×
Ad

ಪಾಕ್ ಒಪ್ಪಿಗೆ: ಭಾರತೀಯ ಅಧಿಕಾರಿಗಳಿಂದ ಇಂದು ಜಾಧವ್ ಭೇಟಿ?

Update: 2019-08-02 09:19 IST

ದಿಲ್ಲಿ/ ಇಸ್ಲಾಮಾಬಾದ್, ಆ.2: ಭಾರತೀಯ ಪ್ರಜೆ ಕುಲಭೂಷಣ್ ಜಾಧವ್, ಭಾರತೀಯ ಅಧಿಕಾರಿಗಳನ್ನು ಭೇಟಿ ಮಾಡಲು ಕೊನೆಗೂ ಪಾಕಿಸ್ತಾನ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸರ್ಕಾರ ದೃಢಪಡಿಸಿದೆ. ಆದರೆ ಈ ಸಂಬಂಧ ಭಾರತದ ಪ್ರತಿಕ್ರಿಯೆಯನ್ನು ಪಾಕಿಸ್ತಾನ ಎದುರು ನೋಡುತ್ತಿದೆ. ಭಾರತದ ಅಧಿಕಾರಿಗಳು ಶುಕ್ರವಾರ ಅಪರಾಹ್ನ 3:30ಕ್ಕೆ ಜಾಧವ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಿದೆ. ಪಾಕಿಸ್ತಾನದ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತ ಸ್ಪಷ್ಟಪಡಿಸಿದೆ.

ಆದಾಗ್ಯೂ ಜಾಧವ್ ಅವರ ಜತೆ ಖಾಸಗಿಯಾಗಿ ಮಾತನಾಡಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ. ಜಾಧವ್ ಭೇಟಿಗೆ ಮೂರು ಷರತ್ತುಗಳನ್ನು ಪಾಕಿಸ್ತಾನ ವಿಧಿಸಿದೆ. ಮೊದಲನೆಯದಾಗಿ ಭೇಟಿಯಾಗುವ ಕೊಠಡಿಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಹಾಜರಿರುತ್ತಾರೆ. ಎರಡನೆಯದಾಗಿ ಕೊಠಡಿಯಲ್ಲಿ ಸಿಸಿಟಿವಿ ಅಳವಡಿಸಲಾಗುತ್ತದೆ ಹಾಗೂ ಕೊನೆಯದಾಗಿ, ಚರ್ಚೆಯ ಧ್ವನಿಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಅಂದರೆ ಜಾಧವ್ ಹಾಗೂ ಭಾರತೀಯ ಅಧಿಕಾರಿಗಳ ನಡುವಿನ ಸಂಭಾಷಣೆಯನ್ನು ಪಾಕಿಸ್ತಾನ ಆಲಿಸಲು ಸಾಧ್ಯವಾಗುತ್ತದೆ. ಇದು ಸಾರ್ವತ್ರಿಕ ರೂಢಿಯಾಗಿದ್ದು, ಭಾರತದ ನಿಯಮಗಳಿಗೆ ಅನುಸಾರವಾಗಿದೆ ಎನ್ನುವುದು ಪಾಕಿಸ್ತಾನದ ಅಭಿಮತ.

ಈ ಷರತ್ತುಗಳಿಗೆ ಭಾರತ ಒಪ್ಪಿಕೊಳ್ಳುತ್ತದೆಯೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. "ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಸ್ತಾವವನ್ನು ನಾವು ಪರಿಶೀಲಿಸುತ್ತಿದ್ದೇವೆ. ರಾಜತಾಂತ್ರಿಕ ವಿಧಾನದ ಮೂಲಕ ನಾವು ಪಾಕ್ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News