ ಹಕ್ಕು ಹಾಗೂ ಬೇರೆಬೇರೆ ಜಾತಿಗಳಿಗೆ ಕಾಯ್ದೆ ಮಂಡಲದಲ್ಲಿ ಸಿಕ್ಕಿರುವ ಪ್ರತಿನಿಧಿತ್ವ ಇವುಗಳು ನಿಜವಾದ ಅರ್ಥದಲ್ಲಿ ಪ್ರಾತಿನಿಧಿಕ ಶಾಸನದ ಆಧಾರಸ್ತಂಭಗಳು. ನೆಹರೂ ಸಮಿತಿಯು ಪ್ರೌಢ ಮತದಾನ ಸ್ವೀಕರಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಹಾಗೂ ಈ ಸಮಿತಿ ತಂದಿರುವ ಸಂವಿಧಾನಕ್ಕೆ ಭಾರತದ ಎಲ್ಲ ರಾಜಕೀಯ ಪಕ್ಷಗಳ ಬೆಂಬಲವಿದೆ. ಮತದಾನದ ಹಕ್ಕುಗಳನ್ನು ನಾವೀಗಲೇ ಪಡೆದಾಗಿದೆ.

ಆದರೆ ಮತಾಧಿಕಾರ ಸಮಿತಿಯ ಬಗ್ಗೆ ನನಗೆ ಭ್ರಮನಿರಸನವಾಗಿದೆ ಅನ್ನುವುದು ಈ ಪರಿಷತ್ತಿಗೆ ಬಂದಾಗಲೇ ಗೊತ್ತಾಯಿತು. ನೆಹರೂರವರ ಅಹವಾಲಿಗೆ ಸಹಿ ಮಾಡಿರುವವರೆಲ್ಲರೂ ಎಷ್ಟರ ಮಟ್ಟಿಗೆ ಒಂದೇ ರೀತಿ ಯೋಚಿಸಿದ್ದಾರೆಂದರೆ ಈ ಅಹವಾಲಿಗೆ ಭಾರತದ ಉದಾರ ಮತವಾದಿಗಳ ಬೆಂಬಲ ಸಿಗುವುದು ಬಹಳ ಕಷ್ಟ. ಇದರಿಂದ ಪ್ರಾಂತಿಕ ಕಾಯ್ದೆ ಮಂಡಳದಲ್ಲಿ ಕೇವಲ ಶೇ. 25 ಜನರಿಗೆ ಮಾತ್ರ ಮತಾಧಿಕಾರ ಸಿಗಲಿದೆ. ಕೇಂದ್ರದ ಕಾಯ್ದೆ ಮಂಡಳಗಳಲ್ಲಿ ಎಷ್ಟು ಜನರಿಗೆ ಮತಾಧಿಕಾರ ಸಿಗಲಿದೆ ಅನ್ನುವುದಿನ್ನೂ ಗೊತ್ತಿಲ್ಲ. ಪ್ರಾಂತದ ಸರಕಾರ ಎಷ್ಟರ ಮಟ್ಟಿಗೆ ಪ್ರಾತಿನಿಧಿಕವಾಗುತ್ತಿದೆಯೆಂದರೆ ಮಧ್ಯವರ್ತಿ ಕಾಯ್ದೆ ಮಂಡಳವು ಅದಕ್ಕೂ ಹೆಚ್ಚು ಪ್ರಾತಿನಿಧಿಕ ಸ್ವರೂಪದ್ಧಾಗುವುದು ಕಷ್ಟ. ಇಂತಹ ಮಿತಿಯಿರುವ ಮತಾಧಿಕಾರದಿಂದ ಭಾರತದ ಭಾವೀ ಸರಕಾರ ಎಲ್ಲ ಜನತೆಗೆ ಸಂಬಂಧಿಸಿರದೆ ಕೇವಲ ವಿಶಿಷ್ಟ ಜಾತಿಗೆ ಸಂಬಂಧಿಸಿರುತ್ತದೆ.

 ಬಹುಸಂಖ್ಯೆ ಹಾಗೂ ಅಲ್ಪಸಂಖ್ಯೆಯಲ್ಲಿರುವ ವಿವಿಧ ಜಾತಿಗಳಲ್ಲಿ ಕಾಯ್ದೆ ಮಂಡಳದ ಜಾಗಗಳ ಹಂಚುವಿಕೆಯಲ್ಲಿ ಅಡಚಣೆಯುಂಟಾಗಿದೆ ಅನ್ನುವುದು ನಿಮ್ಮೆಲ್ಲರಿಗೂ ಗೊತ್ತು. ಹಿಂದೊಮ್ಮೆ ಗೊತ್ತಿದ್ದೂ ತೆಗೆದುಕೊಂಡಿರುವ ಅಪಾಯಕರ ನಿರ್ಣಯದಿಂದಲೇ ಈ ಅಡಚಣೆಯುಂಟಾಗಿದೆ ಎಂದು ನನಗನಿಸುತ್ತದೆ. ಭಾರತದ ಪೂರ್ವಾಧಿಕಾರಿಗಳು ಎಲ್ಲರಿಗೂ ಸಮವಾಗಿ ನ್ಯಾಯ ಕೊಡುತ್ತ ಎಲ್ಲರನ್ನೂ ಸಮವಾಗಿ ನಡೆಸಿಕೊಂಡಿದ್ದರೆ ಈ ಸಮಸ್ಯೆ ಯನ್ನು ಬಿಡಿಸುವುದು ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ. ತಮಗೆ ಹೆಚ್ಚು ಹತ್ತಿರವಿರುವ ಹಾಗೂ ಲಾಭ ಕೊಡುವ ಜನರಿಗೆ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಅಧಿಕಾರಗಳನ್ನು ಕೊಟ್ಟು ದಲಿತರಿಗೆ ಮಾತ್ರ ನ್ಯಾಯವಾಗಿ ಸಿಗಬೇಕಿದ್ದ ಹಕ್ಕುಗಳನ್ನು ಅಲ್ಲಗಳೆದರು. ಈ ಎಲ್ಲದರಲ್ಲಿ ದಲಿತರು ಸಾಕಷ್ಟು ನಷ್ಟ ಅನುಭವಿಸಬೇಕಾಯಿತು. ಒಮ್ಮೆ ಆರಂಭವಾದ ತಪ್ಪು ಪದ್ಧತಿಗಳನ್ನು ಹಾಗೇ ಮುಂದುವರಿಸಿಕೊಂಡು ಹೋಗದೆ ಈ ಪರಿಷತ್ತು ಹಳೆಯ ಪದ್ಧತಿಗಳನ್ನು ವಿಶ್ಲೇಷಿಸಿ ದಲಿತರಿಗೆ ಕಾಯ್ದೆ ಮಂಡಳದಲ್ಲಿ ಸಿಗಬೇಕಾದ ಜಾಗಗಳನ್ನು ಕೊಟ್ಟಾರು ಅಂದುಕೊಂಡಿದ್ದೆ, ಆದರೆ ಹಾಗಾಗಲಿಲ್ಲ. ಇತರ ಅಲ್ಪಸಂಖ್ಯಾತರ ಬೇಡಿಕೆಗಳನ್ನು ಮೊದಲು ಸ್ವೀಕರಿಸಿ ಅದರ ನಿರ್ದಿಷ್ಟ ಸ್ವರೂಪವನ್ನು ನಿರ್ಧರಿಸಿದ್ದಾರೆ.

ಕೇವಲ ಹೊಸ ಸರಕಾರದ ಹೆಚ್ಚುವ ಕೆಲಸ ಹಾಗೂ ವ್ಯವಸ್ಥೆಯನುಸಾರವಾಗಿ ಮಾಡಬೇಕಾಗಿರುವ ಕೆಲಸಗಳು ಮಾತ್ರ ಉಳಿದುಕೊಂಡಿವೆ. ಕೆಲವೇ ಕೆಲವು ಹೊಸ ಬದಲಾವಣೆಗಳನ್ನು ಬಿಟ್ಟರೆ ಮೊದಲಿನ ಪದ್ಧತಿಯಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡುವ ಧೈರ್ಯ ತೋರಿಸಿಲ್ಲ. ನಿಜ ಹೇಳುವುದಾದರೆ ದಲಿತರ ಸಮಸ್ಯೆಯೇ ಬೇರೆ. ಈಗೆಲ್ಲೋ ಅವರ ಬೇಡಿಕೆಗಳು ಕೇಳಿಬರುತ್ತಿವೆ. ಇಂದಿನವರೆಗೆ ಅವರ ಯಾವುದೇ ಬೇಡಿಕೆಗಳಿಗೆ ನ್ಯಾಯ ಸಿಕ್ಕಿಲ್ಲ. ಅವರ ಎಷ್ಟು ಬೇಡಿಕೆಗಳಿಗೆ ಮನ್ನಣೆ ಸಿಗಬಹುದು ಅನ್ನುವುದು ಕೂಡಾ ಗೊತ್ತಿಲ್ಲ. ಸ್ವಯಂ ರಕ್ಷಣೆಗಾಗಿ ಅಲ್ಲದಿದ್ದರೂ ಸರಕಾರ ತಮ್ಮ ಕೈಯಲ್ಲಿರಲೆಂದು ವ್ಯೆಹ ರಚಿಸುತ್ತಿರುವ ಹಾಗೂ ಅದಕ್ಕಾಗಿ ಪೈಪೋಟಿ ನಡೆಸುತ್ತಿರುವ ಜನರನ್ನು ಸಂತೋಷಪಡಿಸಲು ಬ್ರಿಟಿಷರು ದಲಿತರ ಅಸಹಯೋಗವನ್ನು ಮುಂದಿಟ್ಟು ಅವರ ಪ್ರತಿನಿಧಿತ್ವವನ್ನು ಬಲಿಕೊಟ್ಟಾರು ಎಂದು ನನಗನಿಸುತ್ತದೆ. ಹೀಗೆ ಮಾಡುವುದು ಅಸಾಧ್ಯವೇನಲ್ಲ.

ಈ ದೃಷ್ಟಿಯಿಂದ ನನ್ನ ವಿಚಾರಗಳನ್ನು ಸ್ಪಷ್ಟವಾಗಿ ನಿಮ್ಮೆದುರಿಗಿಡುವುದು ನನ್ನ ಜವಾಬ್ದಾರಿ. ಮುಂಬರುವ ಸರಕಾರದ ಸಂವಿಧಾನದಲ್ಲಿ ದಲಿತರ ಹಕ್ಕುಗಳನ್ನು ಇನ್ನೂ ನಿರ್ಧರಿಸಿಲ್ಲ. ಅನ್ನುವುದರರ್ಥ ಪ್ರಾಂತೀಯ ಸರಕಾರ ಹಾಗೂ ಮಧ್ಯವರ್ತಿ ಸರಕಾರ ದಲಿತರಿಗಾಗಿ ಜವಾಬ್ದಾರಿಯುತ ಸರಕಾರದ ಸಂವಿಧಾನ ಇನ್ನೂ ನಿರ್ಧರಿಸುತ್ತಿರಬೇಕು, ಬ್ರಿಟಿಷ್ ಸರಕಾರ ಅದನ್ನು ಎಲ್ಲರೆದುರು ಇಡುವ ಮುನ್ನ ಮುಂಬರುವ ಸರಕಾರದ ಜವಾಬ್ದಾರಿ ವಹಿಸಿಕೊಳ್ಳುವುದರಿಂದ ದಲಿತರ ಹಕ್ಕುಗಳು ಸುರಕ್ಷಿತವಾಗಿರುವಂತೆ ಕೆಲವು ಸ್ಪಷ್ಟ ಕರಾರುಗಳನ್ನು ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಪರಿಸ್ಥಿತಿಯ ಗಾಂಭೀರ್ಯವನ್ನು ಗಮನದಲ್ಲಿಟ್ಟು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆಯನ್ನು ಬಿಡಿಸುವತನಕ ಹಾಗೂ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳದೆ ಯಾವುದೇ ವ್ಯವಸ್ಥೆಯನ್ನು ನಾನು ಒಪ್ಪುದಿಲ್ಲ ಅನ್ನುವುದನ್ನು ನಾನು ಹೆಚ್ಚು ಒತ್ತುಕೊಟ್ಟು ಹೇಳುತ್ತಿದ್ದೇನೆ. ಇದನ್ನು ನೀವು ಒಪ್ಪದಿದ್ದರೆ ನಾನು ಹಾಗೂ ನನ್ನ ಸಹಪಾಠಿಗಳು ಪರಿಷತ್ತಿನ ಮುಂದಿನ ಕಾರ್ಯಕಲಾಪಗಳಲ್ಲಿ ಭಾಗವಹಿಸುವುದಿಲ್ಲ ಹಾಗೂ ಪರಿಷತ್ತು ನಡೆಯದಂತೆ ನೋಡಿಕೊಳ್ಳುತ್ತೇನೆ. ಅಧ್ಯಕ್ಷರೇ, ಇದೆಲ್ಲವನ್ನೂ ಹೇಳುತ್ತಿರುವಾಗ ನೀವು ಮೊದಲು ಕೊಟ್ಟಿರುವ ಆಶ್ವಾಸನೆಗಿಂತ ಹೆಚ್ಚಿನದೇನನ್ನೋ ಕೇಳುತ್ತಿದ್ದೇನೆ ಅಂದುಕೊಳ್ಳಬೇಡಿ. ಬ್ರಿಟಿಷ್ ಲೋಕಸಭೆ ಹಾಗೂ ಅದರ ಪರವಾಗಿ ಮಾತನಾಡುವ ಜನ ನಾವು ಯಾವತ್ತೂ ದಲಿತರ ಪರವಾಗಿದ್ದೇವೆ ಅನ್ನುತ್ತಿರುತ್ತಾರೆ.

ಮಾನವ ಸಂಬಂಧಗಳನ್ನು ಕಾಪಾಡಲು ನಾವು ಯಾವತ್ತೂ ಕಟಿ ಬದ್ಧರಾಗಿರುತ್ತೇವೆ ಅನ್ನುವಂತಹ ಸಂಸ್ಕೃತಿ ಶಿಷ್ಟಾಚಾರದ ಸುಳ್ಳುಗಳಲ್ಲಿ ಇದೂ ಒಂದು ಸುಳ್ಳಲ್ಲ ಅನ್ನುವ ನಂಬಿಕೆ ನನಗಿದೆ. ನಂಬಿಕೆಯನ್ನು ಕಳೆದುಕೊಳ್ಳದಿರುವುದು ಯಾವುದೇ ಸರಕಾರದ ಆದ್ಯ ಕರ್ತವ್ಯವಾಗಿದೆ ಎಂದು ನನಗನಿಸುತ್ತದೆ. ಮಾನ್ಯ ಪ್ರಧಾನ ಮಂತ್ರಿಗಳೆ, ತಮ್ಮ ಶ್ರೇಷ್ಠತೆ ಹಾಗೂ ಉನ್ನತಿಗಾಗಿ ನಮ್ಮ ನಂಬಿಕೆಯನ್ನು ಅವಲಂಬಿಸಿರುವ ಹಾಗೂ ಕನಸಿನಲ್ಲಿಯೂ ನಮ್ಮ ಉನ್ನತಿಯ ಬಗ್ಗೆ ಯೋಚಿಸಿದಂತಹ ಜನರ ದಯೆ ಹಾಗೂ ಬ್ರಿಟಿಷ್ ಸರಕಾರ ನಮ್ಮನ್ನು ಒಪ್ಪಿಸುವುದಾದರೆ ಬ್ರಿಟಿಷ್ ಸರಕಾರ ನಮ್ಮ ನಂಬಿಕೆಗೆ ದ್ರೋಹ ಬಗೆದಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ. ನಾನು ಈ ರೀತಿ ಮಾತನಾಡಿದ್ದಕ್ಕೆ ರಾಷ್ಟ್ರವಾದಿ ಹಾಗೂ ದೇಶಭಕ್ತ ಜನ ನನ್ನನ್ನು ಜಾತೀಯವಾದಿ ಅನ್ನಬಹುದು. ಅಂದರೆ ಅನ್ನಲಿ ನಾನದಕ್ಕೆ ಹೆದರುವವನಲ್ಲ. ಭಾರತ ಒಂದು ವಿಚಿತ್ರವಾದ ದೇಶ, ಇಲ್ಲಿಯ ರಾಷ್ಟ್ರಭಕ್ತರು ಹಾಗೂ ದೇಶಭಕ್ತರು ವಿಚಿತ್ರವಾಗಿದ್ದಾರೆ. ತಮ್ಮ ದೇಶಬಾಂಧವರಿಗೆ ಪ್ರಾಣಿಗಳಿಗೂ ಕಡೆಯಾಗಿ ನಡೆಸಿಕೊಳ್ಳುತ್ತಿದ್ದರೂ ಇವರ ಬಾಯಿ ಮುಚ್ಚಿ ಸುಮ್ಮನಿದ್ದುಬಿಡುತ್ತಾರೆಯೇ ಹೊರತು ವಿರೋಧಿಸುವುದಿಲ್ಲ. ದಲಿತ ಗಂಡಸರಿಗೆ ಹಾಗೂ ಹೆಂಗಸರಿಗೆ ಯಾವುದೇ ಕಾರಣವಿಲ್ಲದೆ ಕೆಲವು ಹಕ್ಕುಗಳನ್ನು ನಿರಾಕರಿಸಿರುವುದು ಇವರಿಗೆ ಗೊತ್ತಿದ್ದರೂ ಸಹಾಯ ಮಾಡುವ ದೃಷ್ಟಿಯಿಂದ ಇವರ ಸಂವೇದನೆ ಎಚೆತ್ತುಕೊಳ್ಳುವುದಿಲ್ಲ. ಮಾನವನಿಗೆ ಹಾಗೂ ಸಮಾಜಕ್ಕೆ ಘಾತಕವಾಗಿರುವಂತಹ ರೂಢಿ ಪರಂಪರೆಗಳ ಬಗ್ಗೆ ಅವರಿಗೆ ಗೊತ್ತಿರುತ್ತದೆ. ಆದರೆ ರೋಸಿಹೋಗುವಂತಹ ಈ ವಿಷಯಗಳ ಬಗ್ಗೆ ಅವನಿಗೆಂದೂ ತಿರಸ್ಕಾರ ಹುಟ್ಟುವುದಿಲ್ಲ. ಅವರಿಗೆ ಹಾಗೂ ಜಾತಿ ಬಾಂಧವರಿಗೆ ಅಧಿಕಾರ ಹಾಗೂ ಹೆಚ್ಚಿನ ಅಧಿಕಾರ ಸಿಗಬೇಕು ಅನ್ನುವುದು ಅವರ ಘೋಷಣೆಯಾಗಿರುತ್ತದೆ. ನಾನು ಇಂತಹ ದೇಶಭಕ್ತರಲ್ಲಿ ಒಬ್ಬನಲ್ಲ ಅನ್ನುವ ಸಂತೋಷ ನನಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಯಾವುದೇ ರೀತಿಯಲ್ಲಿರುವ ಏಕಾಧಿಕಾರದ ಸರಕಾರವನ್ನು ಧ್ವಂಸ ಮಾಡುವ ಜಾತಿಗೆ ನಾನು ಸೇರಿದ್ದೇನೆ. ಒಂದು ವ್ಯಕ್ತಿ ಒಂದು ವೌಲ್ಯ ಅನ್ನುವುದು ನಮ್ಮ ಉದ್ದೇಶ. ಈ ಉದ್ದೇಶವನ್ನು ಜೀವನದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಕೃತಿಪೂರ್ವಕವಾಗಿ ಈಡೇರಿಸಬೇಕಿದೆ. ಈ ಅತ್ಯುಚ್ಚ ವೌಲ್ಯಗಳಿಗೆ ದಲಿತರು ಬಾಧ್ಯರಾಗಿದ್ದಾರೆ ಹಾಗಾಗಿ ಪ್ರಾತಿನಿಧಿಕ ಸರಕಾರವು ನಮ್ಮ ಉದ್ದೇಶ ಈಡೇರಿಸುವ ಮಾಧ್ಯಮವಾಗಿದೆ. ಈ ವೌಲ್ಯಗಳ ಬಗ್ಗೆ ನಮಗಿರುವ ಗೌರವವನ್ನು ಗಮನಿಸಿ ಇವುಗಳನ್ನು ಸಾಕಾರಗೊಳಿಸಲು ಒಂದು ಪ್ರಣಾಳಿಕೆಯನ್ನು ಘೋಷಿಸಬೇಕು ಎಂದು ಒತ್ತಾಯಿಸುತ್ತೇವೆ.

ದಲಿತರ ಬಗ್ಗೆ ನಮಗೆ ಸಂಪೂರ್ಣ ಸಹಾನುಭೂತಿಯಿದೆ ಎಂದು ನೀವು ಆಶ್ವಾಸನೆ ಕೊಡಬಹುದು ಆದರೆ ದುಃಖಿತರಿಗೆ ಇದಕ್ಕಿಂತ ಹೆಚ್ಚಿನದೇನಾದರೂ ನಿಶ್ವಿತವಾದ ಹಾಗೂ ಹೆಚ್ಚಿನ ವ್ಯವಸ್ಥೆಯೇನಾದರೂ ಬೇಕಿದೆ. ನಾನು ನಿಮ್ಮನ್ನು ಬೆದರಿಸುತ್ತಿದ್ದೇನೆ ಅನ್ನುವ ಸುಳ್ಳು ಆರೋಪ ನೀವು ನನ್ನ ಮೇಲೆ ಹೊರಿಸಬಹುದು. ಆದರೆ ಸುರಕ್ಷಿತತೆಯ ಭರವಸೆಯ ಬಗ್ಗೆ ನಿಶ್ಚಿಂತರಾಗಿ ನಮ್ಮ ಸರ್ವನಾಶವನ್ನು ನಾವೇ ಮಾಡಿಕೊಳ್ಳುವುದಕ್ಕಿಂತ ಬೇರೆಯವರು ಹೆದರಿ ನಮ್ಮನ್ನು ದ್ವೇಷಿಸುವುದು ಹೆಚ್ಚು ಒಳ್ಳೆಯದು ಅನ್ನುವುದೇ ನನ್ನಲ್ಲಿರುವ ಉತ್ತರ’’ ಅಂದರು.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News